ಬೆಂಗಳೂರು : ದೇಶದ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ವಿಚಾರವೆಂದ್ರೆ ಕುಟುಂಬ ರಾಜಕಾರಣ… ಪ್ರಧಾನಿ ಮೋದಿ ಹೊದಲ್ಲಿ ಬಂದಲೆಲ್ಲ ಕುಟುಂಬ ರಾಜಕಾರಣವನ್ನ ಕಟುವಾಗಿ ಟೀಕಿಸುತ್ತಾ ಬಂದಿದ್ದಾರೆ. ಕುಟುಂಬ ರಾಜಕಾರಣದಿಂದ ದೇಶದ ಪ್ರಗತಿ ಕುಂಠಿತವಾಗುತ್ತಿದೆ ಎಂದೆಲ್ಲ ಆರೋಪಿಸುತ್ತಾ ಬಂದಿದ್ದಾರೆ. ಆದ್ರೆ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಇದಕ್ಕೆ ವಿರುದ್ದವಾಗಿ ವರ್ತಿಸುತ್ತಿದೆ. ಕಾಂಗ್ರೆಸ್​ ಹಾಗೂ ದೇಶದ ಬಹುತೇಕ ಪ್ರಾದೇಶಿಕ ಪಕ್ಷಗಳ ಕುಟುಂಬ ರಾಜಕಾರಣವನ್ನ ಟೀಕಿಸುವ ಕಮಲ ಪಡೆ ಕರ್ನಾಟದಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ.. ಈ ಭಾರಿ ಲೋಕಸಭೆ ಚುನಾವಣೆಯಲ್ಲಿ ಇದರ ಸದ್ದು ಹೆಚ್ಚಾಗಿ ಕೇಳಬರುತ್ತಿದೆ.

ಮಾಜಿ ಸಿಎಂ ಯಡಿಯೂರಪ್ಪನವರ ಕಪಿಮುಷ್ಠಿಯಲ್ಲಿ ರಾಜ್ಯ ಬಿಜೆಪಿ ಸಿಲುಕಿದೆ ಎಂದು ವಿಪಕ್ಷಗಳಲ್ಲ ಸ್ವತಃ ಕಮಲ ನಾಯಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಎಸ್​ವೈ ಅವರ ದೊಡ್ಡ ಮಗ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಇನ್ನೊಬ್ಬ ಮಗ ವಿಜಯೇಂದ್ರ, ಶಾಸಕ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಇದು ಬಿಜೆಪಿಯಲ್ಲಿನ ಅನೇಕ ನಾಯಕರನ್ನ ಕೆರಳುವಂತೆ ಮಾಡಿದೆ. ಇಷ್ಟೆಲ್ಲ ಸಾಲದಕ್ಕೆ ಇದೀಗ ಈ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ದಳಪತಿಗಳ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಕೂಡ ಬಿಜೆಪಿ ಬಹುತೇಕ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮಾಜಿ ಡಿಸಿಎಂ ಹಾಗೂ ಪಕ್ಷದ ಹುರಿಯಾಳು ಈಶ್ವರಪ್ಪನವರಂತು ಇದೀಗ ಬಹಿರಂಗ ಸಮರ ಸಾರಿದ್ದಾರೆ. ಬಿಎಸ್​ವೈ ಸುಪುತ್ರ ರಾಘವೇಂದ್ರ ವಿರುದ್ಧ ತೊಡೆ ತಟ್ಟಿದ್ದಾರೆ. ಶಿವಮೊಗ್ಗದಲ್ಲಿ ರಾಘವೇಂದ್ರ ವಿರುದ್ಧ ಪಕ್ಷೇತರಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದಾರೆ. ಅಷ್ಟೆ ಅಲ್ಲ ಬ್ರಹ್ಮ ಬಂದು ಹೇಳಿದ್ರೂ ಇಟ್ಟ ಹೆಜ್ಜೆಯನ್ನ ಹಿಂದಕ್ಕೆ ಸರಿಯೋ ಮಾತೆ ಇಲ್ಲ ಎಂದು ಹೇಳುತ್ತಿದ್ದಾರೆ. ಆದ್ರೆ ಅವರು ಈ ರೀತಿ ವರ್ತಿಸಲು ಅವರ ಮಗನ ಕಾಂತೇಶ್​ಗೆ ಹಾವೇರಿ ಟಿಕೆಟ್​ ಸಿಗದೆ ಇರೋದು ಕಾರಣವಾಗಿದೆ.

ಹೀಗಾಗಿ ಇದು ಕುಟುಂಬ ರಾಜಕಾರಣ ಅಲ್ವ ಎಂಬ ಪ್ರಶ್ನೆ ಸಾಮಾನ್ಯರು ಕೇಳುತ್ತಿದ್ದಾರೆ.. ಅವರು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತಗಾಗಿ ಟಿಕೆಟ್​ ಕೇಳಲಿಲ್ಲ.. ಬದಲಿಗೆ ತಮ್ಮ ಮಗನಿಗಾಗಿ ಟಿಕೆಟ್​ ಸಿಗದೆ ಇರುವುದರಿಂದ ಬಿಎಸ್​ವೈ ವಿರುದ್ಧ ಇದೀಗ ತೊಡೆತಟ್ಟಿರೋದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಅತ್ತ ಮಾಜಿ ಸಿಎಂ ಸದಾನಂದಗೌಡರು ಕೂಡ ಅಪ್ಪ-ಮಕ್ಕಳ ವಿರುದ್ಧ ಕಿಡಿಕಾರಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಪಕ್ಷದಲ್ಲಿ ಇದ್ದುಕೊಂಡೆ ಪಕ್ಷವನ್ನ ಶುದ್ಧಿಕರಣ ಮಾಡುತ್ತೇನೆ ಅಂತ ಹೇಳಿದರು. ಶಾಸಕ ಯತ್ನಾಳ್​ ಅಂತು ಆಗಾಗ ಬಿಎಸ್​ವೈ ಹಾಗೂ ಕುಟುಂಬಸ್ಥರ ವಿರುದ್ಧ ಬಹಿರಂಗವಾಗಿ ಕಿಡಿಕಾರುತ್ತಲೆ ಬಂದಿದ್ದಾರೆ. ಅಷ್ಟೆ ಅಲ್ಲ ಅವರ ವಿರುದ್ಧ ಭ್ರಷ್ಟಾಚಾರದ ಆರೋಪವನ್ನ ಮಾಡಿದ್ದಾರೆ.. ಇನ್ನೂ ಇವರೆಲ್ಲ ಇಷ್ಟೆಲ್ಲ ಆರೋಪ ಮಾಡುತ್ತಿದ್ದರು ಶಿಸ್ತಿನ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಇರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಇದು ಬಿಜೆಪಿ ಕಥೆಯಾದ್ರೆ ಅತ್ತ ಕಾಂಗ್ರೆಸ್​ನದ್ದು ಇನ್ನೋಂದು ಕಥೆ.. ಈ ಭಾರಿ ಲೋಕಸಭೆ ಅಖಾಡಕ್ಕೆ ಕಾಂಗ್ರೆಸ್​ ಸಚಿವರ ಹಾಗೂ ಶಾಸಕರ ಪತ್ನಿ, ಅಳಿಯ, ಸೊಸೆ, ಮಕ್ಕಳಿಗೆ ಮಣೆ ಹಾಕಿದೆ. 28 ಕ್ಷೇತ್ರದಲ್ಲಿ 10ಕ್ಕಿಂತ ಹೆಚ್ಚು ಕ್ಷೇತ್ರದಲ್ಲೇ ಇವರಿಗೆ ಟಿಕೆಟ್​ ನೀಡಲಾಗಿದೆ.. ಇದು ಕುಟುಂಬ ರಾಜಕಾರಣದ ಪರಮಾವಧಿ ಎಂದು ಟೀಕಾಕಾರರು ಟೀಕಿಸುತ್ತಿದ್ದರೆ, ಕಾಂಗ್ರೆಸ್​ ಲೆಕ್ಕಾಚಾರವೇ ಬೇರೆ ಇದೆ. ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ​ ಖರ್ಗೆಯವರ ಕ್ಷೇತ್ರ ಕಲಬುರಗಿಯಲ್ಲೇ ಅವರ ಅಳಿಯ ರಾಧಾಕೃಷ್ಣಗೆ ಮಣೆ ಹಾಕಲಾಗಿದೆ.. ಅಷ್ಟೆ ಅಲ್ಲ ಸಚಿವ ಖಂಡ್ರೆಯವರ ಮಗ 26 ವರ್ಷದ ಸಾಗರ್​ ಖಂಡ್ರೆಗೆ ಬೀದರ್​ನಿಂದ ಟಿಕೆಟ್​ ನೀಡಲಾಗಿದೆ. ಇದನ್ನ ಡಿಸಿಎಂ ಡಿಕೆಶಿ ಕೂಡ ಸ್ಮರಿಸಿಕೊಂಡಿದ್ದಾರೆ. ಕಾರ್ಯಕರ್ತರು ಟಿಕೆಟ್​ ಪಡೆಯಲು ಮುಂದೆ ಬರದಿದ್ದಾಗ ಅನಿವಾರ್ಯವಾಗಿ ಸಚಿವರ, ಶಾಸಕರ ಕುಟುಂಬ ಸದಸ್ಯರಿಗೆ ಟಿಕೆಟ್​ ನೀಡಲಾಯ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

ಆದ್ರೆ ಅವರ ಈ ಸಮರ್ಥನೆ, ಚುನಾವಣೆ ಎದುರಿಸಲು ಕಾಂಗ್ರೆಸ್​ನಲ್ಲಿ ಯಾವೊಬ್ಬ ಸಮರ್ಥ ನಾಯಕ ಇಲ್ವ ಎಂಬ ಪ್ರಶ್ನೆ ಎಳುವಂತೆ ಮಾಡಿದೆ. ಇನ್ನೂ ಅತ್ತ ಜೆಡಿಎಸ್​ ಸ್ಪರ್ಧಿಸುತ್ತಿರೋದು ಮೂರರಲ್ಲಿ.. ಈ ಪೈಕಿ 2 ರಲ್ಲಿ ದೇವೇಗೌಡರ ಕುಟುಂಬದ ಸದಸ್ಯರು ಸ್ಪರ್ಧೆ ಖಚಿತ… ಇದರ ಮಧ್ಯೆ ದೇವೇಗೌಡರ ಅಳಿಯ ವೈದ್ಯ ವೃತ್ತಿಯಿಂದ ಇತ್ತೀಚೇಗೆ ನಿವೃತ್ತಿ ಪಡೆದ ಹೆಸರಾಂತ ವೈದ್ಯ ಡಾ. ಸಿ ಎನ್ ಮಂಜುನಾಥ್ ಅವರು​ ಕೂಡ ಈ ಭಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.. ಬೆಂಗಳೂರು ಗ್ರಾಮಾಂತರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.. ಇವರ ಪರ ಸ್ವತಃ ಪ್ರಧಾನಿ ಮೋದಿಯೇ ಮತಯಾಚನೆ ಮಾಡಿದ್ದರು. ಮುಂದೇಯೋ ಅವರ ಪರ ಪ್ರಚಾರಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ.

ಹೀಗಿರುವಾಗ ಪ್ರಧಾನಿ ಮೋದಿಯ ಕುಟುಂಬ ರಾಜಕಾರಣದ ವಿರುದ್ಧ ಸಮರ ಏನಾಯ್ತು ಎಂಬ ಪ್ರಶ್ನೆಗಳು ಇದೀಗ ಜನರಲ್ಲಿ ಮೂಡತೊಡಗಿದೆ.

ಒಟ್ಟಾರೆ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರುತ್ತ ಬಂದಿರುವ ಕಮಲ ಕಲಿಗಳಿಗೆ ಕರ್ನಾಟಕ ರಾಜಕಾರಣ ಮಾತ್ರ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ.. ಹೀಗಾಗಿಯೇ ಬಿಎಸ್​ವೈ ವಿರುದ್ಧ ತೊಡೆ ತಟ್ಟುತ್ತಿರುವ ನಾಯಕರ ವಿರುದ್ಧ ಕ್ರಮವೂ ತೆಗೆದುಕೊಳ್ಳದೆ ಅವರ ಹೇಳಿಕೆಗೆ ಮೂಗುದಾರವೂ ಹಾಕಲಾಗದೆ ಇಂಗು ತಿಂದ ಮಂಗನಂತೆ ಪರಿತಪ್ಪಿಸುತ್ತಿದೆ ಎಂದು ವಿಶ್ಲೇಷಣೆ ಕೇಳಿಬರುತ್ತಿದೆ.

Leave a Reply

Your email address will not be published. Required fields are marked *