ಬೆಂಗಳೂರು : ಸಂಸದೆ ಸುಮಲತಾ ಅವರ ಇಂದಿನ ಸ್ಥಿತಿ ಯಾರಿಗೂ ಬೇಡ.. ಮೋದಿ ಮತ್ತು ಅಮಿತ್ ಶಾ ಜೊತೆ ಫೋಟೋ ತೆಗೆಸಿಕೊಂಡು ಬೀಗುತ್ತಿದ್ದ ಅಕ್ಕನಿಗೆ ಈಗ ಬಿಜೆಪಿ ನಾಯಕರೆಲ್ಲ ಪಾಠ ಮಾಡುತ್ತಿದ್ದಾರೆ. ಅವರ ಸ್ವಾಭಿಮಾನದ ಬುಡಕ್ಕೆ ಪೆಟ್ಟು ಬಿದ್ದಿದೆ.

ಸಂಸದೆ ಸುಮಲತಾ ತಾಳ್ಮೆಯಿಂದಿದ್ದರೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರೆಯಲಿದೆ ಎಂದು ಪಾಠ ಮಾಡುತ್ತಿರುವವರು ಬಿ.ಎಸ್. ಯಡಿಯೂರಪ್ಪ. ಬಿಜೆಪಿ ತಮಗೆ ಅವಮಾನ ಮಾಡಿದಾಗ ತಮ್ಮದೇ ಪಕ್ಷ ಕಟ್ಟಿಕೊಂಡ ಯಡಿಯೂರಪ್ಪ ಈಗ ಪಾಠ ಮಾಡುವ ಗುರುವಾಗಿ ಬದಲಾಗಿದ್ದಾರೆ. ಹಾಗೆ ಮಂಡ್ಯದ ಸ್ವಾಭಿಮಾನದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮಂಡ್ಯದ ಜನರ ಪ್ರೀತಿ ಗಳಿಸಿದ ಸುಮಕ್ಕ ಬೇರೆಯವರಿಂದ ಪಾಠ ಹೇಳಿಸಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.

ಬಿಜೆಪಿ ಸಹವಾಸ ಅವರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಮಂಡ್ಯದಿಂದ ಕುಮಾರಸ್ವಾಮಿಗೆ ಟಿಕೆಟ್‌ ಸಿಕ್ಕ ಹಿನ್ನೆಲೆ ಸಹಜವಾಗಿ ಸಂಸದೆ ಸುಮಲತಾಗೆ ಬೇಸರ ಆಗಿರುತ್ತೆ, ಸುಮಲತಾ ಅವರು ಸಮಾಧಾನದಿಂದ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುವ ಭರವಸೆಯಿದೆ ಎಂದಿದ್ದಾರೆ ಯಡಿಯೂರಪ್ಪ.

ಈಗ ಸುಮಕ್ಕ ಬಿಜೆಪಿ ಸೂಕ್ತ ಸ್ಥಾನ ಮಾನ ನೀಡುವುದಕ್ಕಾಗಿ ಕಾಯಬೇಕು. ಆದರೆ ಈಗಾಗಲೇ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಮೋದಿ ಶಾ ಅವರ ಹೊಸ ಭರವಸೆಯನ್ನು ನಂಬುವುದು ಹೇಗೆ ಎಂಬುದು ಅವರ ಮುಂದಿರುವ ಪ್ರಶ್ನೆ. ಸದ್ಯಕ್ಕಂತೂ ಸುಮಲತಾ ಮುಂದಿರುವುದು ಕಗ್ಗತ್ತಲೆ. ದಾರಿ ಕಾಣದಾಗಿದೆ ರಾಘವೇಂದ್ರನೇ ಎನ್ನುವ ಸ್ಥಿತಿ. ಆದರೆ ಅವರನ್ನು ರಾಘವೇಂದ್ರ ಅವರಾಗಲೀ, ಯಡಿಯೂರಪ್ಪ ಅವರಾಗಲಿ ಕಾಯುವ ಸ್ಥಿತಿ ಇಲ್ಲ.

ಬೆಳಗಾವಿಯಲ್ಲಿ ಮಾತನಾಡಿದ ಅವರು ಸುಮಲತಾ ಅವರಿಗೆ ತಾಳ್ಮೆಯ ಪಾಠ ಮಾಡಿದರು. ಹಾಗೆ ಜಗದೀಶ್ ಶೆಟ್ಟರ್ ಗೆಲ್ಲಿಸುವ ಸಂಬಂಧ ಸಭೆ ಮಾಡಿದ್ದೇವೆ. ಎಲ್ಲರೂ ಸೇರಿ ಶೆಟ್ಟರ್ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು ಎಂದರು. ರಾಜ್ಯದ 28 ಕ್ಷೇತ್ರಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಗೆಲ್ಲುತ್ತದೆ. ಎಲ್ಲಿಯೂ ಅಸಮಾಧಾನ ಆತಂಕ ಏನೂ ಇಲ್ಲ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಪ್ರಚಾರಕ್ಕಾಗಿ ಎಲ್ಲಾ ಸ್ಥಳಗಳಿಗೆ ತೆರಳಲು ಒಪ್ಪಿಕೊಂಡಿದ್ದಾರೆ ಎಂದು ಯಡಿಯೂರಪ್ಪಹೇಳಿದರು.

ಜಗದೀಶ್ ಶೆಟ್ಟರ್ ಅವರು ತುಂಬಾ ಒಳ್ಳೆಯ ನಾಯಕರಾಗಿದ್ದರಿಂದ ಅವರನ್ನು ನಾವು ಒತ್ತಾಯಿಸಿ ವಾಪಸ್ ಬಿಜೆಪಿಗೆ ಕರೆಸಿಕೊಂಡಿದ್ದೇವೆ ಎಂದೂ ಯಡಿಯೂರಪ್ಪ ತಿಳಿಸಿದರು.

Leave a Reply

Your email address will not be published. Required fields are marked *

You missed