ಬೆಂಗಳೂರು : ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ರೀತಿ ಚುನಾವಣೆ ನಡೆಸುವುದಕ್ಕಿಂತ ಹಣ ಹಂಚುವುದನ್ನು ಕಾನೂನು ಬದ್ಧಗೊಳಿಸಿ ಎಂದು ಅವರು ಒತ್ತಾಯಿಸಿದ್ದಾರೆ,

ಕಾಂಗ್ರೆಸ್ ನಾಯಕರು ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಗಿಫ್ಟ್ ಕಾರ್ಡ್​​ಗಳನ್ನು ಹಂಚಿ ಆಮಿಷ ವೊಡ್ಡುತ್ತಿದ್ದಾರೆ, ಆದರೆ ಚುನಾವಣಾ ಆಯೋಗ ಏನನ್ನೂ ಮಾಡುತ್ತಿಲ್ಲ. ಹೀಗೆ ಚುನಾವಣೆ ನಡೆಸುವುದಿದ್ದರೆ ಇದನ್ನು ಕಾನೂನು ಬದ್ಧಗೊಳಿಸುವುದು ಒಳ್ಳೆಯದು ಎಂದು ಅವರು ವಾಗ್ದಾಳಿ ನಡೆಸಿದರು.

ಕೇತಗಾನಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರಿಗೆ ಆಮಿಷವೊಡ್ಡುವ ಕಾಂಗ್ರೆಸ್ ನಾಯಕರ ವಿರುದ್ಧ ಈವರೆಗೂ ಕ್ರಮ ಕೈಗೊಳ್ಳದ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ರಾತ್ರಿಯಿಂದಲೂ ಗಿಫ್ಟ್ ಕಾರ್ಡ್ ಹಂಚುತ್ತಿದ್ದಾರೆ. 4 ಸಾವಿರದಿಂದ 10 ಸಾವಿರದ ಗಿಫ್ಟ್ ಕಾರ್ಡ್ ಹಂಚಿಕೆ ಮಾಡಲಾಗುತ್ತಿದೆ. ಚುನಾವಣಾ ಆಯೋಗ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಏನೇ ದೂರು ಕೊಟ್ಟರೂ ಉಪಯೋಗ ಇಲ್ಲ. ಚುನಾವಣಾ ಆಯೋಗ ಅಸ್ತಿತ್ವದಲ್ಲಿ ಇದೆಯಾ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.ಪಾರದರ್ಶಕ, ಮುಕ್ತ ಚುನಾವಣೆ ನಡೆಸುವಲ್ಲಿ ಚುನಾವಣೆ ಆಯೋಗ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ರಾಮನಗರದ ನೆಲಮಲೆ ಗ್ರಾಮದಲ್ಲಿ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಕಾರ್ಡ್​​ನಲ್ಲಿ ಮುದ್ರಿಸಿ ಬೆಳ್ಳಿ ಬಟ್ಟಲು, ಕುಂಕುಮ ಹಾಗೂ ಅಕ್ಷತೆ ಇಟ್ಟು ಉಡುಗೊರೆಗಳನ್ನು ನೀಡಲಾಗುತ್ತಿತ್ತು. ಇದನ್ನು ಪ್ರಶ್ನಿಸಿದ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *