ಬೆಂಗಳೂರು : ಕಾಂಗ್ರೆಸ್ ಕೋಲಾರ ಬಂಡಾಯ ಬಗ್ಗೆ ನಿನ್ನೆ ನಡೆದಿದ್ದು ಸಂಧಾನ ಸಭೆ. ಈ ಸಂಧಾನ ಯಶಸ್ವಿಯಾಯಿತೆ ಇಲ್ಲವೆ ಎಂದು ಹೇಳುವುದು ಕಷ್ಟ,ಆದರೆ ಸಚಿವ ಕೆ ಹೆಚ್ ಮುನಿಯಪ್ಪ ಸ್ವಲ್ಪ ಮಟ್ಟಿಗೆ ತಣ್ಣಗಾಗಿರುವುದು ಮಾತ್ರ ನಿಜ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಂಧಾನ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಚಿವ ಡಾ.ಎಂ. ಸಿ. ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್, ಕೊತ್ತನೂರು ಮಂಜುನಾಥ್ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.

ಈ ಸಭೆಯಲ್ಲೂ ಮುನಿಯಪ್ಪನವರದು ಒಂದೇ ಪಟ್ಟು ನನ್ನ ಕುಟುಂಬದವರಿಗೆ ಟಿಕೆಟ್ ಬೇಕು.
ಕೊನೆಗೆ ಅವರು ಒಂದು ನಿರ್ಧಾರಕ್ಕೆ ಬಂದರು. ನನ್ನ ಕುಟುಂಬಕ್ಕೆ ಟಿಕೆಟ್ ನೀಡದಿದ್ದರೆ ನನ್ನ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಿ. ಇದರೊಂದಿಗೆ ತಮ್ಮ ಅಳಿಯ ಚಿಕ್ಕ ಪೆದ್ದಣ್ಣನವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯದಿಂದ ಹಿಂದೆ ಸರಿದಂತೆ ಕಾಣುತ್ತಿದೆ.

ಚಿಕ್ಕ ಪೆದ್ದಣ್ಣನವರಿಗೆ ಟಿಕೆಟ್ ನೀಡುವುದರ ವಿರುದ್ಧ ಉನ್ನತ ಶಿಕ್ಷಣ ಸಚಿವ ಡಾ.ಎಂ. ಸಿ. ಸುಧಾಕರ್ ಸೇರಿದಂತೆ ರಮೇಶ್ ಕುಮಾರ್ ಬಣದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಐವರು ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡುವ ಹಂತಕ್ಕೂ ಹೋಗಿದ್ದರು.. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕೋಲಾರ ನಾಯಕರ ಜೊತೆ ಸಂಧಾನ ಸಭೆ ನಡೆಸಿದ್ದಾರೆ. ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಟಿಕೆಟ್ ವಿಚಾರದಲ್ಲಿ ಯಾವುದೇ ವ್ಯಕ್ತಿಯ ಹೆಸರು ಚರ್ಚೆ ಆಗಿಲ್ಲ, ಶಾಸಕರ ವೈಯಕ್ತಿ ಅಭಿಪ್ರಾಯವನ್ನು ಸಿಎಂ, ಡಿಸಿಎಂ ಹೇಳಿದ್ದಾರೆ. ಹೈಕಮಾಂಡ್ ಹೇಳಿದ್ದೆ ಪೈನಲ್ ಎಂದು ಶಾಸಕರು ಹೇಳಿದ್ದಾರೆ. ಅಲ್ಲದೇ ಬಹಿರಂಗ ಹೇಳಿಕೆ ನೀಡಬೇಡಿ ಎಂದು ಶಾಸಕರುಗಳಿಗೆ ಸಿಎಂ, ಡಿಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, ರಾಜೀನಾಮೆ ನೀಡಲು ಮುಂದಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು. ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸರಿಪಡಿಸುವುದಾಗಿ ತಿಳಿಸಿದ್ದಾರೆ. ಸಿಎಂ, ಡಿಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದರು.

ಸಭೆಯ ನಂತರ ಮಾತನಾಡಿದ ಸಚಿವ ಮುನಿಯಪ್ಪ,ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 40 ವರ್ಷಗಳಿಂದ ರಾಜಕೀಯ ಮಾಡಿದ್ದೇನೆ, 10 ವರ್ಷ ಕೇಂದ್ರದಲ್ಲಿ ಸಚಿವನಾಗಿ ಕೆಲಸ ಮಾಡಿದೆ. ಕಾಂಗ್ರೆಸ್ ನ ಹಲವು ಕುಟುಂಬದವರಿಗೆ ಟಿಕೆಟ್ ನೀಡಿರುವುದರಿಂದ ಸಹಜವಾಗಿ ನಾನೂ, ನನ್ನ ಕುಟುಂಬಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ದೊರೆಯುವ ಆಶಾಭಾವನೆಯಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *