ಬೆಂಗಳೂರು : ಸಿದ್ದರಾಮಯ್ಯನವರ ಗರ್ವ ಭಂಗ ಮಾಡಬೇಕು. ಈ ಗುರಿ ಸಾಧಿಸಲು ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಇಂದು ಕರೆ ನೀಡಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಎರಡೂ ಪಕ್ಷಗಳ ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಗೌಡರು ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದರು.

ಕಳೆದ ಚುನಾವಣೆಯಲ್ಲಿ ನನ್ನನ್ನು ತುಮಕೂರಿನಲ್ಲಿ ಸೋಲಿಸಲಾಯಿತು. ಈ ಸೋಲಿಗೆ ಯಾರು ಕಾರಣ ಎಂಬುದು ನನಗೆ ಗೊತ್ತು ಎಂದು ಹೇಳಿದ ದೇವೇಗೌಡ ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಭಾರಿ ಹಣ ಖರ್ಚು ಮಾಡಲಿದೆ. ದೇಶದ ಬೇರೆ ರಾಜ್ಯಗಳಿಗೂ ಇಲ್ಲಿಂದಲೇ ಹಣ ಹೋಗಲಿದೆ ಎಂದು ಆರೋಪಿಸಿದರು.

ಈ ಸಮನ್ವಯ ಸಮಿತಿ ಸಭೆಯ ಮೂಲಕ ಜೆಡಿಎಸ್ ಬಿಜೆಪಿಯನ್ನೇ ನಿಯಂತ್ರಣಕ್ಕೆ ತೆಗೆದುಕೊಂಡಂತೆ ಕಂಡು ಬರುತ್ತಿತ್ತು. ಎಲ್ಲರ ಭಾಷಣಗಳನ್ನು ಗೌಡರ ಶ್ಲಾಘನೆ.

ಈ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಹೆಚ್. ಡಿ. ಕುಮಾರಸ್ವಾಮಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, 28 ಕ್ಷೇತ್ರ ಗೆಲ್ಲೋದು ನಮ್ಮ ಗುರಿಯಾಗಿದೆ. ಪರಸ್ಪರ ಮಾತನಾಡಿಕೊಂಡು ಕೆಲಸ ಮಾಡಬೇಕು ಎಂದರು.

ಸಭೆ ಬಳಿಕ ಮಾತನಾಡಿದ ಹೆಚ್. ಡಿ. ದೇವೇಗೌಡರು, ಮೊದಲ ಬಾರಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ನಾವು ಕರ್ನಾಟಕದ ಜನತೆಗೆ ಒಂದು ಉತ್ತಮ ಸಂದೇಶವನ್ನು ನೀಡಿದ್ದೇವೆ – ಕಾಂಗ್ರೆಸ್ ವಿರುದ್ಧ ಹೋರಾಡಿ, ಅದನ್ನು ಸೋಲಿಸುತ್ತೇವೆ ಮತ್ತು ಎಲ್ಲಾ 28 ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಮೊದಲ ಬಾರಿಗೆ ದೇವೇಗೌಡರು ಬಿಜೆಪಿಯನ್ನು ಬೆಂಬಲಿಸಿ ಎನ್‌ಡಿಎ ಸೇರಿದ್ದಾರೆ. ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಹಲವು ಕಡೆ ಪ್ರಬಲವಾಗಿದೆ ಎಂದು ನಂಬಿದ್ದೇನೆ. ಹಾಗಾಗಿ ಅವರ ಮತಗಳನ್ನು ನಾವು ಪಡೆಯುತ್ತೇವೆ. ಎಲ್ಲಾ 28 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಪ್ರಧಾನಿ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವ ಭರವಸೆ ಇದೆ ಎಂದು ಹೇಳಿದರು.

ಬಿ.ವೈ. ವಿಜಯೇಂದ್ರ ಮಾತನಾಡಿ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಆಶೀರ್ವಾದ ನಮಗೆ ಆನೆ ಬಲ ತಂದಿದೆ. ಈ ಸಭೆ ಬಹಳ ಹಿಂದೆಯೇ ಆಗಬೇಕಾಗಿತ್ತು. ಈ ಸಮ್ಮಿಲನ ಸುವರ್ಣಾಕ್ಷರದಲ್ಲಿ ಬರೆದಿಡುವ ಫಲಿತಾಂಶ ಆಗಲಿದೆ. ಹಿಂದೆಯೂ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಹೊಂದಾಣಿಕೆ ಆಗಿತ್ತು. ಆದರೆ ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಅಂದಿನ ಕಾಲಘಟ್ಟದಲ್ಲಿ ದೇವೇಗೌಡರ ಸಮ್ಮತಿ‌ ಇರಲಿಲ್ಲ ಎಂಬುದೂ ಗೊತ್ತಿರುವ ವಿಚಾರ. ಇದೀಗ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ದೇವೇಗೌಡರು ಆಶೀರ್ವಾದ ಮಾಡಿರುವುದು ಆನೆ ಬಲ ತಂದಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಧಾನಿ ಮೋದಿ ಮತ್ತು ಎಚ್.ಡಿ. ದೇವೇಗೌಡರನ್ನು ಶ್ಲಾಘಿಸಿದರು..

Leave a Reply

Your email address will not be published. Required fields are marked *