ಬೆಂಗಳೂರು : ಕಾಂಗ್ರೆಸ್ ಪಕ್ಷ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಚೊಂಬು ಪ್ರಚಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಇದು ಜನ ಸಾಮಾನ್ಯರನ್ನು ಮುಟ್ಟುತ್ತಿರುವುದು ವಿಶೇಷ.

ಕೇಂದ್ರ ಸರ್ಕಾರ ಕರ್ನಾಟಕಕ್ಕೇ ಕೊಟ್ಟಿದ್ದು ಖಾಲಿ ಚೊಂಬು ಎನ್ನುವುದು ನಿಜ ಎಂದು ಕನ್ನಡಿಗರಿಗೆ ಅನ್ನಿಸುತ್ತಿದೆ.
ಯಾವುದೇ ಚುನಾವಣೆಯಲ್ಲಿ ಚುನಾವಣಾ ಪ್ರಚಾರಕ್ಕೆ ಎತ್ತಿಕೊಳ್ಳುವ ವಿಚಾರ ಬಹಳ ಮುಖ್ಯ. ಅದು ಜನರ ಮನಸ್ಸನ್ನು ತಟ್ಟಬೇಕು. ಅದು ಸತ್ಯ ಏಂದು ಅನ್ನಿಸಬೇಕು. ಕಳೆದ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಕರ್ನಾಟಕದ ಜನ ಲಂಚದಿಂದ ನಲುಗಿ ಹೋಗಿದ್ದರು. ಗುತ್ತಿದೆರಾರರು ಕೊಡಬೇಕಾದ ಕಮಿಷನ್ ಪ್ರತಿಶತ ೪೦ ದಾಟಿದ್ದು ಸುಳ್ಳಾಗಿರಲಿಲ್ಲ. ಹೀಗಾಗಿ ಈ ಪ್ರಚಾರ ಕಾಂಗ್ರೆಸ್ ಗೆ ವರದಾನವಾಯಿತು.

ಈಗ ಲೋಕಸಭಾ ಚುನಾವಣೆಯಲ್ಲಿ ಚೊಂಬು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡುತ್ತದೆ, ಯಾಕೆಂದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಏನು ಮಾಡಿಲ್ಲ ಎಂಬುದು ಸಾಮಾನ್ಯ ಜನರ ನಂಬಿಕೆ. ಈ ಪ್ರಚಾರ ಇದನ್ನು ಪುಷ್ಟೀಕರಿಸುವುದರಿಂದ ಜನರಿಗೆ ಹತ್ತಿರವಾಗಬಹುದು.

ಇಂದು ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಾರ್ವಜನಿಕ ರೋಡ್ ಶೋ ನಲ್ಲಿ ಕೇಂದ್ರ ಸರ್ಕಾರದ ಖಾಲಿ ಚೊಂಬು ಜೋರು ಸದ್ದು ಮಾಡಿತು. ಮುಖ್ಯಮಂತ್ರಿಗಳು ಸಾರ್ವಜನಿಕರಿಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಜನತೆ ಚೊಂಬು ಚೊಂಬು ಎಂದು ಕೂಗಿದರು. ಇದು ಚೊಂಬಿನ ಪ್ರಚಾರ ಜನರನ್ನು ತಟ್ಟಿದೆ ಎಂಬುದನ್ನು ಸಾಬೀತುಪಡಿಸುವಂತಿತ್ತು..

ಮೋದಿಯವರು ನಿಮ್ಮ ಅಕೌಂಟಿಗೆ 15 ಲಕ್ಷ ಹಾಕ್ತೀನಿ ಎಂದಿದ್ದರಲ್ಲಾ , ಎಷ್ಟು ಹಣ ಬಂತು ಎಂದು ಕೇಳಿದರು. ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದಿದ್ದರಲ್ಲಾ , ಎಷ್ಟು ಜನರಿಗೆ ನೇಮಕಾತಿ ಆದೇಶ ಬಂತು, ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರಲ್ಲಾ, ಎಷ್ಟು ರೈತರಿಗೆ ದುಪ್ಪಟ್ಟು ಹಣ ಬಂತು ಎಂದು ಕೇಳಿದರು. ಜನತೆ ಚೊಂಬು ಎಂದು ಕೂಗಿದರು. ಹೀಗಾಗಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಕೈಗೆ ಅವರ ಖಾಲಿಚೊಂಬನ್ನು ಅವರಿಗೇ ವಾಪಾಸ್ ಕೊಡಿ ಎಂದು ಕರೆ ನೀಡಿದರು.

ಮೋದಿ ಕೊಟ್ಟ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ರೈಲು ಬಿಟ್ಟಿದ್ದಾರೆ. ಖಾಲಿ ಚೊಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದರೆ ರಾಜ್ಯದ ಪಾಲಿನ ತೆರಿಗೆ ಹಣ ವಾಪಾಸ್ ಯಾಕೆ ಬರ್ಲಿಲ್ಲ? ಬರಗಾಲದ ಅನುದಾನ ಏಕೆ ಬರಲಿಲ್ಲ? ಪ್ರವಾಹದ ವೇಳೆ ರಾಜ್ಯದ ಅನುದಾನ ಏಕೆ ಬರಲಿಲ್ಲ ಎಂದು ಸಿಎಂ ಪ್ರಶ್ನಿಸಿದರು.

ಮೋದಿಯವರ ಚೊಂಬು ನಿಮಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ರೆ, ರಾಜ್ಯದ ರೈತರ ಸಾಲ ಏಕೆ ಮನ್ನಾ ಮಾಡುತ್ತಿಲ್ಲ? ಮೋದಿಯವರ ಚೊಂಬು ನಿಮಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ರೆ, ಮೋದಿಯವರೇಕೆ ರಾಜ್ಯದ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿಲ್ಲ? ಮೋದಿಯವರ ಚೊಂಬು ಅತ್ಯಂತ ಶ್ರೀಮಂತರ, ಉದ್ಯಮಿಗಳ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಇದು ಅತೀ ಶ್ರೀಮಂತರ ಅಕ್ಷಯ ಪಾತ್ರೆ. ಭಾರತೀಯರ ಪಾಲಿಗೆ, ನಾಡಿನ ಜನರ ಪಾಲಿಗೆ ಖಾಲಿ ಚೊಂಬು ಅಷ್ಟೆ ಅಲ್ವಾ ದೇವೇಗೌಡರೇ ಎಂದು ಸಿ.ಎಂ ಪ್ರಶ್ನಿಸಿದರು

ಸಾಮಾನ್ಯ ಜನರು ಚೊಂಬನ್ನು ಚೊಂಬು ಎಂದು ಹೇಳಿದರೆ ದೇವೇಗೌಡರಿಗೆ ಮಾತ್ರ ಅದು ಅಕ್ಷಯ ಪಾತ್ರೆಯಂತೆ ಕಾಣುತ್ತಿರುವುದು ಸೋಜಿಗವನ್ನು ಉಂಟು ಮಾಡುವಂತಿತ್ತು.

Author

Leave a Reply

Your email address will not be published. Required fields are marked *