ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ವಾತಂತ್ರ್ಯ ಹೋರಾಟದಿಂದ ಇಂದಿನ ರಾಜಕೀಯ ಸ್ಥಿತಿವರೆಗಿನ ಪ್ರಯಾಣದ ವಿಶ್ಲೇಷಣಾತ್ಮಕ ಆತ್ಮಾವಲೋಕನ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಕೇವಲ ರಾಜಕೀಯ ಪಕ್ಷವಲ್ಲ. ಇದು ಒಂದು ಕಾಲಘಟ್ಟ. ಭಾರತದ ಸ್ವಾತಂತ್ರ್ಯ ಹೋರಾಟದ ರಾಜಕೀಯ ಪ್ರತಿಬಿಂಬ.
ಆದರೆ ಇಂದಿನ ರಾಜಕೀಯ ವಾಸ್ತವಿಕತೆಯಲ್ಲಿ ಕಾಂಗ್ರೆಸ್ ಎಂಬುದು, ತನ್ನದೇ ಇತಿಹಾಸದ ಎದುರು ನಿಂತು ಆತ್ಮಪರಿಶೀಲನೆ ಮಾಡಿಕೊಳ್ಳಬೇಕಾದ ಪಕ್ಷವಾಗಿಯೂ ಕಾಣುತ್ತದೆ. ಈ ಲೇಖನ ಕಾಂಗ್ರೆಸ್‌ನ ಐತಿಹಾಸಿಕ ಪಾತ್ರ, ಆಡಳಿತದ ಸಾಧನೆ–ವೈಫಲ್ಯಗಳು, ಮತ್ತು ಇಂದಿನ ಸ್ಥಿತಿಗತಿಯ ರಾಜಕೀಯ ವಿಶ್ಲೇಷಣೆ ಮಾಡುತ್ತದೆ.

ಸ್ವಾತಂತ್ರ್ಯ ಹೋರಾಟದ ರಾಜಕೀಯ ವೇದಿಕೆ

ಅಲನ್ ಆಕ್ಟೇವಿಯನ್ ಹ್ಯೂಮ್ (ಎ. ಒ.ಹ್ಯೂಮ್) ನೇತೃತ್ವದಲ್ಲಿ 1885ರ ಡಿಸೆಂಬರ್ 28ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಿದರು. ಆರಂಭದಲ್ಲಿ ಬ್ರಿಟಿಷ್ ಆಡಳಿತದ ಒಳಗೇ ಭಾರತೀಯರ ಧ್ವನಿಯನ್ನು ವ್ಯಕ್ತಪಡಿಸುವ ವೇದಿಕೆಯಾಗಿತ್ತು. ಆದರೆ ಕಾಲಕ್ರಮೇಣ ಅದು ರಾಷ್ಟ್ರವಾದಿ ಹೋರಾಟದ ಕೇಂದ್ರಬಿಂದು ಆಯಿತು. ದಾದಾಭಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ — ಈ ಹೆಸರುಗಳು ಕಾಂಗ್ರೆಸ್ ಇತಿಹಾಸವನ್ನು ರೂಪಿಸಿದ ರಾಜಕೀಯ-ನೈತಿಕ ಸ್ತಂಭಗಳು. ಮಹಾತ್ಮಾಗಾಂಧೀಜಿ ಇದರ ಮುಂದಾಳತ್ವ ವಹಿಸಿದ ಮೇಲೆ ಸ್ವಾತಂತ್ರ್ಯ ಸಂಗ್ರಾಮಕ್ಕೊಂದು ಹೊಸ ವೇಗ ದೊರಕಿತು. ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಎರಡು ಬಲವಾದ ಅಸ್ತ್ರಗಳಿನ್ನಿಟ್ಟುಕೊಂಡು ಸಮಾನ ಮನಸ್ಕ ನಾಯಕರು ಒಗ್ಗಟ್ಟಾಗಿ ನಡೆಸಿದ ಹೋರಾಟದ ಫಲವಾಗಿ ಭಾರತ ಬ್ರಿಟಿಷ ಆಳ್ವಿಕೆಯಿಂದ ಮುಕ್ತವಾಯಿತು. ಆದ್ದರಿಂದ ಕಾಂಗ್ರೆಸ್‌ನ ಶಕ್ತಿ ಅಂದರೆ ವಿಚಾರಧಾರೆ, ಸಂಘಟನೆ ಮತ್ತು ಜನಸಂಪರ್ಕದ ಸಂಯೋಜನೆ.

ಸ್ವಾತಂತ್ರ್ಯ ನಂತರ ಎದುರಿಸಿದ ಸವಾಲುಗಳು

1947 ನಂತರ ಕಾಂಗ್ರೆಸ್ ಎದುರಿಸಿದ ಸವಾಲು ರಾಜಕೀಯಕ್ಕಿಂತ ದೊಡ್ಡದು. ಒಂದೆಡೆ ಮಹಮ್ಮದ್ ಅಲಿ ಜಿನ್ನಾ ಭಾರತವನ್ನು ಇಬ್ಬಾಗಿಸಿ ಪಾಕಿಸ್ತಾನ ಎನ್ನುವ ಹೊಸ ರಾಷ್ಟ್ರ ಕಟ್ಟಿಕೊಂಡು ಈ ಮೂಲ ಬೇರಿನಿಂದ ಹೊರಬಿದ್ದಿದ್ದರು. ಇದರಿಂದಾಗಿ ಭಾರತ ಮತ್ತು ಪಾಕಿಸ್ತಾನಗಳ ಗಡಿಗಳಲ್ಲಿ ದೇಶಗಳನ್ನು ಆಯ್ದುಕೊಂಡು ಹೋಗುವವರು , ಬರುವವರ ನಿಯಂತ್ರಣ, ಆದು ತರುತ್ತಿದ್ದ ಕಾನೂನು ಮತ್ತು ಸುವ್ಯವಸ್ಥೆಯ ದೊಡ್ಡ ಸವಾಲಿತ್ತು. ಇನ್ನೊಂದೆಡೆ ದೇಶಗಳೆರಡೂ ಭಾಗವಾಗುವಾಗ ಪಾಕಿಸ್ತಾನದ ಪಾಲು ಕೊಟ್ಟ ಮೇಲೆ ಭಾರತದ ಖಜಾನೆ ಖಾಲಿಯಾಗಿತ್ತು. ದೇಶ ‘ಭಾರತ’ ಎನ್ನುವ ಹೆಸರೇನೊ ಬಂದಿತ್ತು. ಆದರೆ ಒಳಗಿನ ಸಣ್ಣ ಸಣ್ಣ ರಾಜ್ಯಗಳು, ರಾಜರುಗಳು ಈ ದೇಶದೊಳಗೆ ಒಂದಾಗಲು ಹಿಂದೇಟು ಹಾಕುತ್ತಿದ್ದರು, ವಿರೋಧ ವ್ಯಕ್ತ ಪಡಿಸುತ್ತಿದ್ದರು. ಇವರನ್ನೆಲ್ಲ ಒಗ್ಗೂಡಿಸಿ ದೇಶಕ್ಕೊಂದು ಆಕಾರ, ಆಡಳಿತ, ರೂಪುರೇಷೇ, ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಒಂದೇ ಎರಡೇ. ಪ್ರತಿಯೊಂದೂ ಸವಾಲುಗಳಿದ್ದವು. ಆದರೆ ರಾಷ್ಟ್ರೀಯ ಕಾಂಗ್ರೆಸ್ ನ ನಾಯಕರು ತಮ್ಮ ತಮ್ಮ ಸಾಮರ್ಥ್ಯವನ್ನು ಒಗ್ಗೂಡಿಸಿ ದೇಶಕ್ಕಾಗಿ ಒಂದಾಗಿ ಶ್ರಮಿಸಿದರು. ಮೊದಲ ಪ್ರಧಾನಮಂತ್ರಿ ಜವಹಾರ್ ಲಾಲ್ ನೆಹರೂ ಎಂದು ಆಯ್ಕೆ ಮಾಡುವಾಗ ಅವರ ಶಿಕ್ಷಣ, ದೇಶಭಕ್ತಿ, ವಯಸ್ಸು, ಬದ್ಧತೆ, ವ್ಯಕ್ತಿತ್ವ ಎಲ್ಲವನ್ನೂ ಪರಿಗಣಿಸಲಾಗಿತ್ತು. ಅದಕ್ಕೆ ಅವರು ತಕ್ಕಂತೆ ಕೆಲಸ ಮಾಡಿದರೂ ಕೂಡ. ಒಂದೆಡೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದ ಮೂಲೆ ಮೂಲೆಗೆ ಹೋಗಿ ಒಲ್ಲದ ರಾಜರನ್ನು, ರಾಜ್ಯವನ್ನು ಹಿಮ್ಮೆಟ್ಟಿಸಿ, ಮಾತುಕತೆ ನಡೆಸಿ ದೇಶವನ್ನು ಒಗ್ಗೂಡಿಸಿ ‘ಅಖಂಡ ಭಾರತ’ ಎನ್ನುವ ರೂಪ ಕೊಟ್ಟರು. ಪ್ರಧಾನ ಮಂತ್ರಿ ಜವಹರ್ ಲಾಲ್ ನೆಹರೂ ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ಸಮಿತಿ ರಚಿಸಿ ಚಾಲನೆ ನೀಡಿದರು. ಹೀಗೆ ಒಬ್ಬೊಬ್ಬರು ಒಂದೊಂದು ಕೆಲಸ ಮಾಡಿ ರಾಷ್ಟ್ರೀಯ ಕಾಂಗ್ರೆಸ್ ಎನ್ನುವ ಆಲದ ಮರದಡಿ ಒಂದಾಗಿ ಭಾರತವನ್ನು ಕಟ್ಟುವ ಕೆಲಸ ಆರಂಭಿಸಿದರು.

1948ರಲ್ಲಿ ಗಾಂಧಿ ಹತ್ಯೆ, ಸರ್ದಾರ ವಲ್ಲಭ್ ಭಾಯಿ ಪಟೇಲ್ ನಿಧನ ಈ ಸಂಘಟನೆಗೆ ದೊಡ್ಡ ಹೊಡೆತ ನೀಡಿತು. ಆದರೆ ಎದೆಗುಂದದ ಪ್ರಧಾನಿ ನೆಹರೂ ಆಧುನಿಕ ಭಾರತದ ಬುನಾಡಿ ಹಾಕಿದರು. ಭಾರತದ ಸಂವಿಧಾನ ರೂಪಿಸಿ, ಜಾರಿಗೆ ತಂದು 1950ರಲ್ಲಿ ಗಣತಂತ್ರ ದೇಶವನ್ನಾಗಿಸಿದರು. ಸಂಸತ್ತೀಯ ಪ್ರಜಾಪ್ರಭುತ್ವದ ಸ್ಥಾಪನೆ ಮಾಡಿ, ಅದರ ಮೊದಲ ಚುನಾವಣೆ ನಡೆಸಿದರು. ದೇಶವನ್ನು ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನಾಗಿ ವಿಂಗಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಕ್ಕೂಟ ವ್ಯವಸ್ಥೆಯನ್ನು ಮಾಡಿದರು. ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿದರು. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಸ್ಥಾಪಿಸಿದರು. ಮಿಶ್ರ ಆರ್ಥಿಕ ವ್ಯವಸ್ಥೆ, ಅಲಿಪ್ತ ನೀತಿಯಂತಹ ರಾಯಭಾರಿ, ರಾಜತಾಂತ್ರಿಕ ನಿಲುಮೆ, ಕಾಲರಾ, ದಡಾರದಂತಹ ಆಗಿನ ಕಾಲದ ಸಾಂಕ್ರಮಿಕ ರೋಗಗಳ ನಿಯಂತ್ರಣ ಮತ್ತು ಲಸಿಕೆ ವ್ಯವಸ್ಥೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಕೊಡುಗೆಗಳನ್ನು ಪ್ರಧಾನಮಂತ್ರಿ ನೆಹರೂ ಭಾರತಕ್ಕೆ ನೀಡಿದರು. ಆ ಕಾರಣಕ್ಕೆ ಪಂಡಿತ್ ಜವಾಹರ್ ಲಾಲ್ ನೆಹರೂ ಅವರನ್ನು ಆಧುನಿಕ ಭಾರತದ ಪಿತಾಮಹ ಎನ್ನುವುದಿದೆ.

ಅವರ ನಂತರ ಬಂದ ಲಾಲ್ ಬಹದ್ದೂರ್ ಶಾಸ್ತ್ರಿ ದೇಶದ ಅತಿದೊಡ್ಡ ಬರಗಾಲವನ್ನು ಎದುರಿಸಿದರು. ಒಂದೊಂದು ತುತ್ತಿಗೂ ಒದ್ದಾಡುವ ಸ್ಥಿತಿಯಲ್ಲಿದ್ದ ಭಾರತಿಯನಿಗೆ ಕ್ಷೀರ ಕ್ರಾಂತಿ, ಹಸಿರು ಕ್ರಾಂತಿಯ ಆಶಾಕಿರಣವನ್ನು ನೀಡಿದರು. ಆಡಳಿತ ನೀಡಿದ ಕೆಲವೇ ಸಮಯದಲ್ಲಿ ದೇಶದ ಆಹಾರ ಸಮಸ್ಯೆಗೆ ದೊಡ್ಡ ಪರಿಹಾರ ನೀಡಿದ ಕೀರ್ತಿ ಲಾಲ್ ಬಹದ್ದೂರ್ ಶಾಸ್ತ್ರಿಗಳಿಗೆ ಸಲ್ಲುತ್ತದೆ.

ಮುಂದೆ ಇಂದಿರಾ ಗಾಂಧಿ ಕಾಲದಲ್ಲಿ ಬಲಿಷ್ಠ ಕೇಂದ್ರಾಡಳಿತ, ಬಡವರ ಪರ ಯೋಜನೆಗಳು ಮತ್ತು ರಾಜಕೀಯ ಕೇಂದ್ರಿಕರಣ ಕಂಡುಬಂದವು. ಅದಾಗಲೇ ಒಂದೆಡೆ ಸಿಖ್ ಸಮುದಾಯದ ಬಂಡಾಯ, ಆಪರೇಷನ್ ಬ್ಲೂ ಸ್ಟಾರ್ ಮತ್ತು ಜನಸಂಖ್ಯೆ ನಿಯಂತ್ರಣ ಯೋಜನೆಗಳು ರಾಷ್ಟ್ರೀಯ ಕಾಂಗ್ರೆಸ್ ನ ಮೇಲೆ ಜನರಲ್ಲಿ ಅಸಮಾಧಾನ ಮೂಡಿಸಿದ್ದವು. ಇವುಗಳ ಮಧ್ಯೆ ಪ್ರಧಾನಮಂತ್ರಿ ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಘೋಷಿಸಿದರು. ಇದು ಕಾಂಗ್ರೆಸ್ ಇತಿಹಾಸಕ್ಕೆ ಅತಿ ದೊಡ್ಡ ನೈತಿಕ ಪೆಟ್ಟನ್ನು ನೀಡಿತು.

ಇದರ ನಂತರವೂ ಕಾಂಗ್ರೆಸ್ ಆಡಳಿತ ದೇಶಕ್ಕೆ ದೊಡ್ಡ ಕೊಡುಗೆಗಳನ್ನು ನೀಡಿದೆ. ಆದರೆ ಕಾಂಗ್ರೆಸ್ ದೀರ್ಘಕಾಲ ಆಡಳಿತ ನಡೆಸಿದ ಪಕ್ಷ. ಅದರಿಂದಾಗಿ ಸಾಧನೆಗಳೂ ಇದ್ದವು, ವೈಫಲ್ಯಗಳೂ ಇದ್ದವು. ಆರ್ಥಿಕ ಉದಾರೀಕರಣ (1991), ಜಾಗತೀಕರಣ, ಉದ್ಯೋಗೀಕರಣ, ತಂತ್ರಜ್ಞಾನಗಳ ಆವಿಷ್ಕಾರ, ಸಾಮಾಜಿಕ ನ್ಯಾಯದ ವಿಸ್ತರಣೆ, ವಿದೇಶಾಂಗ ನೀತಿಯಲ್ಲಿ ಸಮತೋಲನ ಮತ್ತು ಶಿಕ್ಷಣ ಹಾಗೂ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ದೊಡ್ಡ ಸಾಧನೆಗಳು.

ಭ್ರಷ್ಟಾಚಾರ ಆರೋಪಗಳು , ವಂಶಪಾರಂಪರ್ಯ ರಾಜಕೀಯ, ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಕೊರತೆ ಮತ್ತು ಹೊಸ ರಾಜಕೀಯ ಸವಾಲುಗಳಿಗೆ ತಕ್ಕ ಪ್ರತಿಕ್ರಿಯೆಯ ಕೊರತೆ ಇವುಗಳೆಲ್ಲ ಕಾಂಗ್ರೆಸ್ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರಿದವು.

2014 ನಂತರ: ಅಧಿಕಾರದಿಂದ ಹೊರಗುಳಿದು ಆತ್ಮಪರಿಶೀಲನೆಗೆ ತಳ್ಳಲ್ಪಟ್ಟ ಪಕ್ಷ

2014 ನಂತರ ಕಾಂಗ್ರೆಸ್ ನಿರಂತರವಾಗಿ ಅಧಿಕಾರದಿಂದ ದೂರವಿದೆ. ಇದು ಕೇವಲ ಚುನಾವಣಾ ಸೋಲಲ್ಲ, ರಾಜಕೀಯ ಪ್ರಸ್ತುತತೆಯ ಸಂಕಟ. ಪ್ರಬಲ ನಾಯಕತ್ವದ ಕೊರತೆ, ದುರ್ಬಲ ಸಂಘಟನೆ, ಪ್ರಾದೇಶಿಕ ಪಕ್ಷಗಳ ಏರಿಕೆ ಮತ್ತು ಬಿಜೆಪಿ ಕೇಂದ್ರಿತ ರಾಜಕೀಯ ಧ್ರುವೀಕರಣ ಕಾಂಗ್ರೆಸ್‌ಗೆ ಹೊಸ ಸವಾಲುಗಳನ್ನು ತಂದಿವೆ. ಇಂದಿನ ಕಾಂಗ್ರೆಸ್ ಪ್ರತಿಪಕ್ಷದ ಪಾತ್ರದಲ್ಲಿ ಹೆಚ್ಚು ಧ್ವನಿಯಾಗಲು ಪ್ರಯತ್ನಿಸುತ್ತಿದೆ. ಆದರೆ ಪರ್ಯಾಯ ಆಡಳಿತದ ಸ್ಪಷ್ಟ ಚಿತ್ರಣ ನೀಡಲು ಇನ್ನೂ ಹೋರಾಡುತ್ತಿದೆ. ಒಂದು ಕಾಲದಲ್ಲಿ ದೇಶಕ್ಕೆ ದಿಕ್ಕು ತೋರಿಸಿದ ಪಕ್ಷ, ಇಂದು ಆ ದಿಕ್ಕನ್ನೇ ಹುಡುಕುತ್ತಿರುವ ಸ್ಥಿತಿಯಲ್ಲಿದೆ.ಈಗ ಕಾಂಗ್ರೆಸ್ ತನ್ನ ಹಳೆಯ ವೈಭವದ ನೆನಪಿನಲ್ಲೇ ಉಳಿಯುತ್ತದೆಯೇ? ಅಥವಾ ಹೊಸ ತಲೆಮಾರಿಗೆ ಹೊಂದಿಕೊಳ್ಳುವಂತೆ ತನ್ನನ್ನು ಪುನರ್ ರೂಪಿಸಿಕೊಳ್ಳುತ್ತದೆಯೇ? ಎನ್ನುವುದು ಪ್ರಶ್ನೆ.

ಮುಂದಿನ ದಾರಿ: ಪುನರ್ ನಿರ್ಮಾಣವೇ ಅಥವಾ ರಾಜಕೀಯ ಕುಸಿತವೇ?

ಇದಕ್ಕೆ ನಿನ್ನೆ ನಡೆದ ಒಂದು ಘಟನೆ ಉದಾಹರಣೆಯಷ್ಟೆ. ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರ್ ಎಸ್ ಎಸ್ ನಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ತನ್ನ ದುಡಿಮೆಯಿಂದ ಪ್ರಧಾನಿಯಾಗುವ ಅವಕಾಶವಿದೆ. ಅಲ್ಲಿ ಸಂಘಟನೆಗೆ ಬೆಲೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ ನಲ್ಲಿ ತೀವ್ರ ವಿವಾದವನ್ನು ಹುಟ್ಟುಹಾಕಿದೆ. ಆದಾಗ್ಯೂ ಪ್ರಸ್ತುತದಲ್ಲಿ ಕಾಂಗ್ರೆಸ್ ಎಲ್ಲಿ ಎಡವುತ್ತಿದೆ ಎನ್ನುವುದಕ್ಕೆ ಇದು ಕೈಗನ್ನಡಿಯಾಗಿದೆ.

ಕಾಂಗ್ರೆಸ್ ಉಳಿಯಬೇಕೆಂದರೆ, ಆಂತರಿಕ ಪ್ರಜಾಪ್ರಭುತ್ವ ಹೆಚ್ಚಬೇಕು. ಪ್ರಬಲ ಪ್ರಾದೇಶಿಕ ನಾಯಕತ್ವ ಬೆಳೆಯಬೇಕು. ವಂಶಪಾರಂಪರ್ಯ ರಾಜಕೀಯವನ್ನು ಮಿತಿಗೊಳಿಸಬೇಕು. ಸ್ಪಷ್ಟ ಆರ್ಥಿಕ ಮತ್ತು ಸಾಮಾಜಿಕ ದೃಷ್ಟಿಕೋನವನ್ನು ಹೊಂದಬೇಕು. ಎಲ್ಲಕ್ಕಿಂತ ಹೆಚ್ಚು ಪ್ರಬಲ, ಜನಮಾನಸ ಒಪ್ಪುವ ನಾಯಕತ್ವ ಪ್ರತಿಪಾದಿಸಿ, ಸೂಕ್ತ ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗಬೇಕು. ಹೆಚ್ಚುತ್ತಿರುವ ಮಾಧ್ಯಮ ಮತ್ತು ಆಡಳಿತಾರೂಢ ಪಕ್ಷದ ಬೇರೆ ಬೇರೆ ರೀತಿಯ ದಾಳಿಗಳನ್ನು ಎದುರಿಸುವ ಪ್ರಾಬಲ್ಯ, ಚಾಕಚಕ್ಯತೆಯನ್ನು ಪ್ರದರ್ಶಿಸಬೇಕಿದೆ.

ಭಾರತೀಯ ರಾಜಕೀಯದಲ್ಲಿ ಕಾಂಗ್ರೆಸ್‌ನ ಅಂತ್ಯ ಇನ್ನೂ ಆಗಿಲ್ಲ. ಆದರೆ ಅದರ ಪುನರುತ್ಥಾನ ಕಾಂಗ್ರೆಸ್ ಕೈಯಲ್ಲೇ ಇದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇತಿಹಾಸವು ಭಾರತದ ರಾಜಕೀಯ ಇತಿಹಾಸವೇ ಆಗಿದೆ. ಆದರೆ ಇತಿಹಾಸ ಮಾತ್ರ ರಾಜಕೀಯ ಬಂಡವಾಳವಲ್ಲ. ಇಂದಿನ ಪ್ರಜಾಪ್ರಭುತ್ವದಲ್ಲಿ ಪ್ರಸ್ತುತತೆ, ವಾಸ್ತವದ ಸವಾಲುಗಳನ್ನು ದೃಢಮನಸ್ಸಿನಿಂದ, ಒಗ್ಗಟ್ಟಾಗಿ ಎದುರಿಸುವಿಕೆ ಮತ್ತು ಹೊಸ ದೃಷ್ಟಿ, ದಿಕ್ಕು ಮುಖ್ಯ.

.

Author

  • ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

By Sheela Bhat

ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

Leave a Reply

Your email address will not be published. Required fields are marked *