NDA ಸರ್ಕಾರದ ಹೆಸರು ಬದಲಾವಣೆ ಪ್ರಯತ್ನ: ರಾಜಕೀಯ, ತತ್ವ ಮತ್ತು ಪರಿಣಾಮಗಳ ವಿಶ್ಲೇಷಣೆ
ಭಾರತದ ಗ್ರಾಮೀಣ ಅಭಿವೃದ್ಧಿ ಇತಿಹಾಸದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (NREGA) ಒಂದು ಮಹತ್ವದ ಮೈಲಿಗಲ್ಲು. 2005ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಈ ಯೋಜನೆ, ಉದ್ಯೋಗವನ್ನು ದಾನವಲ್ಲದೆ ಕಾನೂನುಬದ್ಧ ಹಕ್ಕು ಎಂದು ಪರಿಗಣಿಸಿದ ಮೊದಲ ಪ್ರಯತ್ನವಾಗಿತ್ತು.
ಆದರೆ ಇತ್ತೀಚಿನ ವರ್ಷಗಳಲ್ಲಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ, ಈ ಯೋಜನೆಯ ಹೆಸರನ್ನು ಬದಲಾಯಿಸಿ ‘ಗ್ರಾಮ್ ರೋಜ್ಗಾರ್’ (Gram Rozgar) ಅಥವಾ G-RAM-G ರೀತಿಯ ಪರಿಕಲ್ಪನೆ ತರುವ ಪ್ರಯತ್ನಗಳು ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗಿದೆ. ಈ ಹೆಸರು ಬದಲಾವಣೆ ಕೇವಲ ಪದಪ್ರಯೋಗವೇ? ಅಥವಾ ಅದರ ಹಿಂದೆ ಇರುವ ತತ್ವವೇ ಬದಲಾಗುತ್ತಿದೆಯೇ? ಇದಕ್ಕೆ ಉತ್ತರ ಹುಡುಕುವ ಪ್ರಯತ್ನವೇ ಈ ವಿಶ್ಲೇಷಣೆ.
ಹೆಸರು ಬದಲಾವಣೆ: ಏಕೆ ಈ ಅಗತ್ಯ?
ಎನ್‌ಡಿಎ ಸರ್ಕಾರದ ವಾದದ ಪ್ರಕಾರ,
* “ನರೆಗಾ ಎಂಬುದು ಕಾಂಗ್ರೆಸ್–ಯುಪಿಎ ರಾಜಕೀಯ ಗುರುತು”
* “ಯೋಜನೆ ವ್ಯಕ್ತಿಯ ಹೆಸರಿಗಿಂತ ರಾಷ್ಟ್ರದ ಹೆಸರಿನಲ್ಲಿ ಇರಬೇಕು”
* “ಗ್ರಾಮೀಣ ಉದ್ಯೋಗವನ್ನು ಸ್ವಾವಲಂಬನೆ ಮತ್ತು ಉತ್ಪಾದಕತೆಯೊಂದಿಗೆ ಜೋಡಿಸಬೇಕು”
ಈ ಹಿನ್ನೆಲೆಯಲ್ಲಿಯೇ ‘ಮಹಾತ್ಮಾ ಗಾಂಧಿ’ ಎಂಬ ಹೆಸರಿನ ಪ್ರಸ್ತಾಪ, ಅಥವಾ ‘ಉದ್ಯೋಗ ಖಾತರಿ’ ಎಂಬ ಪದಗಳ ಬದಲು ‘ಗ್ರಾಮ್ ರೋಜ್ಗಾರ್’ ಎಂಬ ಪದ ಬಳಕೆಯ ಚರ್ಚೆ ಆರಂಭವಾಯಿತು.
ಆದರೆ ಪ್ರಶ್ನೆ ಇಲ್ಲಿದೆ:
ಹೆಸರು ಬದಲಾಗಿದರೆ ತತ್ವ ಬದಲಾಗುತ್ತದೆಯೇ?
NREGAಯ ಆತ್ಮ ಎಂದರೆ:
* ಉದ್ಯೋಗ ಎಂಬುದು ಕಾನೂನು ಹಕ್ಕು
* ಕೆಲಸ ಸಿಗದಿದ್ದರೆ → ನಿರುದ್ಯೋಗ ಭತ್ಯೆ
* ಗ್ರಾಮ ಪಂಚಾಯತ್ ಮಟ್ಟದಲ್ಲಿ ಯೋಜನೆ
* ಬಡವರಿಗೆ ಕನಿಷ್ಠ ಆದಾಯ ಭದ್ರತೆ
ಆದರೆ ‘ಗ್ರಾಮ್ ರೋಜ್ಗಾರ್’ ಎಂಬ ಪದಪ್ರಯೋಗ ಹೆಸರು ಮಾತ್ರವಲ್ಲ, ಅದರೊಂದಿಗೆ ಬರುವ ಭಾಷೆ ಮತ್ತು ಆಡಳಿತ ತತ್ವವೂ ಬದಲಾಗುವ ಸಾಧ್ಯತೆ ಇದೆ.
* ಉದ್ಯೋಗವನ್ನು ಹಕ್ಕಿನಿಂದ ಅವಕಾಶಕ್ಕೆ ಇಳಿಸುವ ಅಪಾಯವಿದೆ,
* ಸರ್ಕಾರದ ಕೃಪೆಯಂತೆ ಕೆಲಸ ಸಿಗುವ ಭಾವನೆ ಹೆಚ್ಚಾಗಲಿದೆ.
* ಸರಕಾರಗಳ ಮೇಲಿರುವ ಕಾನೂನುಬದ್ಧ ಜವಾಬ್ದಾರಿಯು ಮಸುಕಾಗಲಿದೆ.
ರಾಜಕೀಯ ಮರೆಮಾಚುವಿಕೆ ಅಥವಾ ಆಡಳಿತ ಸುಧಾರಣೆ?
ನರೆಗಾ ಹೆಸರು ಬದಲಾವಣೆಯ ಚರ್ಚೆಯನ್ನು ಹಲವರು ರಾಜಕೀಯ ಮರುಬ್ರ್ಯಾಂಡಿಂಗ್ ಎಂದು ನೋಡುತ್ತಾರೆ. ಯಾಕೆಂದರೆ ಯೋಜನೆಯ ಮೂಲ ಚೌಕಟ್ಟು ಬದಲಾಗಿಲ್ಲ. ಅದೇ ಉದ್ಯೋಗ, ಅದೇ ಪಂಚಾಯತ್, ಅದೇ ಕಾರ್ಮಿಕರು. ಆದರೆ ಹೊಸ ಹೆಸರು → ಹೊಸ ಕ್ರೆಡಿಟ್. ಇದನ್ನು ಆಡಳಿತ ಸುಧಾರಣೆ ಎಂದು ಕರೆಯಲು, ಉದ್ಯೋಗ ದಿನಗಳ ಹೆಚ್ಚಳ, ಕೂಲಿ ಪಾವತಿ ಸಮಯಕ್ಕೆ, ಆಸ್ತಿ ನಿರ್ಮಾಣದ ಗುಣಮಟ್ಟದ ಬದಲಾವಣೆಗಳು ಕಾಣಬೇಕು.
ಗಾಂಧಿ ಹೆಸರು: ಸಂಕೇತವೋ ಅಥವಾ ತತ್ವವೋ?
ನರೆಗಾ ಯೋಜನೆಗೆ ಮಹಾತ್ಮಾ ಗಾಂಧಿ ಹೆಸರು ಸೇರಿದ್ದಕ್ಕೆ ಕಾರಣ- ಗ್ರಾಮಸ್ವರಾಜ್ಯ ತತ್ವ, ಶ್ರಮದ ಗೌರವ ಮತ್ತು ಬಡವರ ಪರ ನಿಲುವು. ಹೆಸರನ್ನು ತೆಗೆದುಹಾಕುವ ಪ್ರಯತ್ನಗಳು ಗಾಂಧಿ ತತ್ವದ ನಿರಾಕರಣೆಯಲ್ಲ ; ಆದರೆ ಗಾಂಧಿ ಸಂಕೇತದ ರಾಜಕೀಯ ಅಸಹನೆಯ ಪ್ರತಿಬಿಂಬ. ಇದು ಭಾರತದಲ್ಲಿ “ಯೋಜನೆಗಳು ಸರ್ಕಾರದವೋ, ಅಥವಾ ಆಡಳಿತದಲ್ಲಿರುವ ಪಕ್ಷದವೋ?” ಎಂಬ ದೊಡ್ಡ ಪ್ರಶ್ನೆಯನ್ನು ಮೂಡಿಸುತ್ತದೆ.
ಗ್ರಾಮೀಣ ಕಾರ್ಮಿಕನ ದೃಷ್ಟಿಯಲ್ಲಿ ಹೆಸರು ಮುಖ್ಯವೇ?
ವಾಸ್ತವದಲ್ಲಿ, ಕಾರ್ಮಿಕನಿಗೆ ಹೆಸರು ಅಷ್ಟಾಗಿ ಮುಖ್ಯವಲ್ಲ. ಅವನಿಗೆ ಕೆಲಸ ಸಿಗುತ್ತಿದೆಯೇ?, ಕೂಲಿ ಸಮಯಕ್ಕೆ ಬರುತ್ತಿದೆಯೇ? ಮತ್ತು ವರ್ಷಕ್ಕೆ 100 ದಿನ ಕೆಲಸ ಸಿಗುತ್ತದೆಯೆ? ಎನ್ನುವುದಷ್ಟೇ ಮುಖ್ಯ. ಆದರೆ ಹಕ್ಕಿನ ಸ್ವರೂಪ ಬದಲಾಗಿದರೆ, ಅದರ ಪರಿಣಾಮ ನೇರವಾಗಿ ಕಾರ್ಮಿಕನ ಬದುಕಿನ ಮೇಲೆ ಬೀಳುತ್ತದೆ. ಇದು ಗಮನಾರ್ಹ.
ನರೆಗಾದ ಹೆಸರನ್ನು ಬದಲಿಸುವ ಚರ್ಚೆ ಕೇವಲ ಆಡಳಿತಾತ್ಮಕವಲ್ಲ; ಅದು ರಾಜಕೀಯ ತತ್ವಗಳ ಪ್ರತಿಬಿಂಬ.
ಯೋಜನೆಯ ಹೆಸರು ಬದಲಾಗಬಹುದು, ಆದರೆ ಉದ್ಯೋಗ ಹಕ್ಕು ಬದಲಾಗಬಾರದು. ಗ್ರಾಮೀಣ ಭಾರತಕ್ಕೆ ಬೇಕಾಗಿರುವುದು ಹೆಸರು ಬದಲಾವಣೆ ಅಲ್ಲ, ನಂಬಿಕೆ, ಭದ್ರತೆ ಮತ್ತು ಗೌರವದೊಂದಿಗೆ ಕೆಲಸ. “ನರೆಗಾ ಎಂಬುದು ಕಾನೂನು. ಗ್ರಾಮ್ ರೋಜ್ಗಾರ್ ಒಂದು ಪದ. ಭಾರತದ ಗ್ರಾಮೀಣ ಬಡವರಿಗೆ ಬೇಕಾಗಿರುವುದು ಪದಗಳಲ್ಲ, ಹಕ್ಕುಗಳು.”






