ಭಾರತೀಯ ಗ್ರಾಮೀಣ ಅಭಿವೃದ್ಧಿಯಲ್ಲಿನ ಮಹತ್ವದ ಸಾಮಾಜಿಕ–ಆರ್ಥಿಕ ಪರಿವರ್ತನೆ
ಭಾರತದ ಮುಕ್ಕಾಲು ಭಾಗ ಕೃಷಿ ಆಧಾರಿತ ಹಳ್ಳಿಗಳಲ್ಲಿ ಜೀವಂತವಾಗಿದೆ. ವಿಶಾಲವಾದ ಇಷ್ಟು ದೊಡ್ಡ ವಿಸ್ತಾರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಉದ್ಯೋಗ, ವಸತಿ, ಶಿಕ್ಷಣ, ರಸ್ತೆಗಳಂತಹ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದು ಸುಲಭದ ಕೆಲಸವಲ್ಲ. ಸ್ವಾತಂತ್ರ್ಯಾನಂತರ ಮಹಾತ್ಮಗಾಂಧೀಜಿ ಹೇಳಿದ ಗ್ರಾಮ ಸ್ವರಾಜ್ಯದ ಕಲ್ಪನೆ ಅಂದಿನ ನಾಯಕರ ಮೂಲಭೂತ ಮಂತ್ರವಾಗಿತ್ತು. ಅದೇ ಮುಂದುವರಿದು ರಾಜೀವ್ ಗಾಂಧಿಯವರ ಕಾಲದಲ್ಲಿ ಜಿಲ್ಲೆ, ತಾಲ್ಲೂಕು , ಗ್ರಾಮಗಳಿಗೂ ಆಡಳಿತ ವಿಸ್ತರಣೆಯ ಪ್ರಕ್ರಿಯೆ ಆರಂಭವಾಯಿತು. ಒಂದೊಂದೇ ಹಂತಗಳಲ್ಲಿ ಹಲವಾರು ಪ್ರಯತ್ನಗಳಲ್ಲಿ ಗ್ರಾಮೀಣ ಜನರ , ನಿರುದ್ಯೋಗಿಗಳ ಬವಣೆಗಳನ್ನು ನಿವಾರಿಸುವ ಹಲವು ಯೋಜನೆಗಳು ಜಾರಿಯಾದವು. ಅವುಗಳಲ್ಲಿ ಒಂದು 2005ರಲ್ಲಿ ಯುನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್ (UPA) ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (NREGA). ಇದು ನಂತರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಎಂದು ಹೆಸರು ಬದಲಿಸಿಕೊಂಡು, ಗ್ರಾಮೀಣ ಭಾರತದ ಆರ್ಥಿಕ ನೆಲೆಯಲ್ಲಿ ಮಹತ್ವದ ಬದಲಾವಣೆ ತಂದಿತು. ಈ ಯೋಜನೆ ಭಾರತದ ಅಭಿವೃದ್ಧಿ ಕಥನದಲ್ಲಿ ಗ್ರಾಮೀಣ ಭಾರತದ ಬಡತನ, ನಿರುದ್ಯೋಗ, ವಲಸೆ, ಕೃಷಿ ಅವಲಂಬನೆಯ ಸವಾಲುಗಳಿಗೆ ಉತ್ತರವನ್ನು ನೀಡಿದ ಮಹತ್ವದ ಯೋಜನೆಯಾಯಿತು.
ಯೋಜನೆಯ ಮೂಲ ಉದ್ದೇಶ
ನರೆಗಾ ಯೋಜನೆಯ ಮುಖ್ಯ ಉದ್ದೇಶವು ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಕೂಲಿ ಆಧಾರಿತ ಉದ್ಯೋಗವನ್ನು ಕಾನೂನು ಹಕ್ಕಿನ ರೂಪದಲ್ಲಿ ಒದಗಿಸುವುದಾಗಿತ್ತು. ಇದು ಕೇವಲ ಕಲ್ಯಾಣ ಯೋಜನೆಯಷ್ಟೇ ಅಲ್ಲ; ಉದ್ಯೋಗವನ್ನು ಹಕ್ಕು ಎಂದು ಪರಿಗಣಿಸಿದ ಭಾರತದ ಮೊದಲ ಸಾಮಾಜಿಕ ಕಾನೂನು ಆಗಿತ್ತು.
ಗ್ರಾಮೀಣ ನಿರುದ್ಯೋಗಕ್ಕೆ ಪ್ರತಿಕ್ರಿಯೆ
ನರೆಗಾ, ಗ್ರಾಮೀಣ ಪ್ರದೇಶಗಳಲ್ಲಿ ಋತುಮಾನದ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಿತು. ಕೃಷಿಯ ಹೊರಗಿನ ಅವಧಿಯಲ್ಲಿ ಸಾವಿರಾರು ಕಾರ್ಮಿಕರಿಗೆ ಕೆಲಸ ಸಿಕ್ಕಿತು. ಇದರಿಂದ
* ನಗರಗಳಿಗೆ ನಡೆಯುತ್ತಿದ್ದ ಬಲವಂತದ ವಲಸೆ ಕಡಿಮೆಯಾಯಿತು
* ಗ್ರಾಮದಲ್ಲೇ ಆದಾಯದ ಮೂಲ ನಿರ್ಮಾಣವಾಯಿತು
* ಗ್ರಾಮೀಣ ಆರ್ಥಿಕ ಚಕ್ರ ಸಕ್ರಿಯವಾಯಿತು
ಮಹಿಳಾ ಸಬಲೀಕರಣದ ಮಹತ್ವದ ಹೆಜ್ಜೆ
ನರೆಗಾ ಯೋಜನೆಯ ಪ್ರಮುಖ ಸಾಧನೆಯೆಂದರೆ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ. ಅನೇಕ ರಾಜ್ಯಗಳಲ್ಲಿ ಮಹಿಳೆಯರ ಪಾಲು 50%ಕ್ಕಿಂತ ಅಧಿಕವಾಗಿತ್ತು. ಇದರಿಂದ ಮಹಿಳೆಯರಿಗೆ ಸ್ವಂತ ಆದಾಯ ಮತ್ತು ಆತ್ಮಗೌರವ ಹೊಂದುವ ಅವಕಾಶ ದೊರೆಯಿತು. ಮನೆಯ ಆರ್ಥಿಕ ನಿರ್ಣಯಗಳಲ್ಲಿ ಭಾಗವಹಿಸುವಿಕೆ ಸಾಧ್ಯವಾಯಿತು. ಗ್ರಾಮೀಣ ಮಹಿಳೆಯರ ಸಾಮಾಜಿಕ ಸ್ಥಾನಮಾನದಲ್ಲಿ ಏರಿಕೆಯಾಯಿತು.
ಗ್ರಾಮೀಣ ಆಸ್ತಿ ನಿರ್ಮಾಣ
ನರೆಗಾ ಕೇವಲ ಕೆಲಸ ನೀಡಿದ ಯೋಜನೆಯಲ್ಲ; ಅದು ಗ್ರಾಮೀಣ ಮೂಲಸೌಕರ್ಯ ನಿರ್ಮಾಣಕ್ಕೂ ಕಾರಣವಾಯಿತು. ನರೆಗಾ ಅಡಿಯಲ್ಲಿ ಕೆರೆ, ಕಾಲುವೆ, ನೀರು ಸಂಗ್ರಹಣೆಯ ಕಾರ್ಯಗಳಾದವು. ಎಷ್ಟೋ ಊರುಗಳು , ಮನೆಗಳು , ತೋಟಗಳು ತಾವು ಬಾವಿ, ಕೆರೆಗಳನ್ನು ಕಂಡುದಲ್ಲದೇ ತಮ್ಮನ್ನು ನಿರ್ಮಿಸಿದವರು ಮತ್ತವರ ಕುಟುಂಬಗಳ ಹೊಟ್ಟೆ ತುಂಬಿಸಿದವು. ಗ್ರಾಮೀಣ ರಸ್ತೆಗಳು ನಿರ್ಮಾಣವಾದವು. ಬದುಗಳು, ಹೊಂಡಗಳ ನಿರ್ಮಾಣದಿಂದ ಮಣ್ಣು ಸಂರಕ್ಷಣೆ ಸಾಧ್ಯವಾಯಿತು. ಊರಿಗಂಟಿಕೊಂಡ ಸಣ್ಣ ಸಣ್ಣ ಕಾಡುಗಳಲ್ಲಿ ಕೆರೆಗಳು ನಿರ್ಮಾಣವಾದ ಕಾರಣ ಕಾಡುಗಳಲ್ಲಿನ ವನ್ಯಜೀವಿಗಳು, ಪಕ್ಷಿಗಳು ನೀರಿಗಾಗಿ ಊರಿಗೆ ಬರುವ ಪ್ರಸಂಗಗಳು ಕಡಿಮೆಯಾದವು. ಬರ ಪ್ರದೇಶಗಳಲ್ಲಿ ಜಲ ಸಂರಕ್ಷಣಾ ಕಾರ್ಯಗಳು ನಿರ್ಮಾಣವಾದವು. ಇವು ದೀರ್ಘಕಾಲಿಕವಾಗಿ ಕೃಷಿ ಉತ್ಪಾದಕತೆ ಹೆಚ್ಚಲು ಸಹಾಯ ಮಾಡಿದವು.
ಬಡತನ ನಿವಾರಣೆ
ನರೆಗಾ ಯೋಜನೆ ಗ್ರಾಮೀಣ ಬಡತನವನ್ನು ಸಂಪೂರ್ಣವಾಗಿ ಅಳಿಸದಿದ್ದರೂ, ಅತ್ಯಂತ ದರಿದ್ರ ಕುಟುಂಬಗಳಿಗೆ ಆದಾಯದ ಭದ್ರತೆ ನೀಡಿತು. ಆಹಾರ ಭದ್ರತೆ, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚಗಳಿಗೆ ಈ ಆದಾಯ ಸಹಾಯವಾಯಿತು.
ಪಾರದರ್ಶಕತೆ ಮತ್ತು ಸವಾಲುಗಳು
ನರೆಗಾ ಜಾರಿಯಲ್ಲಿ ಭ್ರಷ್ಟಾಚಾರ, ಕೆಲಸ ವಿಳಂಬ, ಕೂಲಿ ತಡವಾಗಿ ಪಾವತಿ ಮುಂತಾದ ಸಮಸ್ಯೆಗಳೂ ಎದುರಾದವು. ಆದರೂ ಸಾಮಾಜಿಕ ಪರಿಶೀಲನೆ (Social Audit), ಬ್ಯಾಂಕ್ ಖಾತೆಗಳಿಗೆ ನೇರ ಪಾವತಿ ಮುಂತಾದ ಕ್ರಮಗಳು ಪಾರದರ್ಶಕತೆಯನ್ನು ಹೆಚ್ಚಿಸಿದವು. ಯೋಜನೆಯ ಆತ್ಮ ಮತ್ತು ಉದ್ದೇಶವನ್ನು ದುರ್ಬಲಗೊಳಿಸದೇ ಜಾರಿಗೆ ತರುವ ಅಗತ್ಯ ಸದಾ ಇದ್ದೇ ಇದೆ.
ರಾಜಕೀಯ ಮೀರಿದ ಸಾಮಾಜಿಕ ಯೋಜನೆ
ಇದು ರಾಜಕೀಯದಾಟವಾಗಿರಲಿಲ್ಲ. ಬದಲಿಗೆ ಗ್ರಾಮೀಣ ಭಾರತದ ಅಗತ್ಯಗಳಿಗೆ ಸ್ಪಂದಿಸಿದ ದೂರದೃಷ್ಟಿಯುಳ್ಳ ಅತ್ಯುತ್ತಮ ಯೋಜನೆ ಎಂದು ಸಮಾಜವಿಜ್ಞಾನಿಗಳು, ಆರ್ಥಿಕ ತಜ್ಞರು ಅಭಿಪ್ರಾಯಪಟ್ಟರು. ನರೆಗಾ ಯುಪಿಎ ಸರ್ಕಾರದ ರಾಜಕೀಯ ಗುರುತಾಗಿದ್ದರೂ, ಅದು ಸರ್ಕಾರ ಬದಲಾದ ಬಳಿಕವೂ ಮುಂದುವರಿದಿರುವುದು ಅದರ ಸಾಮಾಜಿಕ ಅಗತ್ಯತೆಯ ಸಾಕ್ಷಿ. ಇದು ಭಾರತದ ಗ್ರಾಮೀಣ ಆರ್ಥಿಕತೆಯ “ಸುರಕ್ಷಾ ಜಾಲ”ವಾಗಿ ರೂಪುಗೊಂಡಿದೆ.ನರೆಗಾ ಯೋಜನೆ ಭಾರತದ ಗ್ರಾಮೀಣ ಅಭಿವೃದ್ಧಿಯಲ್ಲಿ ಒಂದು ಮಹತ್ವದ ತಿರುವಾಗಿತ್ತು. ಉದ್ಯೋಗವನ್ನು ಹಕ್ಕಾಗಿಸಿದ ಈ ಯೋಜನೆ, ಬಡತನ–ನಿರುದ್ಯೋಗ–ವಲಸೆ ಎಂಬ ದೀರ್ಘಕಾಲದ ಸಮಸ್ಯೆಗಳಿಗೆ ವ್ಯವಸ್ಥಿತ ಉತ್ತರ ನೀಡಿತು. ಯೋಜನೆಯ ಪರಿಣಾಮಕಾರಿತ್ವವು ಜಾರಿಗೆ ಅವಲಂಬಿತವಾದರೂ, ಅದರ ಮೂಲ ತತ್ವವಾದ ಮಾನವ ಗೌರವದೊಂದಿಗೆ ಕೆಲಸ ಎಂಬುದು ಇಂದಿಗೂ ಪ್ರಸ್ತುತವಾಗಿದೆ.
ನರೆಗಾ ಭಾರತದ ಅಭಿವೃದ್ಧಿ ಚರ್ಚೆಯನ್ನು “GDP ಮಾತ್ರವಲ್ಲ, ಮಾನವ ಜೀವನದ ಭದ್ರತೆ” ಎಂಬ ದಿಕ್ಕಿಗೆ ತಿರುಗಿಸಿದ ಸಾಮಾಜಿಕ ಯೋಜನೆಯಾಗಿದೆ. ಇತ್ತೀಚೆಗಷ್ಟೆ ಈ ಯೋಜನೆಯ ಹೆಸರು ಬದಲಾಯಿಸಿ, ರಾಜ್ಯಗಳಿಗೆ ಆರ್ಥಿಕ ಹೊರೆಯನ್ನು ಅರ್ಧ ದಾಟಿಸಿ ಕೇಂದ್ರ ಸರಕಾರ ಕೈತೊಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸುದ್ದಿ ಟಿವಿ ಈ ಯೋಜನೆಯ ಕುರಿತು ಒಂದು ದೀರ್ಘ ಬೆಳಕು ಚೆಲ್ಲಲಿದೆ. ಮುಂದುವರಿಯುವುದು….






