ಬೆಂಗಳೂರು : ಇದು ಶಿವಮೊಗ್ಗ. ಆರ್ ಎಸ್ ಎಸ್ ನ ಕರ್ಮ ಭೂಮಿ. ಇಲ್ಲಿ ಇರುವವರು ಹಲವು ನಾಯಕರು. ಅವರ ರಾಜಕೀಯದ ನಡುವೆ ಪೆವಿಕಾಲ್ ಆಗಿರುವುದು ಸಂಘ ಪರಿವಾರ. ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿ, ಆರ್ ಎಸ್ ಎಸ್ ಸಮವಸ್ತ್ರ ಅವರನ್ನು ಒಂದಾಗಿಸುತ್ತದೆ. ಮೊದಲಿನ ಚಡ್ಡಿ, ಈಗಿನ ಪ್ಯಾಂಟು ತಲೆಯ ಮೇಲಿನ ಕರಿ ಟೊಪ್ಪಿ, ಕೈಯಲ್ಲಿ ಲಾಠಿ. ಸದಾ ವತ್ಸಲೇ ಮಾತೃಭೂಮಿ ಎಂಬ ಶ್ಲೋಕ..

ನಿನ್ನೆ ಇಂತಹ ಕಾರ್ಯಕ್ರಮವೊಂದು ಶಿವಮೊಗ್ಗದಲ್ಲಿ ನಡೆಯಿತು. ಅದು ಯುಗಾದಿ ಆಚರಣೆ. ಸಂಘ ಪರಿವಾರದ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಇತ್ತೀಚಿನ ದಿನಗಳಲ್ಲಿ ಬದ್ಧ ವೈರಿಗಳಾಗಿರುವ ಲೋಕಸಭೆಗೆ ಸ್ಪರ್ಧಿಸುತ್ತಿರುವ ರಾಘವೇಂದ್ರ ಮತ್ತು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಈಶ್ವರಪ್ಪ ಇಬ್ಬರೂ ಪಾಲ್ಗೊಂಡಿದ್ದರು.

ಆದರೆ ಅವರು ಹತ್ತಿರವೇನೂ ಇರಲಿಲ್ಲ. ಅವರಿದ್ದುದು ದೂರ, ಬಹುದೂರ.. ಆದರೆ ಈ ಕಾರ್ಯಕ್ರಮ ಪ್ರಶ್ನೆ ಮತ್ತು ಸಾಧ್ಯತೆಯೊಂದಕ್ಕೆ ಕಾರಣವಾಗಬಹುದೆ ? ಆರ್ ಎಸ್ ಎಸ್ ಸಮವಸ್ತ್ರ ಇವರಿಬ್ಬರ ನಡುವೆ ಪೆವಿಕಾಲ್ ಆಗಿ ಕೆಲಸ ಮಾಡಬಹುದೆ ? ಇಬ್ಬರೂ ಮತ್ತೆ ಒಂದಾಗಿ ಸದಾ ವತ್ಸಲೆ ಎಂದು ಹಾಡು ಹೇಳುತ್ತ ಜೊತೆಯಾಗಬಹುದೆ ?
ಈ ಯಾವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಇವರಿಬ್ಬರಿಗೂ ಆಕ್ಸಿಜನ್ ನೀಡುವುದು ಸಂಘ ಪರಿವಾರ. ಅದರ ಜೊತೆಗಿನ ಮುಸ್ಲಿಂ ವಿರೋಧ. ಅದನ್ನು ಬಿಟ್ಟರೆ ಇಬ್ಬರೂ ಖಾಲಿ ಖಾಲಿ. ಇವರಿಬ್ಬರೂ ಕಳೆದ ಕೆಲವು ದಿನಗಳಿಂದ ಸಾಕಷ್ಟು ಬೈದಾಡಿಕೊಂಡಿದ್ದಾರೆ. ವಿಜಯೇಂದ್ರ ವಿರುದ್ಧ ಈಶ್ವರಪ್ಪ ತೊಡೆ ತಟ್ಟಿದ್ದಾರೆ.

ಇನ್ನೂ ಏನನ್ನು ತಟ್ಟಿದ್ದಾರೋ ಗೊತ್ತಿಲ್ಲ. ವಿಜಯೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿಯೂ ಈಶ್ವರಪ್ಪ ಘೋಷಿಸಿದ್ದಾರೆ. ವೈಯಕ್ತಿಕವಾಗಿ ಕೌಟುಂಬಿಕವಾಗಿ ಬೈದುಕೊಂಡೂ ಆಗಿದೆ.
ಆದರೆ ನಿನ್ನೆ ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವರದಿಗಳ ಪ್ರಕಾರ ಇಬ್ಬರೂ ಆರ್ ಎಸ್ ಎಸ್ ಸಮವಸ್ತ್ರ ಧರಿಸಿದ್ದರು. ಈ ಸಮವಸ್ತ್ರದ ಒಳಗೆ ಯಾವ ವಸ್ತ್ರ ಇತ್ತೋ ಗೊತ್ತಿಲ್ಲ.

ಈ ಬೆಳವಣಿಗೆ ಶಿವಮೊಗ್ಗ ವೈರತ್ವದ ರಾಜಕಾರಣವನ್ನು ಬದಲಿಸುತ್ತದೆಯೆ ? ಇಬ್ಬರು ಒಂದಾಗುತ್ತಾರೆಯೆ?
ಸಂಘ ಪರಿವಾರ ಮನಸ್ಸು ಮಾಡಿದರೆ ಇದು ಅಸಾಧ್ಯವೇನೂ ಅಲ್ಲ. ಇವರಿಬ್ಬರು ಎಷ್ಟೇ ಬೈದಾಡಿಕೊಂಡಿರಲಿ, ಸಂಘ ಹೇಳಿದರೆ ಇವರು ತಣ್ಣಗಾಗುತ್ತಾರೆ. ಆದರೆ ಈಶ್ವರಪ್ಪ ಅವರ ಹಿಂದೆ ಸಂಘ ಪರಿವಾರ ಇದೆ ಎಂದು ಹೇಳಲಾಗುತ್ತಿದೆ.

ಈಶ್ವರಪ್ಪ ಅವರ ಬೆಂಬಲ ಮತ್ತು ಶಕ್ತಿ ಸಂಘ ಪರಿವಾರ. ಆದರೆ ಸಂಘ ಪರಿವಾರಕ್ಕೆ ವಿಜಯೇಂದ್ರ ಸೋಲಲಿ ಎಂಬ ಆಸೆ ಇದ್ದರೆ ಆಗ ಏನು ಮಾಡಲು ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವುದು, ಅಥವಾ ಉಲ್ಬಣಗೊಳ್ಳುವಂತೆ ಮಾಡುವುದು ಸಂಘ ಪರಿವಾರದ ಕೈಯಲ್ಲಿದೆ. ಅವರ ಸಮವಸ್ತ್ರದಲ್ಲಿದೆ.

Leave a Reply

Your email address will not be published. Required fields are marked *