ಬೆಂಗಳೂರು : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಮಾತನಾಡತೊಡಗಿದ್ದಾರೆ. ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು ಮಾತನಾಡುತ್ತಿದ್ದಾರೆ. ತಮಗೆ ಅರಿವಿಲ್ಲದೇ ತಮ್ಮ ರಾಜಕೀಯ ತಂತ್ರದ ಒಳ ಸುಳಿಗಳನ್ನು ಬಿಟ್ಟು ಕೊಡುತ್ತಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ವಿರೋಧಿಗಳಿಗೆ ಅವಕಾಶ ಕಲ್ಪಿಸುತ್ತಿದ್ದಾರೆ.
ಕುಮಾರಸ್ವಾಮಿಯ ರಾಜಕೀಯ ಮಂತ್ರದಲ್ಲಿ ಎರಡು ಅಂಶಗಳಿವೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಚಿವರಾಗಬೇಕು. ಒಂದು ವರ್ಷದ ಅವಧಿಯಲ್ಲಿ ಎಲ್ಲ ರೀತಿಯ ಶಕ್ತಿ ಪಡೆಯಬೇಕು. ನಂತರ ರಾಜ್ಯ ರಾಜಕಾರಣದತ್ತ ಲಕ್ಷ್ಯ ವಹಿಸಬೇಕು.
ಎರಡನೆಯ ತಂತ್ರಕ್ಕೆ ಅವರದೇ ಆದ ಕಾರಣಗಳಿವೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ರಾಜಕೀಯ ಬದಲಾವಣೆ ಆಗಬಹುದು ಎಂಬುದು ಅವರ ನಿರೀಕ್ಶೆ. ಅಷ್ಟರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಬಿಕ್ಕಟ್ಟ ಮೂಡಬಹುದು ಎಂಬುದು ಅವರ ಲೆಕ್ಕಾಚಾರ. ಆ ಸಂದರ್ಭದಲ್ಲಿ ಬಿಕ್ಕಟ್ಟನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬೇಕು ಎಂಬುದು ಕುಮಾರಸ್ವಾಮಿ ಅವರ ತಂತ್ರ ಮತ್ತು ಇದು ಅವರ ಮಂತ್ರವೂ ಹೌದು.
ಬಿಜೆಪಿ ಜೊತೆಗೆ ಇರುವುದರಿಂದ ಆಪರೇಷನ್ ಕಮಲ ಮತ್ತು ಆಪರೇಷನ್ ಜೆಡಿಎಸ್ ಮಾಡುವುದು ಸುಲಭವಾಗುತ್ತದೆ. ಕೇಂದ್ರ ಸರ್ಕಾರದ ಎಜೆನ್ಸಿಗಳನ್ನು ಬಳಸಿಕೊಂಡು ಕೆಲವರನ್ನು ಜೈಲಿಗೆ ಕಳುಹಿಸಬಹುದು. ಕೆಲವರನ್ನು ಬೆದರಿಸಿ ತಮ್ಮತ್ತ ಎಳೆದುಕೊಳ್ಳಬಹುದು. ಆಗ ರಾಜಕೀಯ ಚಿತ್ರವೇ ಬದಲಾಗುತ್ತದೆ. ಈ ಲೆಕ್ಕಾಚಾರ ಕುಮಾರಸ್ವಾಮಿ ಮತ್ತು ಅವರ ತಂದೆ ಹೆಚ್ ಡಿ ದೇವೇಗೌಡರ ಮನಸ್ಸಿನಲ್ಲಿದೆ. ಇದಕ್ಕೆ ಬೇಕಾದ ಕಾರ್ಯತಂತ್ರವನ್ನು ರೂಪಿಸುವ ಯೋಜನೆ ಹೊಂದಿದ್ದಾರೆ.
ಅವರ ಮುಂದಿರುವ ತಕ್ಷಣದ ಸವಾಲೆಂದರೆ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಕ್ಷೇತ್ರಗಳನ್ನು ಗೆಲ್ಲಬೇಕು. ಹಾಗೆ ಬಿಜೆಪಿ ಚಿನ್ಹೆಯಲ್ಲಿ ಸ್ಪರ್ಧಿಸಿರುವ ಡಾ. ಮಂಜುನಾಥ್ ಅವರನ್ನು ಗೆಲ್ಲಿಸಬೇಕು. ಇದಕ್ಕೆ ಮೀರಿ ಬೇರೆ ಕ್ಷೇತ್ರಗಳ ಬಗ್ಗೆ ಅವರಿಗೆ ಹೆಚ್ಚಿನ ಆಸಕ್ತಿ ಇಲ್ಲ.
ಈ ಗೆಲುವಿಗೆ ಅವರಿಗೆ ಮುಖ್ಯವಾಗಿರುವುದು ಒಕ್ಕಲಿಗರ ಮತಗಳ ಕ್ರೋಡೀಕರಣ. ಅದಕ್ಕಾಗಿ ಆದಿಚುಂಚನಗಿರಿ ಮಠದ ಜೊತೆಗಿರುವ ಭಿನ್ನಾಭಿಪ್ರಾಯಗಳನ್ನು ಮರೆಯುವ ಯತ್ನ ಮಾಡುತ್ತಿದ್ದಾರೆ. ನಿರ್ಮಲಾನಂದ ಸ್ವಾಮೀಜಿ ಜೊತೆಗಿನ ಸಂಬಂಧವನ್ನು ಸರಿಪಡಿಸುವ ಯತ್ನವನ್ನು ನಡೆಸುತ್ತಿದ್ದಾರೆ. ಹಿಂದಿನ ಸ್ವಾಮೀಜಿ ಬಾಲ ಗಂಗಾಧರನಾಥ ಸ್ವಾಮೀಜಿ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ಅವರ ಜೊತೆಗಿನ ಸಂಬಂಧ ಸರಿಪಡಿಸಲು ಸಾಧ್ಯವಿಲ್ಲದಷ್ಟು ಕೆಟ್ಟು ಹೋಗಿತ್ತು. ಆದರೆ ನಿರ್ಮಲಾನಂದ ಸ್ವಾಮೀಜಿ ಹಾಗಲ್ಲ. ಅವರು ಯಾರಿಗೂ ಮಠದ ಬಾಗಿಲು ಹಾಕುವುದಿಲ್ಲ. ಇದರ ಜೊತೆಗೆ ಅವರು ಬಳಸುವ ಇನ್ನೊಂದು ಅಸ್ತ್ರ ಭಾವನಾತ್ಮಕ ಅಸ್ತ್ರ. ಅವರು ಇತ್ತೀಚೆಗೆ ಆಡಿರುವ ಮಾತುಗಳನ್ನು ಗಮನಿಸಿ.
ಮುಂದಿನ ಒಂದು ವರ್ಷದಲ್ಲಿ ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ದೇವರ ಇಚ್ಛೆ, ನಿಮ್ಮ ಸೇವೆ ಮಾಡಲು ನನಗೆ ಇನ್ನೊಂದು ಅವಕಾಶ ಸಿಗುತ್ತದೆ. ನಾನು ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ನಿನ್ನ ಆಶೀರ್ವಾದದಿಂದಲೇ ನನಗೆ ಮೂರನೇ ಜನ್ಮ ಸಿಕ್ಕಿದೆ.
ಈ ಮಾತಿನ ಅರ್ಥ ಇಷ್ಟೇ ಒಂದು ವರ್ಷದ ನಂತರ ನಾನು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದೇ. ಅವರು ತಮ್ಮ ಮನಸ್ಸಿನಲ್ಲಿ ಇರುವ ಈ ಆಸೆಯನ್ನು ಹಾಸನದಲ್ಲಿ ಬಯಲು ಮಾಡಿದ್ದಾರೆ. ಹಾಸನದ ಅರಕಲಗೂಡಿನಲ್ಲಿ ಮಾತನಾಡುತ್ತ ಅವರು ಹೇಳಿದ ಮಾತುಗಳನ್ನು ಗಮನಿಸಿ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕೆ ನಮಗೆ ಹೊಟ್ಟೆಕಿಚ್ಚು ಇಲ್ಲ. ಆದರೆ ಬೆಳವಣಿಗೆಗಳನ್ನು ನೋಡಿದರೆ ರಾಜ್ಯ ಎಲ್ಲಿಗೆ ಹೋಗುತ್ತದೋ ಎಂಬ ಆತಂಕ ಕಾಡುತ್ತಿದೆ. ಖಾತರಿ ಯೋಜನೆಗಳಿಗೆ ಕಾಂಗ್ರೆಸ್ ಹಣ ಖರ್ಚು ಮಾಡುತ್ತಿಲ್ಲ. ಬದಲಾಗಿ, ಜನರ ಹಣದಿಂದ ಅನುಷ್ಠಾನಗೊಳಿಸಲಾಗುತ್ತಿದೆ.
ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತ ಬಂದ ಅವರಿಗೆ ಇದು ತಮಗೆ ಹೊಡೆತ ನೀಡಬಹುದು ಎಂದು ಜ್ಞಾನೋದಯ ಆದಂತಿದೆ. ಹೀಗಾಗಿ ಅವರು ಈ ಬಗೆಗಿನ ತಮ್ಮ ಟೀಕೆಯನ್ನು ಸ್ವಲ್ಪ ಬದಲಿಸಿಕೊಂಡಿದ್ದಾರೆ.
ಸರ್ಕಾರವು 1.05 ಲಕ್ಷ ಕೋಟಿ ಸಾಲ ಮಾಡಿದ್ದು, ಈ ಪೈಕಿ 58,000 ಕೋಟಿ ರೂ. ಗಳನ್ನು ಗ್ಯಾರಂಟಿಗಳಿಗೆ ವ್ಯಯಿಸುತ್ತಿದ್ದಾರೆ.
ರಾಜ್ಯದ ಮೇಲೆ 6.87 ಲಕ್ಷ ಕೋಟಿ ಸಾಲವಿದೆ. ಅದನ್ನು ಮರುಪಾವತಿ ಮಾಡುವವರು ಯಾರು? ಇಂದು ಕಾಂಗ್ರೆಸ್ ಸರ್ಕಾರ ಇದೆ, ನಾಳೆ ಹೋಗುತ್ತದೆ. ಜನರು ಅದನ್ನು ಮರುಪಾವತಿಸಬೇಕಾಗುತ್ತದೆ ಎಂದು ಅವರು ವಾದಿಸುತ್ತಾರೆ. ಆದರೆ ವಾಸ್ತವವೇ ಬೇರೆಯಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗೆ ವೆಚ್ಚ ಮಾಡುವ ಹಣ ಜಿ ಎಸ್ ಟಿ ರೂಪದಲ್ಲಿ ತಿರುಗಿ ಬರುತ್ತದೆ. ಅದು ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ ಕೇಂದ್ರಕ್ಕೂ ಬರುತ್ತದೆ. ಈ ವಿಚಾರವನ್ನು ಹೇಳಲು ಕುಮಾರಸ್ವಾಮಿ ಸಿದ್ದರಿಲ್ಲ.
ಏನೇ ಇರಲಿ ಕುಮಾರಸ್ವಾಮಿ ಅವರ ತಂತ್ರ ಮತ್ತು ಸ್ಪಷ್ಟವಾಗಿದೆ. ಅದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ಅವರಿಗೆ ಅಧಿಕಾರ ಬೇಕಾಗಿದೆ. ಅವರು ಅಧಿಕಾರಕ್ಕೆ ಬರುವುದನ್ನು ಅವರ ವೃದ್ಧ ತಂದೆ ಹೆಚ್.ಡಿ. ದೇವೇಗೌಡರು ನೋಡಬೇಕಾಗಿದೆ. ಉಳಿದಿದ್ದೆಲ್ಲ ಸುಳ್ಳು.
