ಬೆಂಗಳೂರು : ಬೆಂಗಳೂರು ಗ್ರಾಮಾಂತರ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸದ್ದು ಮಾಡುತ್ತಿರುವಷ್ಟು ಬೇರೆ ಕ್ಷೇತ್ರಗಳು ಮಾಡುತ್ತಿಲ್ಲ. ಇದಕ್ಕೆ ಕಾರಣ ಒಂದೆಡೆ ಡಿಕೆ ಸಹೋದರರು ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ. ಇವರ ನಡುವಿನ ರಾಜಕೀಯ ಜಿದ್ದು, ಒಕ್ಕಲಿಗ ರಾಜಕಾರಣ ಎಲ್ಲವೂ ಈ ಕ್ಷೇತ್ರವನ್ನು ಜಿದ್ದಾಜಿದ್ದಿಯ ಕಣವನ್ನಾಗಿ ಬದಲಾಯಿಸಿದೆ.
ಈಗ ಕೆಲವು ದಿನಗಳ ಹಿಂದೆ ಚನ್ನಪಟ್ಟಣದ 9 ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಇದಾದ ಮೇಲೆ ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ.
ನಿಜ ಇವರೆಲ್ಲ ದೊಡ್ದ ದೊಡ್ದ ನಾಯಕರಲ್ಲ. ಗ್ರಾಮ ಮತ್ತು ಹೋಬಳಿ ಮಟ್ಟದ ಕಾರ್ಯಕರ್ತರು. ಇವರ ಪಕ್ಷಾಂತರ ತಳ ಮಟ್ಟದಲ್ಲಿ ಪರಿಸ್ಥಿತಿಯನ್ನು ಬದಲಿಸಿ ಬಿಡುತ್ತದೆ. ಮೇಲೆ ನೋಡುವುದಕ್ಕೆ ಕಾಣುವುದಿಲ್ಲ.
ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಚುನಾವಣೆ ಗೆಲ್ಲಿ ಎಂಬ ಬಿಜೆಪಿಯ ಸ್ಲೋಗನ್ ಗೆ ಹೊಂದುವಂತಿದೆ. ಈ ಕಾರ್ಯಾಚರಣೆ. ಬೂತ್ ಮಟ್ಟದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಸೆಳೆದುಕೊಳ್ಳುವ ಮೂಲಕ ಅವರ ಮೂಲಕ್ಕೆ ಪೆಟ್ಟು ನೀಡಿದಂತಾಗುತ್ತದೆ.
ಹಾಗೆ ನೋಡಿದರೆ ದೊಡ್ಡ ದೊಡ್ಡ ನಾಯಕರ ಪಕ್ಷಾಂತರಕ್ಕಿಂತ ಇದು ಹೆಚ್ಚು ಪರಿಣಾಮಕಾರಿ. ಕನಕಪುರ ಒಂದು ಕಾಲದಲ್ಲಿ ಜನತಾ ದಳದ ಭದ್ರ ಕೋಟೆಯಾಗಿತ್ತು. ಆಗ ಶಿವಕುಮಾರ್ ಮತ್ತು ಸುರೇಶ್ ಇದೇ ಸ್ಟ್ರಾಟಜಿಯನ್ನು ಅನುಸರಿಸಿದ್ದರು. ಕನಕಪುರವನ್ನು ತಮ್ಮದಾಗಿಸಿಕೊಂಡಿದ್ದರು.
ಈಗ ಚನ್ನಪಟ್ಟಣದಲ್ಲೂ ಅದೇ ಪರಿಸ್ಥಿತಿ ಇದೆ. ಕಾರ್ಯಕರ್ತರನ್ನು ಕಳೆದುಕೊಂಡ ಕುಮಾರಸ್ವಾಮಿ ಬಿಜೆಪಿ ಕಾರ್ಯಕರ್ತರನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.







