ಸುದ್ದಿ ಟಿವಿ. ಪತ್ರಿಕಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶಶಿಧರ್ ಭಟ್ ಅವರ ಕನಸಿನ ಕೂಸು.  ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ  2016, ಅಕ್ಟೋಬರ್ 9ರಂದು ಲೋಕಾರ್ಪಣೆಗೊಂಡಿದೆ. ಸುದ್ದಿ ಟಿವಿ, ನಾವು ಸುಳ್ಳು ಹೇಳಲ್ಲ ಅನ್ನೋ ಧ್ಯೇಯ ವಾಕ್ಯ.  ಇದೀಗ ಸುದ್ದಿ ಟಿವಿ ಪುಟ್ಟ ಹೆಜ್ಜೆಯನ್ನಿಡುತ್ತಾ ನಾಡಿನ  ಜನ – ಮನ ತಲುಪುವ ಹಾದಿಯಲ್ಲಿ ಸಾಗುತ್ತಿದೆ. ದಕ್ಷಿಣ ಭಾರತದ ಹಾಗೂ ಕನ್ನಡದ ಮೊದಲ ಎಚ್​ಡಿ ನ್ಯೂಸ್​ ಚಾನೆಲ್​ ಅನ್ನೋ ಹೆಗ್ಗಳಿಕೆಗೂ ಸುದ್ದಿ ಟಿವಿ ಪಾತ್ರವಾಗಿದೆ.

ಸೋತಾಗ ಕುಗ್ಗಲಿಲ್ಲ. ಗೆದ್ದಾಗ ಬೀಗಲಿಲ್ಲ.  ಟೀಕೆ – ಚುಚ್ಚು ಮಾತಿಗೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ. ಎಲ್ಲವನ್ನು ಸವಾಲಾಗಿ ಸ್ವೀಕರಿಸಿದ ಶಶಿಧರ್ ಭಟ್, ಸುದ್ದಿ ಪರಿವಾರದ ಪ್ರಧಾನ ಸಂಪಾದಕರು ಹೌದು. ವ್ಯವಸ್ಥಾಪಕ ನಿರ್ದೇಶಕರೂ ಹೌದು. ಮಾಧ್ಯಮ ರಂಗದ ಮೂಲ ಕಟ್ಟುಪಾಡುಗಳಿಗೆ ದಕ್ಕೆಯಾಗದಂತೆ, ಸುದ್ದಿಯನ್ನು ಸುದ್ದಿಯಾಗಿ ಪ್ರಸಾರ ಮಾಡಬೇಕು. ಸಾಮಾಜಿಕ ನೆಲಗಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಜಾತಿ, ಧರ್ಮ, ಮತದ ಹೆಸರಿನಲ್ಲಿ ಸುದ್ದಿಯನ್ನು ತಿರುಚಬಾರದು. ಬೇರೆ ಸುದ್ದಿ ವಾಹಿನಿಗಳಿಗಿಂತ  ವಿಭಿನ್ನವಾಗಿ ಮೂಡಿಬರಬೇಕು ಅನ್ನೋ ಉದ್ದೇಶ ಸುದ್ದಿ ಟಿವಿಯದ್ದು.

ಸುದ್ದಿ ಟಿವಿ ಅಂದ್ರೆ ಸುದ್ದಿಯ ವೈಭವೀಕರಣವಿಲ್ಲ. ವ್ಯಕ್ತಿಯೊಬ್ಬನ ತೇಜೋವಧೆಗೆ ಅವಕಾಶವಿಲ್ಲ. ದಿನಪೂರ್ತಿ ಒಂದೇ ಸುದ್ದಿಯ ಬೆನ್ನಹಿಂದೆ ಬೀಳಲ್ಲ. ರಕ್ತ ಪಾತದ ದೃಶ್ಯಗಳನ್ನು ತೋರಿಸಲ್ಲ. ಕುಟುಂಬ ಜಗಳವನ್ನು ಸೀರಿಯಲ್​ ಆಗಿ ಪ್ರಸಾರ ಮಾಡಲ್ಲ.  ಸುದ್ದಿಯನ್ನು ಸುದ್ದಿಯನ್ನಾಗಿಸಿಕೊಂಡು ತೋರಿಸುವುದೇ ನಮ್ಮ ಕರ್ತವ್ಯ.  ಹಾಗೇ, ಭ್ರಷ್ಟಚಾರ, ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿರಂತರ. ಸುದ್ದಿಯ ಸತ್ಯ ದರ್ಶನದ ವಿಚಾರದಲ್ಲಿ ನಾವು ಯಾರ ಜತೆಗೂ ರಾಜೀಯಾಗಲ್ಲ. ಯಾರ ಒತ್ತಡಕ್ಕೂ ತಲೆಬಾಗುವುದಿಲ್ಲ. ಸಾಮಾಜಿಕ ನ್ಯಾಯ, ರೈತರು, ಕಾರ್ಮಿಕರು, ಶೋಷಿತರ ಪರವಾಗಿ ಧ್ವನಿ ಎತ್ತುವುದೇ ನಮ್ಮ ಕಾಯಕ.

ಪಾರದರ್ಶಕವಾಗಿ ಸುದ್ದಿ ಪ್ರಸಾರ ಮಾಡುವುದು ಪತ್ರಿಕಾ ಧರ್ಮ. ಅದೇ ರೀತಿಯಲ್ಲಿ ಸುದ್ದಿ ಟಿವಿ ಕೂಡ ಮುನ್ನಡೆಯುತ್ತಿದೆ. ಸುದ್ದಿಯ ಜತೆಗೆ ಸಾಮಾಜಿಕ ಬದಲಾವಣೆಯ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೂಡ ನಾವು ಪ್ರಸಾರ ಮಾಡುತ್ತೇವೆ. ಇನ್ನುಳಿದಂತೆ ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲೂ, ವಿನೂತನ ಹಾಗೂ ಪ್ರಯೋಗಾತ್ಮಕ ಕಾರ್ಯಕ್ರಮಗಳು ಸಹ ಪ್ರಸಾರವಾಗುತ್ತಿವೆ.

ಶಶಿಧರ್​ ಭಟ್ ಅವರ ಸಾರಥ್ಯದಲ್ಲಿ ಸುಮಾರು 350ಕ್ಕೂ ಅಧಿಕ ಸಿಬ್ಬಂದಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಹೈ-ಫೈ ತಂತ್ರಜ್ಞಾನ, ಸುಸಜ್ಜಿತವಾದ ಸ್ಟುಡಿಯೋಗಳ ಜತೆ ಹಳೆ ಬೇರು, ಹೊಸ ಚಿಗುರು ಅನ್ನೋ ಹಾಗೇ ವೃತ್ತಿನಿರತ ಪತ್ರಕರ್ತರು, ವೃತ್ತಿಪರತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುದ್ದಿ ಟಿವಿ ಮನೆ ಈಗ ಸುದ್ದಿ ಕುಟುಂಬವಾಗಿ ಬೆಳೆಯುತ್ತಿದೆ.