ಬೆಂಗಳೂರು : ಅಡಗೂರು ವಿಶ್ವನಾಥ್ ಮತ್ತೆ ಉಲ್ಟಾ ಹೊಡೆದಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎಚ್, ಡಿ.ಕುಮಾರಸ್ವಾಮಿ ಮತ್ತು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ ವಿಶ್ವನಾಥ್ ಬೆಂಬಲ ಘೋಷಿಸಿದ್ದಾರೆ.

ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಹೆಚ್ ವಿಶ್ವನಾಥ್ ಅವರು ಆ ಪಕ್ಷದಿಂದಲೂ ದೂರವನ್ನು ಕಾಯ್ದುಕೊಂಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗಿನ ವೈಮನಸ್ಸು ಮರೆತು ಒಂದಾಗಿದ್ದರು. ಆದರೆ ಈಗ ಮತ್ತೆ ಟೋಪಿ ತಿರುಗಿಸಿದ್ದಾರೆ.

ಬಹಳ ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದ ವಿಶ್ವನಾಥ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಸಂಬಂಧ ಕೆಟ್ಟು ಹೋಗಿತ್ತು. ಆಗ ಅವರು ಜೆಡಿಎಸ್ ಸೇರಿದರು. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರೂ ಆದರು.
ಕೊನೆಗೆ ಕುಮಾರಸ್ವಾಮಿ ಅವರ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಅಧ್ಯಕ್ಷ ಸ್ಥಾನವನ್ನು ತೊರೆದು ಆ ಪಕ್ಷವನ್ನು ಬಿಟ್ಟರು. ಮತ್ತೆ ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ನಂಬಲಾಗಿತ್ತು. ಮೈಸೂರು ಕ್ಷೇತ್ರದಿಂದ ಲೋಕಸಭೆಗೆ ವಿಶ್ವನಾಥ್ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರಿಗೆ ಟಿಕೆಟ್ ಕೈತಪ್ಪಿತು. ಲಕ್ಷಣ್ ಅವರಿಗೆ ಟಿಕೆಟ್ ನೀಡಲಾಯಿತು.

ಇದರಿಂದ ಕೋಪಗೊಂಡ ವಿಶ್ವನಾಥ್ ಈಗ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಇವತ್ತು ಕೆ.ಆರ್ ನಗರದ ವಿಶ್ವನಾಥ್ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿದರು. ವಿಶ್ವಣ್ಣ ಎಂದು ವಿಶ್ವನಾಥ್ ಹೆಗಲ ಮೇಲೆ ಕೈ ಹಾಕಿದರು. ಅಲ್ಲಿಗೆ ಕೋಪ ತಾಪ ಎಲ್ಲ ಮರೆಯಾಯಿತು.

Author

Leave a Reply

Your email address will not be published. Required fields are marked *