ಹಾವೇರಿ: ಲೋಕಸಭೆ ಚುನಾವಣೆ ನಂತರ ರಾಜ್ಯದ ಕಾಂಗ್ರೆಸ್ ಸರಕಾರ ಧೂಳಿಪಟವಾಗುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಬೃಹತ್ ರೋಡ್ ಶೋ ಹಾಗೂ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇದು ದೇಶದ ಭವಿಷ್ಯ ರೂಪಿಸುವ ಲೋಕಸಭೆಗೆ ನಡೆಯುವ ಚುನಾವಣೆ. ಈಗ ನಡೆಯುತ್ತಿರುವ ಚುನಾವಣೆ ಎರಡು ಪಕ್ಷ, ಎರಡು ಜಾತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ. ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ. ದೇಶಾದ್ಯಂತ ಬಿಜೆಪಿ ಪರವಾದ ಅಲೆ ಇದೆ. ರಾಜ್ಯದಲ್ಲಿಯೂ ಬಿಜೆಪಿ ಪರ ಅಲೆಯಿಂದ ಇದರಿಂದ ಸಿಎಂ ಡಿಸಿಎಂ ನಿದ್ದೆಗೆಟ್ಟಿದ್ದಾರೆ. ಲೋಕಸಭೆ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಧೂಳಿಪಟವಾಗಲಿದೆ ಎಂದು ಹೇಳಿದರು.
2014 ರ ಮುಂಚೆ ಯುಪಿಎ ಸರ್ಕಾರದ ಅವಧಿಯಲ್ಲಿ ಈ ದೇಶದ ಜನರು ಈ ದೇಶಕ್ಕೆ ಭವಿಷ್ಯ ಇಲ್ಲ ಎಂದು ಆಶಾಭಾವನೆ ಕಳೆದುಕೊಂಡಿದ್ದರು. ಆದರೆ, 2014 ರಲ್ಲಿ ಮೋದಿಯವರು ಬಂದ ನಂತರ ಭಾರತಕ್ಕೂ ಭವಿಷ್ಯ ಇದೆ. ಈ ದೇಶವನ್ನು ಭ್ರಷ್ಟಾಚಾರ ಮುಕ್ತವಾಗಿ ಅಭಿವೃದ್ದಿ ಮಾಡಬಹುದು ಎಂದು ತೋರಿಸಿಕೊಟ್ಡಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ನರೇಂದ್ರ ಮೋದಿಯವರು ಭ್ತಷ್ಟಾಚಾರ ರಹಿತ ಆಡಳಿತ ನೀಡಿದರು ಎಂದು ಹೇಳಿದರು.
ಮೋದಿಯವರು ಕೊವಿಡ್ ಸಂದರ್ಭದಲ್ಲಿ ದೇಶದ ಎಲ್ಲ ಬಡವರಿಗೆ ಉಚಿತ ಅಕ್ಕಿ ಕೊಡುತ್ತಿದ್ದಾರೆ. ಅದನ್ನು ರಾಜ್ಯ ಸರ್ಕಾರ ತನ್ನದು ಎಂದು ಹೇಳಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನೀಡುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ ಸ್ಥಗಿತಗೊಳಿಸಿದ್ದಾರೆ. ಬಸವರಾಜ ಬೊಮ್ಮಾಯಿ ಜಾರಿಗೊಳಿಸಿದ್ದ ವಿದ್ಯಾನಿಧಿ ಯೋಜನೆ ಸ್ಥಗಿತಗೊಳಿಸಿದ್ದಾರೆ ಎಂದರು.
ವಿದ್ಯುತ್ ಬಿಲ್ ಪ್ರತಿ ಯುನಿಟ್ ಗೆ 5 ರೂ. ದಿಂದ 8 ರೂ ಗೆ ಹೆಚ್ಚಳ ಮಾಡಿದ್ದಾರೆ. ಮದ್ಯದ ಬೆಲೆ ಹೆಚ್ಚಳ ಮಾಡಿದ್ದಾರೆ. ರಾಜ್ಯದಲ್ಲಿ ಭೀಕರ ಬರ ಬಂದರೂ ರೈತರಿಗೆ ಪರಿಹಾರ ನೀಡದೇ ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡುತ್ತಾರೆ. ಇಡಿ ದೇಶದಲ್ಲಿ ಎಂಟು ರಾಜ್ಯಗಳಲ್ಲಿ ಬರ ಇದೆ. ಯಾವ ಸಿಎಂಗಳೂ ಕೇಂದ್ರದ ಮೇಲೆ ಆರೋಪ ಮಾಡದೇ ತಮ್ಮ ಖಜಾನೆಯಿಂದ ಪರಿಹಾರ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಮಾತ್ರ ಹಣ ಕೊಡದೆ ರೈತರಿಗೆ ಮೋಸ ಮಾಡುತ್ತಿದ್ದಾರೆ. ಯಡಿಯುರಪ್ಪ ಸಿಎಂ ಆಗಿದ್ದಾಗ ಪ್ರವಾಹ ಬಂದಾಗ ಒಬ್ಬರೇ ಏಕಾಂಗಿಯಾಗಿ ಪ್ರವಾಹ ಪರಿಹಾರ ನೀಡಿದರು. ಆಗ ಯಡಿಯೂರಪ್ಪ ದೀಪಾವಳಿ ಮಾಡದೇ ಸಂತ್ರಸ್ತರ ಜೊತೆ ಹೋಗಿ ದೀಪಾವಳಿ ಆಚರಿಸಿದರು. ಅದು ಮಾತೃ ಹೃದಯಿ ನಾಯಕನಿಗೆ ಮಾತ್ರ ಸಾಧ್ಯ ಎಂದು ಹೇಳಿದರು.
