ಬೆಂಗಳೂರು, : “ನಮ್ಮ ದೇಶದ, ಅದರಲ್ಲೂ ನಮ್ಮ ಕರ್ನಾಟಕದ ಗ್ರಾಮೀಣ ಭಾಗದ ಬದುಕು, ಕಲೆ, ಸಂಸ್ಕೃತಿ ಸೇರಿದಂತೆ ಶೋಷಿತ ಜನಾಂಗದ ಬದುಕನ್ನು ತಮಟೆ ಚಿತ್ರದ ಮೂಲಕ ತೆರೆಯ ಮೇಲೆ ತರಲಾಗಿದೆ. ಈ ಮೂಲಕ ನಮ್ಮೆಲ್ಲರ ಆಲೋಚನೆಗಳನ್ನು ಮರು ಚಿಂತನೆಗೆ ಒಳಪಡಿಸಲಾಗಿದೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಕನ್ನಡದ ನಟ ಮಯೂರ್ ಪಟೇಲ್ ನಿರ್ದೇಶಿಸಿ, ಅವರ ತಂದೆ, ನಟ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮದನ್ ಪಟೇಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ “ತಮಟೆ” ಚಲನಚಿತ್ರದ ತುಣುಕನ್ನು (ಶೋ ರೀಲ್) ಬುಧವಾರದಂದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

“ನಾನು ಈ ಹಿಂದೆ ಟೂರಿಂಗ್ ಟಾಕೀಸ್ ನಡೆಸುತ್ತಿದ್ದೆ. ಈಗ ಚಲನಚಿತ್ರ ಪ್ರದರ್ಶನಕ್ಕಾಗಿಯೇ 21 ಪರದೆಗಳು ನಮ್ಮ ಕುಟುಂಬ ಹೊಂದಿದೆ. ಆದರೂ ಒಮ್ಮೆಯೂ ಒಟ್ಟಿಗೆ ಕುಳಿತು ಚಲನಚಿತ್ರ ನೋಡಲು ಆಗಿಲ್ಲ. ಆದರೆ 25 ವರ್ಷಗಳ ನಂತರ ‘ತಮಟೆ’ ಚಿತ್ರದ ತುಣುಕುಗಳನ್ನು ಅರ್ಧ ಗಂಟೆ ವೀಕ್ಷಿಸಿದೆ.

ಈ ದೇಶದ ಆಸ್ತಿಯೇ ನಮ್ಮ ಸಂಸ್ಕೃತಿ. ಪ್ರತಿ ಊರು, ನಾಡ ಹಬ್ಬ ಆಚರಣೆಯಲ್ಲೂ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ನೀಡಲಾಗಿರುತ್ತದೆ. ಕೊಂಡ ಹಾಯುವುದು, ತಮಟೆ ನುಡಿಸುವುದು ಹೀಗೆ. ಆದರೆ ಇದನ್ನು ನೋಡುವ ಭಕ್ತರು ನೂರಾರು ಮಂದಿ.

ಐದು ಬೆರಳು ಸೇರಿದಾಗ ಮಾತ್ರ ಮುಷ್ಠಿಗೆ ಶಕ್ತಿ ಬರುತ್ತದೆ. ಇದೇ ರೀತಿ ಎಲ್ಲರೂ ಸೇರಿದಾಗ ಮಾತ್ರ ಸಮಾಜ ಬಲಿಷ್ಠವಾಗುತ್ತದೆ. ತಮಟೆ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಶೋಷಿತ ಸಮುದಾಯದ ಕಥೆಯನ್ನು ಚೆನ್ನಾಗಿ ಹೇಳಿದ್ದಾರೆ. ಈಗ ಬದುಕು ಸ್ವಲ್ಪ ಸುಧಾರಣೆಯಾಗುತ್ತಿದೆ ಎನ್ನಬಹುದು. ಮಯೂರ್ ಪಟೇಲ್ ಅವರು ಸಮುದಾಯದ ಹಿಂದಿನ ಸ್ಥಿತಿಗತಿಗಳನ್ನು ಚೆನ್ನಾಗಿ ಹೇಳಿದ್ದಾರೆ.

ನನಗೆ ತಮಟೆಯ ಶಕ್ತಿ ಗೊತ್ತಿದೆ. ಕನಕಪುರದಲ್ಲಿ ನಾವು ಆಯೋಜಿಸುವ ಕನಕೋತ್ಸದಲ್ಲಿ, ಜಿಲ್ಲೆಯ ಎಲ್ಲಾ ತಮಟೆ ಕಲಾವಿದರನ್ನು ಸೇರಿಸಿ ಅವರಿಗೆ ಸ್ಪರ್ಧೆ ಆಯೋಜಿಸಿ, ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಾ ಬಂದಿದ್ದೇವೆ.

ಮದನ್ ಪಟೇಲ್ ಅವರು ಹಲವಾರು ವರ್ಷಗಳಿಂದ ಕಲಾ ಸೇವೆ ಮಾಡಿಕೊಂಡು ಬಂದಿದ್ದಾರೆ. ಅವರ ಮಗ ಚೆನ್ನಾಗಿ ತಮಟೆ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಎನಿಸುತ್ತಿದೆ. ಮುಂದೊಂದು ದಿನ ಸಂಪೂರ್ಣ ಚಿತ್ರವನ್ನು ವೀಕ್ಷಣೆ ಮಾಡಲಾಗುವುದು” ಎಂದರು.

ಇದೇ ವೇಳೆ ನಟ ಮದನ್ ಪಟೇಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

Author

Leave a Reply

Your email address will not be published. Required fields are marked *