ಹೈದರಾಬಾದ್ : ಈ ಬಾರಿಯ ಐಪಿಎಲ್ ನ ವಿಶೇಷ ಅಂದರೆ ಮುಂಬೈ ತಂಡದ ಕಳಪೆ ಪ್ರದರ್ಶನ, ಅಂಬಾನಿ ದಣಿಗಳ ತಂಡ ಮುಗ್ಗರಿಸುತ್ತಿದೆ. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಇಳಿಸಿದ್ದು ತಂಡದ ಲಕ್ ಅನ್ನೆ ಕಸಿದುಕೊಂಡಂತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ 31 ರನ್ ಗಳಿಂದ ಮುಂಬೈ ತಂಡವನ್ನು ಮಣಿಸಿತು. ಬಹಳಷ್ಟು ಅಭಿಮಾನಿಗಳು ಈ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ.

ಹೈದರಾಬಾದ್ ನಲ್ಲಿ ನಡೆದ ಐಪಿಎಲ್ 2024 8 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸನ್​ರೈಸರ್ಸ್ ಹೈದರಾಬಾದ್ ತಂಡ 31 ರನ್ ಗಳಿಂದ ಮಣಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡದ ಲೆಕ್ಕಾಚಾರ ಕೈಕೊಟ್ಟಿತು. ಬೌಲರ್ ಗಳು ಹೈದರಾಬಾದ್ ತಂಡದ ಬ್ಯಾಟ್ಸ್ ಮನ್ ಗಳನ್ನು ನಿಯಂತ್ರಿಸುವಲ್ಲಿ ವಿಫಲರಾದರು.. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 13 ಎಸೆತಗಳಲ್ಲಿ 11 ರನ್ ಗಳಿಸಿದರೆ, ಟ್ರಾವಿಸ್ ಹೆಡ್ 24 ಎಸೆತಗಳಲ್ಲಿ 62 ರನ್ ಗಳಿಸಿದರು. ಅಭಿಷೇಕ್ ಶರ್ಮಾ 23 ಎಸೆತಗಳಲ್ಲಿ 63 ರನ್ ಗಳಿಸಿ ಮುಂಬೈ ತಂಡವನ್ನು ಕಾಡಿದರು ಈ ಜೋಡಿ, ತಂಡ ದಾಖಲೆಯ ಮೊತ್ತವನ್ನು ಗಳಿಸಲು ನೆರವಾಯಿತು.

ಬಳಿಕ ಐಡೆನ್ ಮಾರ್ಕ್ರಾಮ್ (28 ಎಸೆತಗಳಲ್ಲಿ 42 ರನ್) ಹೆನ್ರಿಕ್ ಕ್ಲಾಸೆನ್ (34 ಎಸೆತಗಳಲ್ಲಿ 80 ರನ್) ಗಳಿಸಿದರು. ಇದರಿಂದ ಹೈದರಾಬಾದ್ ಬೃಹತ್ ಮೊತ್ತದ ರನ್ ಗಳಿಸಲು ಸಾಧ್ಯವಾಯಿತು. 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಹೈದರಾಬಾದ್ ತಂಡ ದಾಖಲೆಯ 277 ರನ್ ಗಳಿಸಿತು.

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗಲೇ ಇಲ್ಲ. ಆದರೆ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿ 31 ರನ್ ಗಳಿಂದ ಸೋಲೊಪ್ಪಿಕೊಂಡಿತು. ಅಭಿಷೇಕ್ ಶರ್ಮಾ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *