ವಿಶೇಷ ವರದಿ
ಯಾದಗಿರಿ: ಸಾಧಕರಿಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುವುದು ಮತ್ತೆ ಸಾಬೀತಾಗಿದೆ. ಬಡ ಕೂಲಿಕಾರರ ಕುಟುಂಬ ದಲ್ಲಿ ಜನಿಸಿ ಒಂದು ಸರ್ಕಾರಿ ಉದ್ಯೂಗ ಸಿಕ್ಕರೆ ಸಾಕು ಎನ್ನುವವರ ಮಧ್ಯೆ ಇಲ್ಲೊಬ್ಬ ಯುವಕ ಏಕಕಾಲಕ್ಕೆ ನಾಲ್ಕು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು, ಜಿಲ್ಲೆಯ ಹುಣಸಗಿ ಕೋಳಿಹಾಳ ನಡುವಿನ ತಾಂಡಾದ ಯುವಕ ತಿರುಪತಿ ಪೂರಪ್ಪ ಚೌಹಾಣ್ ಅವರು ನಾಲ್ಕು ಸರ್ಕಾರಿ ಹುದ್ದೆಗೆ ಗಿಟ್ಟಿಸಿಕೊಂಡಿದ್ದಾರೆ. ಹುಣಸಗಿ ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೋಳಿಹಾಳ ನಡುವಿನ ತಾಂಡಾದ ಜನ ಗುಳೆ ಹೋಗುವದು ಸಾಮಾನ್ಯ. ಅಂಥ ಪರಿಸ್ಥಿತಿಯಲ್ಲಿ ತಂದೆ ಹಾಗೂ ತಾಯಿಯ ಶ್ರಮಕ್ಕೆ ಪ್ರತಿಫಲವಾಗಿ ಏನಾದರೂ ಸಾಧನೆ ಮಾಡಬೇಕೆಂಬ ಗುರಿಯಿಂದ ಉತ್ತಮ ಅಭ್ಯಾಸ ಮಾಡಿ ಇಂದು ಸೈ ಎನಿಸಿಕೊಂಡಿದ್ದಾರೆ.
ತಿರುಪತಿ ಅವರು 01 ರಿಂದ 03 ನೇ ತರಗತಿಯವರೆಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿದ್ದು, ಬಳಿಕ 4 ಮತ್ತು 5 ನೇ ತರಗತಿಯನ್ನು ಗೆದ್ದಲಮರಿ ಶಾಲೆಯಲ್ಲಿ ಓದಿದ್ದಾರೆ. ಬಳಿಕ 8 ರಿಂದ 10ನೇ ತರಗತಿಯವರೆಗೆ ತಾಳಿಕೋಟೆಯ ಸಂಗಮೇಶ್ವರ ಪ್ರೌಢ ಶಾಲೆಯಲ್ಲಿ ಅಭ್ಯಾಸ ಮಾಡಿ ಡಿಪ್ಲೋಮಾ ಗದಗನಲ್ಲಿ ಮುಗಿಸಿ ವಿಜಯಪುರದಲ್ಲಿ ಸಿವಿಲ್ ಎಂಜಿನಿಯರಿಂಗ್ ಪೂರೈಸಿದ್ದಾರೆ.
ಮನೆಯಲ್ಲಿ ಬಡತನ ತಾಂಡವವಾಡುತ್ತಿತ್ತು. ತಂದೆ ತಾಯಿ ಕಷ್ಟ ನೋಡಲಾಗದೆ. ದೊಡ್ಡ ಸರ್ಕಾರಿ ಹುದ್ದೆ ಸೇರಬೇಕು ಎನ್ನುವ ಛಲದೊಂದಿಗೆ ಧಾರವಾಡದಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯುತ್ತಾರೆ. ಓದಿಗೆ ಹಣದ ಅವಶ್ಯಕತೆ ಇದ್ದಾಗ ಅವರ ಸಂಬಂಧಿಯೊಬ್ಬರು ನೆರವಾಗುತ್ತಾರೆ.
ಆಯ್ಕೆಯಾದ ಹುದ್ದೆಗಳು :
ಸದ್ಯ ಕಲಬುರಗಿಯಲ್ಲಿ ತರಬೇತಿ ಪಡೆಯುತ್ತಿರುವ ತಿರುಪತಿ, ಶಿವಮೊಗ್ಗದ ಕೆಎಸ್ಆರ್ಪಿಯಲ್ಲಿ ವಿಶೇಷ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದು, ಸ್ಥಳೀಯ ಸಂಸ್ಥೆಗಳಲ್ಲಿನ ಪೌರಾಡಳಿತ ಇಲಾಖೆಯ ಕಿರಿಯ ಎಂಜಿನಿಯರ್ ಹುದ್ದೆಗೆ ಕಳೆದ ಮಾರ್ಚ್ 2024ರಲ್ಲಿ ಆಯ್ಕೆಯಾಗಿದ್ದಾರೆ. ನಗರ ಮತ್ತು ಗ್ರಾಮಾಂತರ ಇಲಾಖೆಯಡಿ ಸಹಾಯಕ ನಗರ ಯೋಜಕರ ಹುದ್ದೆಗೆ ಇದೇ ವರ್ಷದ ಮಾರ್ಚ್ನಲ್ಲಿ ಆಯ್ಕೆಯಾಗಿದ್ದಾರೆ. ಜಲ ಸಂಪನ್ಮೂಲ ಇಲಾಖೆಯಡಿ ಕಿರಿಯ ಎಂಜಿನಿಯರ್ ಸಿವಿಲ್ ಹುದ್ದೆಗೆ 2024 ಜನವರಿಯಲ್ಲಿ ಆಯ್ಕೆಯಾಗಿದ್ದಾರೆ.
ಒಟ್ಟಿನಲ್ಲಿ ಬಡತನವೆಂದು ತೆಲೆ ಮೇಲೆ ಕೈಹೊತ್ತು ಕುಳಿತುಕೊಳ್ಳದೆ. ಪ್ರಯತ್ನ ಪಟ್ಟರೆ ಏನಬೇಕಾದರೂ ಮಾಡಬಹುದು ಎಂದು ಛಲ ಬಿಡದೆ, ತಿರುಪತಿ ನಾಲ್ಕು ಹುದ್ದೆ ಪಡೆಯುವ ಮೂಲಕ ಮಾದರಿಯಾಗಿದ್ದಾರೆ.
