ವಯಲಿನ್ ಅಥವಾ ಪಿಟೀಲು ಎಂಬ ತಂತಿ ವಾದ್ಯದ ಇತಿಹಾಸ, ಜನಪದ ಮಹತ್ವ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಅದರ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿ.
ಸಂಗೀತವು ಮಾನವನ ಮನಸ್ಸು ಮತ್ತು ಭಾವನೆಗಳಿಗೆ ನೇರವಾಗಿ ಸ್ಪರ್ಶಿಸುವ ಶಕ್ತಿ ಹೊಂದಿದೆ. ಅಂತಹ ಸಂಗೀತ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ತಂತಿ ವಾದ್ಯವೇ ವಯಲಿನ್, ಕರ್ನಾಟಕದ ಕೆಲ ಭಾಗಗಳಲ್ಲಿ ಮತ್ತು ಜನಪದ ಸಂಸ್ಕೃತಿಯಲ್ಲಿ ಇದನ್ನು “ಪಿಟೀಲು” ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ವಯಲಿನ್ ಒಂದು ಚಿಕ್ಕದಾದ ತಂತಿ ವಾದ್ಯವಾಗಿದ್ದು, ನಾಲ್ಕು ತಂತಿಗಳನ್ನು ಹೊಂದಿರುತ್ತದೆ. ಇದನ್ನು ಸಾಮಾನ್ಯವಾಗಿ ಕಂಠದ ಮೇಲೆ ಇಟ್ಟು, ಬೋ ಸಹಾಯದಿಂದ ನುಡಿಸಲಾಗುತ್ತದೆ. ಇದರ ಮಧುರ ಮತ್ತು ಭಾವನಾತ್ಮಕ ಧ್ವನಿ ಶ್ರೋತೃಗಳ ಹೃದಯವನ್ನು ಆಕರ್ಷಿಸುತ್ತದೆ.
ಗ್ರಾಮೀಣ ಹಾಗೂ ಜನಪದ ಸಂಗೀತದಲ್ಲಿ ವಯಲಿನ್‌ಗೆ ಹತ್ತಿರದ ರೂಪವನ್ನು ಪಿಟೀಲು ಎಂದು ಕರೆಯಲಾಗುತ್ತದೆ. ಜನಪದ ಹಾಡುಗಳು, ಕಥನಗಳು, ಹರಿಕಥೆ, ಯಕ್ಷಗಾನ ಮತ್ತು ಗ್ರಾಮೀಣ ನಾಟಕಗಳಲ್ಲಿ ಪಿಟೀಲು ಮಹತ್ವದ ಪಾತ್ರ ವಹಿಸಿದೆ. ಸರಳ ವಿನ್ಯಾಸ ಮತ್ತು ನೈಸರ್ಗಿಕ ಧ್ವನಿಯೇ ಪಿಟೀಲಿನ ವಿಶೇಷತೆ. ಪಿಟೀಲು /ವಯಲಿನ ನುಡಿಸುವವನ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿದೆ. ಇದು ಶಾಸ್ತ್ರೀಯ, ಲಘು, ಜನಪದ ಹಾಗೂ ಚಲನಚಿತ್ರ ಸಂಗೀತಕ್ಕೆ ಹೊಂದಿಕೊಳ್ಳುತ್ತದೆ. ಏಕವ್ಯಕ್ತಿಯ ವಾದ್ಯವಾಗಿಯೂ, ಸಹವಾದ್ಯವಾಗಿಯೂ ಬಳಕೆಯಾಗುತ್ತದೆ. ಮಕ್ಕಳಿಂದ ವೃದ್ಧರ ತನಕ ಕಲಿಯಬಹುದಾದ ವಾದ್ಯವಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ವಯಲಿನ್ ಇಂದು ಅತ್ಯಂತ ಪ್ರಮುಖ ವಾದ್ಯವಾಗಿದೆ. ವಿಶೇಷವಾಗಿ ಕರ್ನಾಟಕ ಸಂಗೀತದಲ್ಲಿ ವಯಲಿನ್ ಸಹವಾದ್ಯವಾಗಿ ಬಳಸಲಾಗುತ್ತದೆ. ವೀಣೆ ಮತ್ತು ವಯಲಿನ್‌ಗಳ ಸಂಗಮ ಸಂಗೀತ ಪ್ರೇಮಿಗಳಿಗೆ ಅಪಾರ ಆನಂದ ನೀಡುತ್ತದೆ.
ಮೈಸೂರು ಆಸ್ಥಾನ ಕಲಾವಿದರಾಗಿದ್ದ ಪಿಟೀಲು ಚೌಡಯ್ಯ ಐತಿಹಾಸಿಕ ಮಹತ್ವ ಉಳ್ಳವರು. ಪ್ರಸ್ತುತದಲ್ಲಿ ಭಾರತದ ಪಗನಿನಿ ಎಂದೇ ಕರೆಸಿಕೊಳ್ಳುವ ಡಾ. ಎಲ್. ಸುಬ್ರಮಣ್ಯಂ ಅವರನ್ನು “ಭಾರತೀಯ ವಯೋಲಿನ್‌ನ ದೇವರು” ಎಂದು ಸಹ ಕರೆಯಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಜೊತೆಗೆ ಪಾಶ್ಚಿಮಾತ್ಯ ಶಾಸ್ತ್ರೀಯ ಮತ್ತು ಜಾಝ್ ಸಂಗೀತದಲ್ಲೂ ಪರಿಣತಿ ಹೊಂದಿದ್ದಾರೆ. ಸಲಾಂ ಬಾಂಬೆ ಮತ್ತು ಲಿಟಲ್ ಬುದ್ಧ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಇವರಲ್ಲದೆ ಕುನ್ನಕುಡಿ ವೈದ್ಯನಾಥನ್ ಕರ್ನಾಟಕ ಸಂಗೀತದ ದಂತಕಥೆಯಾಗಿದ್ದ ಇವರು ತಮ್ಮದೇ ಆದ ವಿಶಿಷ್ಟ ಬೆರಳುಗಳ ಚಲನೆಯ ತಂತ್ರಗಳಿಗೆ ಮತ್ತು ವಿದ್ವಾಂಸರು ಹಾಗೂ ಸಾಮಾನ್ಯ ಜನರನ್ನು ರಂಜಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದರು. ಇವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು.
ಡಾ. ಎನ್. ರಾಜಂ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿ. ವಯೋಲಿನ್‌ನಲ್ಲಿ ಮಾನವ ಧ್ವನಿಯ ಸೂಕ್ಷ್ಮ ವ್ಯತ್ಯಾಸಗಳನ್ನು ಅನುಕರಿಸುವ ‘ಗಾಯಕಿ-ಅಂಗ್’ (ಹಾಡುವ ಶೈಲಿ) ಅನ್ನು ಪರಿಚಯಿಸಿದವರಲ್ಲಿ ಇವರು ಮೊದಲಿಗರು. ಇವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
ಎಂ. ಎಸ್. ಗೋಪಾಲಕೃಷ್ಣನ್ ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಪ್ರಕಾರಗಳಲ್ಲಿ ಸಮಾನ ಸಾಮರ್ಥ್ಯ ಹೊಂದಿದ್ದ ಇವರು, ಪಾಶ್ಚಿಮಾತ್ಯ ಬೋಯಿಂಗ್ ಮತ್ತು ಫಿಂಗರಿಂಗ್ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದರು.
ಲಾಲ್ಗುಡಿ ಜಯರಾಮನ್ ಪ್ರಮುಖ ಕರ್ನಾಟಕ ವಯೋಲಿನ್ ವಾದಕರು, ಗಾಯಕರು ಮತ್ತು ಸಂಯೋಜಕರು. ಇವರು ತಮ್ಮ ಸ್ವಚ್ಛ ಶೈಲಿ ಮತ್ತು ಸಂಗೀತ ಜಗತ್ತಿಗೆ ನೀಡಿದ ಮಹತ್ವದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ.
ಟಿ.ಎನ್. ಕೃಷ್ಣನ್ ಸಂಗೀತ ಪ್ರತಿಭೆಯ ರಾಜವಂಶದ ಭಾಗವಾಗಿದ್ದ ಇವರು ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧ ಮತ್ತು ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಕಲಾ ರಾಮನಾಥ್ ಅವರಂತಹ ಇತರ ಪ್ರಸಿದ್ಧ ವಯೋಲಿನ್ ವಾದಕರಿಗೆ ದೊಡ್ಡಪ್ಪನ್ನವರಾಗಿದ್ದರು.
ಮಹಿಳೆಯರೂ ಈ ಕ್ಷೇತ್ರದಲ್ಲಿ ಹಿಂದುಳಿದಿಲ್ಲ. ಅಕ್ಕರೈ ಸುಬ್ಬಲಕ್ಷ್ಮಿ, ಜ್ಯೋತ್ಸ್ನಾ ಶ್ರೀಕಾಂತ್, ಸಂಗೀತಾ ಶಂಕರ್, ರಾಗಿಣಿ ಶಂಕರ್ ಮತ್ತು ನಂದಿನಿ ಶಂಕರ್ ತಮ್ಮ ತಾಂತ್ರಿಕ ಪ್ರತಿಭೆ, ಬಹುಮುಖತೆ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ಜಾಗತಿಕ ತಿಳುವಳಿಕೆಗೆ ನೀಡಿದ ಆಳವಾದ ಕೊಡುಗೆಗಳಿಗಾಗಿ ಆಚರಿಸಲ್ಪಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲೂ ವಯಲಿನ್ ತರಬೇತಿ ನೀಡಲಾಗುತ್ತಿದೆ. ಮಕ್ಕಳಲ್ಲಿ ಏಕಾಗ್ರತೆ, ಶಿಸ್ತು ಮತ್ತು ಸೃಜನಶೀಲತೆಯನ್ನು ಬೆಳೆಸಲು ವಯಲಿನ್ ಅಧ್ಯಯನ ಸಹಕಾರಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ವಯಲಿನ್ ಅಥವಾ ಪಿಟೀಲು ಕೇವಲ ಒಂದು ವಾದ್ಯವಲ್ಲ; ಅದು ಭಾವನೆಗಳ ಭಾಷೆ. ಶಾಸ್ತ್ರೀಯ ಸಂಗೀತದಿಂದ ಜನಪದ ರಂಗದವರೆಗೆ, ಮನರಂಜನೆಯಿಂದ ಧ್ಯಾನದವರೆಗೆ, ವಯಲಿನ್ ತನ್ನ ಮಧುರ ನಾದದಿಂದ ಮಾನವನ ಜೀವನಕ್ಕೆ ಸಂಗೀತದ ಸೌಂದರ್ಯವನ್ನು ತುಂಬುತ್ತಿದೆ. ಈ ಕಾರಣಕ್ಕೇ ವಯಲಿನ್ ಇಂದು ಕೂಡ ಸಂಗೀತ ಲೋಕದಲ್ಲಿ ಅಜರಾಮರವಾಗಿದೆ.
