ಬೆಂಗಳೂರು, ನವೆಂಬರ್ ೩೦: ಅದೊಂದು ಮುಖ. ಆ ಮುಖವನ್ನು ಕಣ್ಣೆದುರು ತಂದರೆ ಸಾಕು ನಗು ಹಾಗೇ ಮೂಡುತ್ತದೆ. ಅವರ ಮಾತಿಗಿಂತ ಮೊದಲು ಅವರ ದೇಹಭಾಷೆ, ಆಂಗಿಕ ಅಭಿನಯ ಮೊದಲು ನಗುವನ್ನು ತರುತ್ತಿತ್ತು. ಅಂತಹ ಒಬ್ಬ ಹಾಸ್ಯ ನಟ ಉಮೇಶ್. ತಮ್ಮ ಸುದೀರ್ಘ ನಟನಾ ಪಯಣವನ್ನು ಕೊನೆಗೊಳಿಸಿದ್ದಾರೆ. ೮೦ ವರ್ಷಗಳ ತುಂಬು ಜೀವನ ಸಾಗಿಸಿ ಇದೀಗ ಬಾರದ ಲೋಕಕ್ಕೆ ತೆರಳಿದ್ದಾರೆ. ಬಿದ್ದು ಪೆಟ್ಟಾಗಿ ಆಸ್ಪತ್ರೆ ಸೇರಿದ್ದ ಉಮೇಶ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಆದಾಗ್ಯೂ ಲವಲವಿಕೆಯನ್ನು ಹೊದ್ದಿದ್ದ ಉಮೇಶ್ ಸದ್ದಿಲ್ಲದೆ ಸುಮ್ಮನಾಗಿಬಿಟ್ಟಿದ್ದಾರೆ.

೧೯೪೫ರ ಏಪ್ರಿಲ್ ೨೪ರಂದು ಮೈಸೂರು ಶ್ರೀಕಂಠಯ್ಯ ಉಮೇಶ್ ಎಂ.ಎಸ್.ಉಮೇಶ್ ಜನಿಸಿದ್ದರು. ೪ನೇ ವಯಸ್ಸಿನಿಂದಲೇ ರಂಗವೇರಿದ್ದ ಉಮೇಶ್ ತಮ್ಮ ೧೫ನೇ ವಯಸ್ಸಿಗೆ ೧೯೬೦ರಲ್ಲಿ ಬಿಡುಗಡೆಯಾದ ಮಕ್ಕಳ ರಾಜ್ಯ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಒಂದು ಯಶಸ್ವಿ ಚಿತ್ರದಿಂದ ಆರಂಭಿಸಿದರೂ ಮುಂದಿನ ದಿನಗಳು ಅಷ್ಟು ಸುಲಭವಾಗಿರಲಿಲ್ಲ. ಅತ್ತ ಮಕ್ಕಳ ಸಾಲಿಗೂ ಸೇರದ, ದೊಡ್ಡವರಾಗಿಯೂ ಇಲ್ಲದ ಉಮೇಶ ಸಿನಿಮಾ ಪಾತ್ರಗಳಿಲ್ಲದೆ ಸುಮಾರು ೧೫ ವರ್ಷ ಕಷ್ಟಪಟ್ಟಿದ್ದರು. ೧೯೭೪ರಲ್ಲಿ ಪುಟ್ಟಣ್ಣ ಕಣಗಾಲ್ ಅವರನ್ನು ಮತ್ತೆ ಚಿತ್ರರಂಗಕ್ಕೆ ಕರೆತಂದು ತಿಮ್ಮರಾಯಿ ಪಾತ್ರ ಮಾಡಿಸಿದರು. ಕಥಾಸಂಗಮದ ಆ ಪೋಷಕ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಸಹ ಲಭಿಸಿತು. ಅಂದಿನಿಂದ ಇಲ್ಲಿಯವರೆಗೆ ಸುಮಾರು ೬ ದಶಕಗಳಿಗೂ ಹೆಚ್ಚಿನ ಕಾಲ ತಮ್ಮದೇ ಹಾಸ್ಯ ಮತ್ತು ಪ್ರಬುದ್ಧ ನಟನೆಯಿಂದ ರಂಗಭೂಮಿ, ಸಿನಿಮಾ, ಟಿವಿಗಳಲ್ಲಿ ಮಿಂಚಿದರು. ೪೦೦ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ತಮ್ಮ ಹಾಸ್ಯ ಮತ್ತು ಪೋಷಕ ಪಾತ್ರಗಳ ಮೂಲಕ ಜನಮಾನಸವನ್ನು ಗೆದ್ದರು. ನಾಗರಹೊಳೆ, ಗುರುಶಿಷ್ಯರು, ಕಾಮನಬಿಲ್ಲು, ಶ್ರುತಿ ಸೇರಿದಾಗ, ಶ್ರಾವಣ ಬಂತು, ಮಲಯ ಮಾರುತ, ನೀನು ನಕ್ಕರೆ ಹಾಲು ಸಕ್ಕರೆ, ಅನುಪಮ , ವೆಂಕಟ ಇನ್ ಸಂಕಟ ಅವರ ಕೆಲವು ಪ್ರಸಿದ್ಧ ಸಿನಿಮಾಗಳು.

ಉಮೇಶ್ ಎಂದರೆ ನಗುವಿನ ಖಾಸಗಿ ಬ್ರ್ಯಾಂಡ್. ೧೯೯೦ರಲ್ಲಿ ತೆರೆಕಂಡ ಗೋಲ್ ಮಾಲ್ ರಾಧಾಕೃಷ್ಣ ಚಿತ್ರದ ಸೀತಾಪತಿ ಪಾತ್ರ ಅವರ ಖ್ಯಾತ ಪಾತ್ರಗಳಲ್ಲೊಂದು. ಅದರಲ್ಲಿ ಬರುವ “ಅಪಾರ್ಥ ಮಾಡ್ಕೊಬಿಡ್ತೀರೊ ಏನೊ” ಎನ್ನುವ ಸಂಭಾಷಣೆ ಇಂದಿಗೂ ಜನಪ್ರಿಯ. ಅವರ ಸರಳ, ನೋವಿನ ಬದುಕಿನಲ್ಲಿಯೇ ಹಾಸ್ಯವನ್ನ ತರ ಮುಖಭಾವ, ಸಂಭಾಷಣೆ, ಹಾಸ್ಯಪ್ರಜ್ಞೆ ಎಲ್ಲವನ್ನೂ ತಮ್ಮದೇ ಸ್ಪಷ್ಟ ಶೈಲಿಯಲ್ಲಿ ತೋರಿಸುತ್ತಿದ್ದ ಕಲಾವಿದ. ಪೋಷಕ ಪಾತ್ರಗಳಲ್ಲಿಯೂ ಅವರು ಭಾವನಾತ್ಮಕ ಯಶಸ್ಸು ಗಳಿಸುವಲ್ಲಿ ಸಫಲರಾದರು.

ಇವರೊಳಗಿನ ಕಲಾವಿದನನ್ನು ಗುರುತಿಸಿ ೧೯೭೫ರಲ್ಲಿ ಕಥಾ ಸಂಗಮ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿ, ೨೦೧೩ರಲ್ಲಿ ರಂಗಭೂಮಿ ಮತ್ತು ಚಲನಚಿತ್ರರಂಗಕ್ಕೆ ಕೊಟ್ಟ ಕೊಡುಗೆಗಾಗಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ.
ಇತ್ತೀಚೆಗೆ, ಉಮೇಶ್ ಅವರ ಆರೋಗ್ಯ ಗಂಭೀರವಾಗಿದ್ದು, ಕಳೆದ ಅಕ್ಟೋಬರ್‌ನಲ್ಲಿ ಮನೆಯಲ್ಲಿ ಜಾರಿ ಬಿದ್ದು ಕಾಲು, ಸೊಂಟಕ್ಕೆ ಪೆಟ್ಟು ಬಿದ್ದ ನಂತರ ನಿರ್ದೇಶಿತ ಚಿಕಿತ್ಸೆ ಅವಶ್ಯವಾಯಿತು. ಆಗಲೇ ಅವರಿಗೆ ಲಿವರ್‌ನಲ್ಲಿ ಕ್ಯಾನ್ಸರ್ ಇದ್ದುದು ತಿಳಿದುಬಂದಿದ್ದು, ಚಿಕಿತ್ಸೆ ಶುರುವಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನವೆಂಬರ್ ೩೦ರಂದು ಕೊನೆಯುಸಿರೆಳೆದರು. ಇಂದು ಹಾಸ್ಯದ ಪರಿಭಾಷೆ ಬದಲಾಗಿದೆ. ಆದರೂ ಉಮೇಶ್ ರಂತಹ ಅಭಿಜಾತ ಕಲಾವಿದರ ಹಾಸ್ಯಭರಿತ ಮಾತುಗಳು, ಅಭಿನಯ ಕನ್ನಡಿಗರ ಮನದಲ್ಲಿ ಜೀವಂತವಾಗಿರುತ್ತವೆ.

Author

Leave a Reply

Your email address will not be published. Required fields are marked *