ಕನ್ನಡ ಸಿನಿಮಾರಂಗದಲ್ಲಿ ಇಂದಿಗೂ ಜನಮಾನಸವನ್ನು ಪರಿವರ್ತನೆಯ ದಾರಿಯಲ್ಲಿ ಕೊಂಡೊಯ್ಯಬಹುದಾದ ಚಿತ್ರಗಳಲ್ಲಿ ಮೇಯರ್ ಮುತ್ತಣ್ಣ ಮತ್ತು ಬಂಗಾರದ ಮನುಷ್ಯ ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಇಂತಹ ಹಲವು ಚಲನಚಿತ್ರಗಳಲ್ಲಿ ದಮನಿತ ವರ್ಗಗಳ ಧ್ವನಿ, ಕಾರ್ಮಿಕರ ಬದುಕಿನ ಸಂಕಟ, ಸಾಮಾಜಿಕ ಅಸಮಾನತೆ ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಚಿತ್ರಿಸಿದ ಅದ್ಭುತ ನಿರ್ದೇಶಕ ಎಸ್ ಸಿದ್ಧಲಿಂಗಯ್ಯ. ಯಾವುದೋ ಹಳ್ಳಿಗಾಡಿನಿಂದ ಬಂದು ಯಶಸ್ವಿ ನಿರ್ದೇಶಕನಾದ ಕನ್ನಡ ಅಸಲಿ ಸತ್ವಕ್ಕೊಂದು ಅಕ್ಷರ ನಮನ.

ಮೂಲಗಳ ಪ್ರಕಾರ ಎಸ್. ಸಿದ್ಧಲಿಂಗಯ್ಯ ಮೈಸೂರಿನ ಹತ್ತಿರದ ಸಣ್ಣ ಹಳ್ಳಿಯವರು. ಸುಮಾರು ೫೦ನೇ ದಶಕದಲ್ಲಿ ಮೈಸೂರಿಗೆ ಬಂದ ಅವರು ನವಜ್ಯೋತಿ ಸ್ಟುಡಿಯೋಸ್ ನಲ್ಲಿ ಫ್ಲೋರ್ ಬಾಯ್ ಆಗಿ ಕೆಲಸ ಆರಂಭಿಸಿದರು. ಅಲ್ಲಿಂದ ನಿಧಾನವಾಗಿ ತಮ್ಮ ಕನ್ನಡ ಕೌಶಲ ಮತ್ತು ನಿರ್ದೇಶನ ಸಾಮರ್ಥ್ಯದಿಂದ ನಿರ್ಮಾಪಕ ಬಿ. ವಿಠ್ಠಲಾಚಾರ್ಯರ ಗಮನಕ್ಕೆ ಬಂದರು. ನಿರ್ದೇಶಕ ರಾಜೇಂದ್ರ್ ಸಿಂಗ್ ಬಾಬುರವರ ತಂದೆ ಶಂಕರ್ ಸಿಂಗ್ ಅವರಿಗೆ ಸಹಾಯಕ ನಿರ್ದೇಶಕರಾದರು. ಹೀಗೆ ಒಂದೊಂದೇ ಮೆಟ್ಟಿಲೇರಿದ ಸಿದ್ಧಲಿಂಗಯ್ಯ 1969ರಲ್ಲಿ ಮೇಯರ್ ಮುತ್ತಣ್ಣ ನಿರ್ದೇಶನದೊಂದಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದರು. ಆ ನಂತರ ಅವರು ನೀಡಿದ ಕನ್ನಡ ಚಲನಚಿತ್ರಗಳು ಇವತ್ತಿನ ನಿರ್ಮಾತೃಗಳಿಗೂ ಮಾದರಿಯಾಗುವಂತವು.

ಮೇಯರ್ ಮುತ್ತಣ್ಣ, ಬಾಳು ಬೆಳಗಿತು, ನಮ್ಮ ಸಂಸಾರ, ತಾಯಿ ದೇವರು, ನ್ಯಾಯವೇ ದೇವರು, ಬಂಗಾರದ ಮನುಷ್ಯ, ದೂರದ ಬೆಟ್ಟ,, ಭೂತಯ್ಯನ ಮಗ ಅಯ್ಯು, ಹೇಮಾವತಿ, ಭೂಲೋಕದಲ್ಲಿ ಯಮರಾಜ, ನಾರದ ವಿಜಯ, ಬಿಳಿಗಿರಿಯ ಬನದಲ್ಲಿ, ನಾರಿ ಸ್ವರ್ಗಕ್ಕೆ ದಾರಿ, ಕೂಡಿ ಬಾಳಿದರೆ ಸ್ವರ್ಗ ಸುಖ, ಪರಾಜಿತ, ಪ್ರೇಮಪರ್ವ , ಅಜೇಯ, ಪುತಿರ್, ಸಂಭವಾಮಿ ಯುಗೇ ಯುಗೇ, ಬಾರೆ ನನ್ನ ಮುದ್ದಿನ ರಾಣಿ, ಬಾ ನನ್ನ ಪ್ರೀತಿಸು, ಭೂತಾಯಿ ಮಕ್ಕಳು, ಪ್ರೇಮ ಪ್ರೇಮ ಪ್ರೇಮ ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಕಥಾ ಹಂದರವಿರುವ ಜನಸಾಮಾನ್ಯನಿಗೆ ಹತ್ತಿರವಾದ ಸಿನಿಮಾ ನಿರ್ದೇಶಿಸಿದರು. ಬಹುತೇಕ ಚಲನಚಿತ್ರಗಳು ಕಾದಂಬರಿ ಆಧಾರಿತವಾಗಿದ್ದವು. ಪಾತ್ರಗಳಲ್ಲಿ ಮಾನವೀಯ ಗುಣಗಳನ್ನು ಅಭಿವ್ಯಕ್ತಿಸುವಲ್ಲಿ ನಿರ್ದೇಶಕನ ಸಾಮರ್ಥ್ಯ ಪರೀಕ್ಷೆಗೊಳಪಡುತ್ತದೆ. ಈ ಪರೀಕ್ಷೆಗಳಲ್ಲಿ ದೂರದ ಬೆಟ್ಟ, ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ನಾರದ ವಿಜಯದಂತಹ ಅವಿಸ್ಮರಣೀಯ ಚಿತ್ರಗಳ ಪಾತ್ರಗಳು ನಿರ್ದೇಶಕನನ್ನು ಗೆಲ್ಲಿಸಿವೆ. ತಂತ್ರಜ್ಞಾನದ ಹಿನ್ನೆಡೆಯಲ್ಲಿಯೂ ಸೂಕ್ತ ಚಿತ್ರಕತೆ, ಕ್ಯಾಮರಾ, ಸಂಭಾಷಣೆ ಮತ್ತು ಸುಂದರ ಹಾಡುಗಳು ಕನ್ನಡಿಗರ ಮನೆ ಮನೆಗಳಲಿ, ಮನ ಮನಗಳಲ್ಲಿ ಆ ನಾಯಕ, ನಾಯಕಿಯರ ಚಿತ್ರಗಳನ್ನು ಸ್ಥಾಪಿಸಿದವು.

ಸಿದ್ದಲಿಂಗಯ್ಯನವರು ಡಾ.ರಾಜ್ ಕುಮಾರ್, ಭಾರತಿ ಜೋಡಿಯನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕರೆದೊಯ್ದವರು.  ವಿಷ್ಣುವರ್ಧನ್, ಅನಂತನಾಗ್, ಲೋಕೇಶ್, ದ್ವಾರಕೀಶ್ , ಶ್ರೀನಿವಾಸ ಮೂರ್ತಿ , ವಜ್ರಮುನಿ, ಪ್ರಭಾಕರ್  ಸೇರಿದಂತೆ ಬಹುತೇಕ ಹಿರಿಯ ನಟರೊಂದಿಗೆ ಕೆಲಸ ಮಾಡಿದರು. 1983 ರ
ಪ್ರೇಮ ಪರ್ವದಲ್ಲಿ ಅವರು ತಮ್ಮ ಮಗ ಮುರಳಿಯನ್ನು ಪರಿಚಯಿಸಿದರು. 1986 ರಲ್ಲಿ ಮುರಳಿ ನಾಯಕ ನಟನಾಗಿ ನಟಿಸಿದ ಪುತಿರ್ ಎಂಬ ತಮಿಳು ಚಿತ್ರವನ್ನು ಸಹ ಅವರು ನಿರ್ದೇಶಿಸಿದರು . ಅವರ ಕೊನೆಯ ಚಿತ್ರ  ಪ್ರೇಮ ಪ್ರೇಮ ಪ್ರೇಮ 1999 ರಲ್ಲಿ ಬಿಡುಗಡೆಯಾಯಿತು, ನಂತರ ಅವರು ನಿರ್ದೇಶನದಿಂದ ನಿವೃತ್ತರಾದರು. ಈ ರೀತಿ ಚಲನಚಿತ್ರ ಇತಿಹಾಸದಲ್ಲಿಯೇ ಅತ್ಯುನ್ನತ ಏರಿಕೆ ಕಂಡ ಸಿದ್ಧಲಿಂಗಯ್ಯನವರೂ ಕಾಲಚಕ್ರದಡಿ ಕೆಳಗಿಳಿಯಲೇಬೇಕಾಯಿತು. 2015 ರ ಮಾರ್ಚ್ 14ರಂದು ಎಚ್೧ ಎನ್ ೧ ಸೋಂಕಿಗೆ ತುತ್ತಾಗಿ ಇಹಲೋಕ ತ್ಯಜಿಸಿದರು. ಆದರೂ ಅವರ ಚಲನಚಿತ್ರಗಳು ಕೇವಲ ಮನರಂಜನೆಯಾಗಿ ಉಳಿಯಲಿಲ್ಲ, ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಇತಿಹಾಸ, ಹಿನ್ನೆಲೆ, ಮಣ್ಣಿನ ಜಾನಪದ ಸೊಗಡಿನ ಕನ್ನಡತನವನ್ನು ಕಲಾರೂಪಕವಾಗಿಸಿದ ದಾಖಲೆಗಳಾಗಿವೆ.

Author

  • ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

By Sheela Bhat

ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

Leave a Reply

Your email address will not be published. Required fields are marked *