ಬೆಂಗಳೂರು: ಖಾಸಗಿ ಉದ್ಯಮಗಳಲ್ಲಿ ಕೂಡ ಕನ್ನಡಿಗರಿಗೆ ಕೆಲವು ಶ್ರೇಣಿಯ ಹುದ್ದೆಗಳನ್ನು ನೂರಕ್ಕೆ ನೂರರಷ್ಟು ಮೀಸಲಿಡಲಾಗುವುದು. ಇದೇ ಸಂದರ್ಭದಲ್ಲಿ ಉದ್ಯಮಗಳ ಹಿತಾಸಕ್ತಿಗಳನ್ನು ಸಹ ಕಾಪಾಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಸಂಬಂಧ ಸರಕಾರವು ವಿಧೇಯಕಕ್ಕೆ ಅನುಮೋದನೆ ನೀಡಿದೆ. ಈ ವಿಚಾರವಾಗಿ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿ-ಬಿಟಿ, ಕಾನೂನು ಮತ್ತು ಕಾರ್ಮಿಕ ಸಚಿವರುಗಳ ಜೊತೆ ಚರ್ಚಿಸಿ, ಗೊಂದಲಗಳಿಗೆ ತೆರೆ ಎಳೆಯಲಾಗುವುದು ಎಂದರು.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಕೌಶಲಗಳಿಲ್ಲದ ಕನ್ನಡಿಗರಿಗೆ ಕೌಶಲ್ಯ ನೀಡಿ ಸಜ್ಜುಗೊಳಿಸುವ ಕೆಲಸವನ್ನೂ ಸರಕಾರವೇ ಮಾಡಲಿದೆ. ತಯಾರಿಕಾ ವಲಯ ಮತ್ತು ಕೈಗಾರಿಕಾ ಕ್ರಾಂತಿಯ ಉಜ್ವಲ ಅವಕಾಶಗಳನ್ನು ನಾವು ಕಳೆದುಕೊಳ್ಳುವಂತಿಲ್ಲ ಎಂದು ಅವರು ಪ್ರತಿಪಾದಿಸಿದರು.
ಸ್ಥಳೀಯರ ಹಿತಾಸಕ್ತಿಗಳನ್ನು ಕಾಪಾಡಲು ಸರಕಾರ ಬದ್ಧವಾಗಿದೆ. ಹಾಗೆಯೇ ಉದ್ಯಮ ವಲಯದವರ ಹಿತಾಸಕ್ತಿಗೂ ಧಕ್ಕೆಯಾಗದಂತೆ ನಿಗಾ ವಹಿಸಲಾಗುವುದು. ಈ ಕುರಿತು ಸಂಬಂಧಪಟ್ಟ ಎಲ್ಲರ ಜೊತೆಗೂ ಮಾತುಕತೆ ನಡೆಸಲಾಗುವುದು. ಈ ವಿಷಯದಲ್ಲಿ ಯಾವುದೇ ಆತಂಕ ಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕವು ಪುರೋಗಾಮಿ ರಾಜ್ಯವಾಗಿದೆ. ‘ಗ್ಲೋಬಲ್ ಚೈನಾ ಒನ್’ ನೀತಿಯಿಂದ ಒದಗಿ ಬಂದಿರುವ ಸದವಕಾಶವನ್ನು ನಾವು ಕಳೆದುಕೊಳ್ಳುವಂತಿಲ್ಲ. ಇದು ಶತಮಾನಕ್ಕೊಮ್ಮೆ ಒದಗಿ ಬರುವ ಅವಕಾಶ ಎಂದು ಪಾಟೀಲ ಬಣ್ಣಿಸಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ವಿಧೇಯಕಕ್ಕೆ ತಡೆ ಸೂಕ್ತ ತೀರ್ಮಾನ:
ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಉದ್ದೇಶಿತ ಮಸೂದೆಯನ್ನು ತಡೆ ಹಿಡಿದು, ವಿಸ್ತೃತ ಚರ್ಚೆಯವರೆಗೂ ತೀರ್ಮಾನ ಮುಂದೂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೀರ್ಮಾನ ಸೂಕ್ತವಾಗಿದೆ. ಆದ್ದರಿಂದ ಉದ್ಯಮಿಗಳು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ‘ಎಕ್ಸ್’ ವೇದಿಕೆಯಲ್ಲಿ ತಮ್ಮ ಪ್ರತಿಕ್ರಿಯೆ ಹಾಕಿರುವ ಅವರು, ಸರಕಾರವು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿ, ಕನ್ನಡಿಗರಿಗೆ ಉದ್ಯೋಗ ನೀಡಲು ಬದ್ಧವಾಗಿದೆ. ಆದರೆ ಇದರಲ್ಲಿ ಉದ್ಯಮಗಳ ಹಿತಕ್ಕೂ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.
