ರಾಯಚೂರು : “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ. ಈ ತೀರ್ಪು ನಮಗೆ ದೊಡ್ಡ ಪಾಠವಾಗಿದ್ದು, ಮುಂದೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಪಕ್ಷ ಎಲ್ಲಿ ಎಡವಿದೆ ಎನ್ನುವುದನ್ನು ನಮ್ಮ ನಾಯಕರು ಪರಿಶೀಲಿಸಲಿದ್ದಾರೆ. ‘ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸಿಂಧನೂರಿನಲ್ಲಿ ಆಯೋಜಿಸಿದ್ದ ರೈತ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಹಾಗೂ ಹೆಲಿಪ್ಯಾಡ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು.
ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಕೇಳಿದಾಗ, ‘ಮತದಾರ ತೀರ್ಪನ್ನು ಎಲ್ಲರೂ ಗೌರವಿಸಬೇಕು. ನಾವು ಚುನಾವಣೋತ್ತರ ಸಮೀಕ್ಷೆಯನ್ನು ನಂಬಿರಲಿಲ್ಲ. ಆದರೆ ಜನ ನಮಗೆ ಬಹುಮತ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆ ನಂಬಿಕೆ ವಿರುದ್ಧವಾಗಿ ಮತ ಬಂದಿದೆ. ಜಮ್ಮು ಕಾಶ್ಮೀರದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಬಹುಮತ ಬರಲಿದೆ ಎಂಬ ವಿಶ್ವಾಸವಿತ್ತು. ಅದರಂತೆ ಬಂದಿದೆ. ಬಹಳ ವರ್ಷಗಳ ನಂತರ ಕಣಿವೆ ರಾಜ್ಯದಲ್ಲಿ ಚುನಾವಣೆ ನಡೆದಿದ್ದು, ಮತದಾರರು ಪ್ರಜಾಪ್ರಭುತ್ವ ಉಳಿಸಿದ್ದಾರೆ. ಹರಿಯಾಣ ದೆಹಲಿಗೆ ಸಮೀಪದಲ್ಲಿರುವ, ಹೆಚ್ಚು ರೈತರಿರುವ ರಾಜ್ಯ. ಹೀಗಾಗಿ ಅಲ್ಲಿನ ತೀರ್ಪು ಹಿನ್ನಡೆಯಾಗಿದೆ. ಮತದಾರರ ತೀರ್ಪನ್ನು ನಾವು ಒಪ್ಪಬೇಕು’ ಎಂದರು.
ಪ್ರಧಾನಮಂತ್ರಿಗಳು ಮೂಡಾ ಪ್ರಕರಣ ಪ್ರಸ್ತಾಪ ಮಾಡಿದ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬ ಕೆ.ಬಿ ಕೋಳಿವಾಡ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಮುಡಾ ಹಗರಣ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಮುಡಾ ಹಗರಣಕ್ಕೂ ಮುಖ್ಯಮಂತ್ರಿಗೂ ಸಂಬಂಧ ಇಲ್ಲ. ಆ ಪ್ರಕರಣ ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ’ ಎಂದು ಹೇಳಿದರು.
ಸಿಎಂ ಬದಲಾವಣೆ ಚರ್ಚೆ ಬಗ್ಗೆ ಕೇಳಿದಾಗ, “ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ನಾವು ಇರುತ್ತೇವೆ. ನಮ್ಮ ಸರ್ಕಾರವೂ ಇರುತ್ತದೆ” ಎಂದು ತಿಳಿಸಿದರು.
ಜಾತಿಗಣತಿ; ಪಕ್ಷದ ನಿರ್ಧಾರಕ್ಕೆ ಬದ್ಧ:
ಜಾತಿಗಣತಿ ವಿಚಾರಾಗಿ ಕೇಳಿದಾಗ, ‘ಜಾತಿಗಣತಿ ವಿಚಾರದಲ್ಲಿ ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ. ಈ ವಿಚಾರದಲ್ಲಿ ನಮ್ಮ ಪಕ್ಷ ಏನು ಹೇಳುತ್ತದೆಯೋ ಅದನ್ನೇ ನಾವು ಮಾಡುತ್ತೇವೆ’ ಎಂದು ತಿಳಿಸಿದರು.
