ಬೆಂಗಳೂರು : ಭ್ರಷ್ಟಾಚಾರ ವಿಚಾರದಲ್ಲಿ ಜೀರೋ ಟಾಲರೆನ್ಸ್ ಎಂದು ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮುಡಾ ಹಗರಣದಲ್ಲಿ ಎಷ್ಟೇ ದೊಡ್ಡವರಿದ್ದರೂ ಕ್ರಮ ಆಗಲೇಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಾಗೂ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ದನಿ ಎತ್ತಲೇಬೇಕೆದೆ ಎಂದರು.
ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಬಹಳ ದೊಡ್ಡ ನಾಯಕರು. ನಾವು ಅವರಿಗೆಲ್ಲ ಸಲಹೆ ನೀಡಲು ಆಗುತ್ತಾ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಯಾರದ್ದೇ ತಪ್ಪಿದ್ದರೂ ಕ್ರಮ ಆಗಬೇಕು. ಈ ವಿಚಾರದಲ್ಲಿ ಪ್ರತಿಪಕ್ಷಗಳು ವಿಫಲವಾದರೂ ನಾವು ಬಿಡುವುದಿಲ್ಲ, ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಆಗುತ್ತಿರುವುದನ್ನು ಸಹಿಸಲಾಗದು ಎಂದು ಗುಡುಗಿದರು.
ಬಡವರಿಗೆ ಜಾಗ ಕೊಡುವ ವಿಚಾರ ಬಂದಾಗ ಮಾತ್ರ ಸಮಸ್ಯೆಗಳು ಬರುತ್ತವೆ. ಮುಡಾ ವಿಚಾರವನ್ನು ಅಷ್ಟು ಸುಲಭವಾಗಿ ಮುಚ್ಚಿಹಾಕಲು ಸಾಧ್ಯವಿಲ್ಲ, ದೊಡ್ಡವರಿಗೆ ಒಂದು ಕಾನೂನು ಮತ್ತು ಬಡವರಿಗೆ ಮತ್ತೊಂದು ಇರಲು ಸಾಧ್ಯವಿಲ್ಲ. ನಮ್ಮ ಪಕ್ಷಕ್ಕೆ ವಿಧಾನಸಭೆ ಚುನಾವಣೆಯಲ್ಲಿ 135 ಸೀಟು ಬರಲು ದುರ್ಬಲ ವರ್ಗದವರೇ ಕಾರಣ. ಶೋಷಿತರಿಗೆ ಅನ್ಯಾಯ ಆಗಲಾರದು ಎಂದರು.
ಇಬ್ಬರು ಬಲಾಡ್ಯ ನಾಯಕರು ಮತ್ತು ಸಚಿವರು ಇದ್ದಾರೆ. ಪಕ್ಷದ ಪ್ರಣಾಳಿಕೆಯಲ್ಲೂ ಚುನಾವಣೆ ನಡೆಸುವ ವಿಚಾರ ಪ್ರಸ್ತಾಪಿಸಿದ್ದರೂ ಬಿಬಿಎಂಪಿ ಚುನಾವಣೆಯನ್ನು ಏಕೆ ಮುಂದೂಡುತ್ತಿದ್ದಾರೋ ಗೊತ್ತಿಲ್ಲ ಎಂದು ತಮ್ಮದೇ ಪಕ್ಷದ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು
