ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ (Congress) ಆಡಳಿತದಲ್ಲಿ ಹತ್ಯೆ, ಆತ್ಮಹತ್ಯೆ ಕೃತ್ಯಗಳೇ ಅಧಿಕವಾಗಿದ್ದು, ಅಭಿವೃದ್ಧಿ ಸಮಾಧಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ( Pralhad Joshi ) ಆಕ್ರೋಶ ವ್ಯಕ್ತಪಡಿಸಿದರು.
ಬಿಹಾರ ಪ್ರಚಾರಕ್ಕೆ ತೆರಳಿದ್ದ ಸಚಿವರು ಹುಬ್ಬಳ್ಳಿಗೆ (Hubballi) ಬರುತ್ತಲೇ ನೇರ ಅಂಜಲಿ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದ ವಿರುದ್ಧ ಹರಿ ಹಾಯ್ದರು.
ರಾಜ್ಯದಲ್ಲಿ ಅಪರಾಧ ಪ್ರಕರಣಗಳು ತೀವ್ರವಾಗಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬರೋಬ್ಬರಿ 490 ಕೊಲೆಗಳಾಗಿವೆ. 600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜೋಶಿ ಕಳವಳ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಬಳಿಕ ಈಗ ಮತ್ತೊಬ್ಬ ಯುವತಿ ಭೀಕರವಾಗಿ ಕೊಲೆಯಾಗಿದ್ದಾಳೆ.
ಅಧಿಕಾರಿಗಳ ನಿರ್ಲಕ್ಷ್ಯ; ತನಿಖೆ ಆಗಬೇಕು :
ಅಂಜಲಿ ಅಜ್ಜಿ ಮತ್ತು ಸಹೋದರಿಯರು ಹೇಳಿದ್ದನ್ನು ಕೇಳಿದ್ರೆ ಭಯ ಹುಟ್ಟುತ್ತದೆ. ಈ ಹಿಂದೆಯೆ ಆರೋಪಿ ಬಗ್ಗೆ ದೂರು ನೀಡಿದ್ರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಅವರ ಆರೋಪ. ಆ ಸಂದರ್ಭ ಯಾವ ಅಧಿಕಾರಿಗಳಿದ್ದರು? ಅವರ ಬಗ್ಗೆಯೂ ತನಿಖೆಯಾಗಬೇಕು ಎಂದು ಸಚಿವ ಜೋಶಿ ಆಗ್ರಹಿಸಿದ್ದಾರೆ.
ನೇಹಾ ಹತ್ಯೆಯಾದಾಗ ಬಹುದೊಡ್ಡ ಜನಾಂದೋಲನವೇ ಆಯಿತು. ಆ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆ ಕೃತ್ಯ ನಡೆಸುವವರಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಹೇಳಿದರು.
ಸಿಎಂ ಬೇಜವಾಬ್ದಾರಿ ಹೇಳಿಕೆ :
ಸಿಎಂ ಸಿದ್ದರಾಮಯ್ಯನವರು ಹೊಣೆಗೇಡಿತನದ ಹೇಳಿಕೆ ನೀಡಿದ್ದರ ಪರಿಣಾಮ ಈಗ ಇಂಥ ಕೃತ್ಯಗಳು ಮರುಕಳಿಸುತ್ತಿವೆ. ರಾಜ್ಯ ಸರ್ಕಾರಕ್ಕೆ ಗಂಭೀರತೆಯೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ರಾಜ್ಯದಲ್ಲಿ ನಡೆದ ಅಪರಾಧ ಕೃತ್ಯಗಳ ಬಗ್ಗೆ ಪ್ರಶ್ನೆ ಮಾಡಿದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳಾಗಿವೆ ಎಂಬುದನ್ನು ಹುಡುಕಲು ಅಧಿಕಾರಿಗಳನ್ನು ನೇಮಿಸುತ್ತಾರೆ ಎಂದು ಹೇಳಿದರು.
ಅಧಿಕಾರಿಗಳ ವರ್ಗಾವಣೆ ದಂಧೆ :
ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಿಕ್ಕಾಪಟ್ಟೆ ಹಣ ತೆಗೆದುಕೊಳ್ತಾರೆ. ಗಾಂಜಾ, ಅಫೀಮು ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆಗ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಭಿವೃದ್ದಿಯು ಸಮಾಧಿಯಾಗಿದೆ ಎಂದು ಸಚಿವ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಾಲಕರಲ್ಲಿ ಭಯ :
ರಾಜ್ಯದಲ್ಲಿ ಕಡುಬಡವರು ಹೆಣ್ಣು ಮಕ್ಕಳನ್ನು ಕಾಲೇಜಿಗೆ ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ. ಜನರು ಬೀದಿಗಿಳಿಯುವ ಪರಿಸ್ಥಿತಿಯನ್ನ ಸರ್ಕಾರ ತಂದುಕೊಳ್ಳಬಾರದು ಎಂದು ಜೋಶಿ ಎಚ್ಚರಿಸಿದರು.
ಕೊಲೆ, ಹತ್ಯೆ, ಆತ್ಮಹತ್ಯೆ ಪ್ರಕರಣಗಳಲ್ಲಿ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು. ಅದು ಬಿಟ್ಟು ಯಾರೋ ಒಬ್ಬ ಅಧಿಕಾರಿಯನ್ನು ಅಮಾನತ್ತು ಮಾಡಿ ಕೈ ತೊಳೆದುಕೊಳ್ಳಬಾರದು ಎಂದು ಹೇಳಿದರು.
