ಧಾರವಾಡ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಸೆಡ್ದು ಹೊಡೆದಿರುವ ದಿಂಗಾಲೇಶ್ವರ ಸ್ವಾಮೀಜಿ ಚುನಾವಣಾ ರಾಜಕೀಯಕ್ಕೆ ಇಳಿದಿದ್ದಾರೆ. ಇಂದು ಅವರು ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಧಾರವಾಡ ಲೋಕಸಭಾ ಕ್ಷೇತ್ರ ತ್ರಿಕೋನ ಸ್ಪರ್ಧೆಗೆ ಸಿದ್ದವಾದಂತಾಯಿತು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ, ಕಾಂಗ್ರೆಸ್​ನಿಂದ ವಿನೋದ್ ಅಸೂಟಿ ಅಖಾಡಕ್ಕಿಳಿದಿದ್ದಾರೆ. ಇನ್ನು, ತಮಗೆ ಎಲ್ಲಾ ಜಾತಿ, ಧರ್ಮದವರು, ರೈತ ಸಂಘಟನೆಗಳ ಬೆಂಬಲ ಇದೆ ಎನ್ನುತ್ತಿರುವ ದಿಂಗಾಲೇಶ್ವರ ಶ್ರೀಗಳು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ದಿಂಗಾಲೇಶ್ವರ ಶ್ರೀಗಳು ಇಂದು ಮಧ್ಯಾಹ್ನ ಯಾವುದೇ ಮೆರವಣಿಗೆ ‌ಇಲ್ಲದೇ, ನಾಲ್ಕು ಜನರೊಂದಿಗೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ದಿಂಗಾಲೇಶ್ವರ ಶ್ರೀಗಳು ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಟೌನ್​ ಹಾಲ್​ನಿಂದ ಮೆರವಣಿಗೆ ನಡೆಸಬೇಕಿತ್ತು. ಆದರೆ, ಮರೆವಣಿಗೆ ಮಾಡದೆ ಮೊದಲು ಸಾಂಕೇತಿಕವಾಗಿ ಒಂದು ಸೆಟ್ ನಾಮಪತ್ರವನ್ನು ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ‌ ಮತ್ತೊಮ್ಮೆ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಈ ವೇಳೆ, ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಮೆರವಣಿಗೆ ಮಾಡಿ ಭಕ್ತರನ್ನು ಉದ್ದೇಶಿಸಿ ಮಾತನಾಡಿ ಬಳಿಕ ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದಷ್ಟೇ ಹೇಳಿ ತೆರಳಿದರು.

ಹಾಲಿ ಸಂಸದ ಪ್ರಹ್ಲಾದ್​​ ಜೋಶಿ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸುತ್ತಿರುವ ಸ್ವಾಮೀಜಿ, ”ಎಲ್ಲ ವರ್ಗದ ಜನ ಈಗಿನ ಸಂಸದರಿಂದ ಸಂಕಷ್ಟ ಅನುಭವಿಸಿದ್ದಾರೆ. ಅವರು ನನ್ನ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ನಾಡಿನ ಜಿಲ್ಲೆಯ ಜನರ ಹಿತದೃಷ್ಟಿಯಿಂದ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ’ ಎಂದು ಈ ಹಿಂದೆ ಹೇಳಿದ್ದರು.

Leave a Reply

Your email address will not be published. Required fields are marked *