ತನ್ನನ್ನು ನಂಬಿಸಿ ಮೋಸ ಮಾಡಿದ ಗಂಡನನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿ ತನ್ನ ಅಸ್ತಿತ್ವ ಪಡೆವಳು ಮಾರಿಕಾಂಬೆ. ಮಾರಿಕಾಂಬೆ ಹೆಣ್ಣೊಬ್ಬಳು ತನ್ನ ಅಸ್ತಿತ್ವ ಮತ್ತು ಅದರ ಪ್ರತಿಪಾದನೆ ಮಾಡುತ್ತ ಸಮಾಜದಲ್ಲಿ ಗೌರವಕ್ಕೆ ಪಾತ್ರವಾಗುವ ಅದ್ಭುತ ಸಾಂಕೇತಿಕ ಜಾತ್ರೆ ಇದು. ಈ ಜಾತ್ರೆಯ ಆರಂಭದಲ್ಲಿ ಅಸುರ ರೂಪಿ ಪತಿ ಕೋಣನಾಗುವುದು, ಆ ಕೋಣವನ್ನು ಬಲಿ ಕೊಡುವ ಸಾಂಕೇತಿಕ ಪ್ರಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆಯ ನಂತರ ದೇವಿಯನ್ನು 7 ದಿನಗಳ ಕಾಲ ಆರಾಧಿಸಲಾಗುತ್ತದೆ. ಎಂಟನೇ ದಿನದಂದು ಜಾತ್ರೆಯ ಕೊನೆಯ ದಿವಸ. 9ನೇ ದಿನ ಆಕೆ ವಿಧವೆಯಾಗುವ ಮತ್ತು ತನಗೆ ತಾನೇ ಅಸ್ತಿತ್ವ ಹೀನವಾಗುವ ವಿಧಿಗಳು ನಡೆಯುತ್ತವೆ. ಬಳೆ ಒಡೆದು, ಕುಂಕುಮ ಅಳಿಸಿ , ದೇವಿ ಕೆರೆಯಲ್ಲಿ ಆಕೆ ಲೀನವಾಗುವ ದುಃಖಮಯ ಸನ್ನಿವೇಶಗಳು ಮರುಸೃಷ್ಟಿಗೊಳ್ಳುತ್ತವೆ. ಯಾವ ಹೋಳಿಗೆ ಊಟದೊಂದಿಗೆ ತಾಯಿ ತವರು ಮನೆಯ ಗದ್ದುಗೆಯಲ್ಲಿ ಸಕಲರಿಂದ ಪೂಜೆಗೊಳ್ಳುತ್ತಾಳೆಯೋ, ಅದೇ ದೇವಿ ದೇವಿಕೆರೆಯಲ್ಲಿ ಲೀನವಾಗುವ ದುಃಖ ಜೀವನದ ಕ್ಷಣಿಕತೆಯನ್ನು ಹೇಳುವುದೂ ಆಗಿದೆ.
ವರ್ಷವಿಡೀ ಕೋಣವೊಂದನ್ನು ಇಲ್ಲಿ ಸಾಕಲಾಗುತ್ತದೆ. ಗಾಂಧೀಜಿ ಇಲ್ಲಿಗೆ ಬರುವ ತನಕ ಕೋಣವನ್ನು ಕಡಿದು ಅದರ ನೆತ್ತರನ್ನು ತಾಯಿಯ ಹಣೆಗೆ ಇಡಲಾಗುತ್ತಿತ್ತು. ಆ ನಂತರವಷ್ಟೆ ಜಾತ್ರೆ ಆರಂಭವಾಗುತ್ತಿತ್ತು. ಈಗ ಕೋಣದ ರಕ್ತವನ್ನು ಸಿರೆಂಜ್ ಮೂಲಕ ತೆಗೆದು ಹಣೆಗೆ ಹಚ್ಚಲಾಗುತ್ತಿದೆ. ಪ್ರಾಣಿಹಿಂಸೆ ಇಲ್ಲದೆಯೂ ಅನಿವಾರ್ಯ ಎನ್ನುವ ಧಾರ್ಮಿಕ ಕಾರ್ಯ ನಡೆಯುವುದು ಇತರ ಹಿಂಸಾತ್ಮಕ ಶಕ್ತಿ ಕೇಂದ್ರಗಳಿಗೆ ಮಾದರಿಯಾಗಿದೆ.
ಜಾತ್ರೆಯಲ್ಲಿ ಯಥೇಚ್ಛ ಅಂಗಡಿಗಳು, ಸಾಮಾನ್ಯ ಜೋಕಾಲಿ, ಗಿರಗಿಟ್ಲೆ, ಹಾಸ್ಯಗನ್ನಡಿ, ಬಾವಿಯಲ್ಲಿ ಗಾಡಿಗಳನ್ನು ಓಡಿಸುವುದು, ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕ ಮಂಡಳಿಗಳ ಹೊಸ ಹೊಸ ನಾಟಕಗಳು, ಸರ್ಕಸ್ ಮತ್ತು ಬಡಗುತಿಟ್ಟಿನ ವಿವಿಧ ಯಕ್ಷಗಾನಗಳ ಸವಿಯೂಟ ಇದ್ದೇ ಇರುತ್ತದೆ. ಜೊತೆಗೆ ವಿವಿಧ ಬಗೆಯ ತಿಂಡಿ, ತಿನಿಸುಗಳು, ಪಾನೀಯಗಳು ಎಂಟು ದಿನಗಳ ಬಿಸಿಲು ದೇಹಕ್ಕೂ , ಮನಸ್ಸಿಗೂ ತಟ್ಟದಂತೆ ನೋಡಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.
ಜಾತ್ರೆಯ ಸಮಯದಲ್ಲಿಯೇ ಹೋಳಿ ಹಬ್ಬವಿರುವುದು ವಿಶೇಷವಾಗಿದೆ. ಮಾ.25ರಂದು ಹೋಳಿ ಹಬ್ಬವಿದೆ. ಅಂದು ಶಿರಸಿಯ ಬೇಡರವೇಷ ಮತ್ತು ಹೋಳಿಕಾ ದಹನವನ್ನು ಕಣ್ತುಂಬಿಕೊಳ್ಳಲೇಬೇಕು. ಶಿರಸಿ ಜಾತ್ರೆ ಮತ್ತು ಹೋಳಿ ಹುಣ್ಣಿಮೆ ಎರಡೂ ಸೇರಿ ಶಿರಸಿಯಲ್ಲಿ ಪ್ರವಾಸಿಗರ, ಭಕ್ತರ ಮತ್ತು ಕಲಾ ರಸಿಕರ ಜನಜಂಗುಳಿ ನಿರೀಕ್ಷಿತವಾಗಿದೆ.
