ಬಿಜೆಪಿಗೂ ಚಿತ್ರ ನಟರಿಗೂ ಅವಿನಾಭಾವ ಸಂಬಂಧ. ಮೊದಲಿನಿಂದಲೂ ಬಿಜೆಪಿ ಚಿತ್ರ ನಟರಿಗೆ ಟಿಕೆಟ್ ನೀಡುತ್ತಲೇ ಬಂದಿದೆ..ಇದಕ್ಕೆ ಕಾರಣ ಏನು ? ನಟರು ರಾಜಕೀಯದಲ್ಲೂ ಚೆನ್ನಾಗಿ ನಟಿಸಬಹುದು ಎಂಬ ನಂಬಿಕೆ ಕಾರಣ ಇರಬಹುದೆ ? ಇದ್ದರೂ ಇರಬಹುದು. ಆದರೆ ಎಲ್ಲ ಚಿತ್ರ ನಟರೂ ರಾಜಕೀಯದಲ್ಲಿ ಚೆನ್ನಾಗಿ ನಟಿಸುತ್ತಾರೆ ಎಂದು ಹೆಳಲು ಸಾಧ್ಯವಿಲ್ಲ. ಕೆಲವು ಸಂದರ್ಭದಲ್ಲಿ ನಟರಿಗಿಂತ ರಾಜಕಾರಣಿಗಳೇ ಚೆನ್ನಾಗಿ ನಟಿಸುತ್ತಾರೆ. ಅವರ ಧ್ವನಿ ಏರಿಳಿತ, ಕ್ಯಾಸ್ಟೂಂ ಗಳ ಆಯ್ಕೆ ನಟರಿಗಿಂತ ಚೆನ್ನಾಗಿಯೇ ಇರುತ್ತದೆ.
ಅತ್ಯುತ್ತಮ ನಟ ಉತ್ತಮ ರಾಜಕಾರಣಿ ಆಗುವ ಕಾಲ ಇದು. ಯಾಕೆಂದರೆ ಜನರಿಗೆ ನಟನೆ ಎಂದರೆ ತುಂಬಾ ಇಷ್ಟ. ಅವರು ನಟಿಸುವವರನ್ನು ಇಷ್ಟ ಪಡುತ್ತಾರೆ. ನಟಿಸುವವರನ್ನು ನಂಬುತ್ತಾರೆ, ಬೆಂಬಲಿಸುತ್ತಾರೆ. ಇರಲಿ ಬಿಡಿ. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ನಿಜೆಪಿ ಹಲವು ನಟರಿಗೆ, ಮಾಜಿ ಮತ್ತು ಹಾಲಿ, ಟಿಕೆಟ್ ನೀಡಿದೆ. ಸದ್ಗುರು ಜಗ್ಗಿ ವಾಸುದೇವ್ ಇಲ್ಲದಿದ್ದರೆ ಹಗಲು ರಾತ್ರಿ ಆಗುವುದಿಲ್ಲ ಎಂದು ಹೇಳಿರುವ ಕಂಗನಾ ರಣಾವತ್ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಅದೇ ರೀತಿ ಬಿಜೆಪಿ ಟಿಕೆಟ್ ಪಡೆದವರಲ್ಲಿ ಬಹಳಷ್ಟು ಜನ ಮೋದಿ ಇಲ್ಲದಿದ್ದರೆ ಸೂರ್ಯ ಮೂಡುವುದಿಲ್ಲ, ಮುಳುಗುವುದೂ ಇಲ್ಲ ಎಂದು ನಂಬುವವರೂ ಇದ್ದಾರೆ.
ಈ ಬಾರಿ ಟಿಕೆಟ್ ಪಡೆದವರಲ್ಲಿ ಒಂದು ಹೆಸರು ಗಮನಾರ್ಹ. ಅವರು ಅರುಣ್ ಗೋವಿಲ್.. ಇವರು ದೂರದರ್ಶನದ ಕಾಲದಲ್ಲಿ ರಾಮನ ಪಾತ್ರ ಮಾಡಿದವರು. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನ ಅವರ ಕಾಲಿಗೆ ಎರಗುತ್ತಿದ್ದರು. ಬದುಕಿನಲ್ಲಿ ವಾಸ್ತವ ಮತ್ತು ನಟನೆಯ ನಡುವಿನ ಅಂತರವನ್ನು ತೆಗೆದು ಹಾಕಿದವರಲ್ಲಿ ಇವರೂ ಪ್ರಮುಖರು.
ರಾಮನ ಪಾತ್ರ ಮಾಡಿ ಖ್ಯಾತಿವಂತರಾದ ಅವರು ಇತ್ತೀಚಿನ ಸಿನಿಮಾ ಒಂದರಲ್ಲಿ ನರೇಂದ್ರ ಮೋದಿ ಅವರ ಪಾತ್ರವನ್ನು ಮಾಡಿದ್ದರು. ಈಗ ಅವರಿಗೆ ಮೀರಟ್ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ದೊರಕಿದೆ.
ಬಿಜೆಪಿಗೆ ಹತ್ತಿರರಾದ ರಾಮ ಮತ್ತು ಮೋದಿ ಅವರ ಪಾತ್ರವನ್ನು ನಟಿಸಿದ ಮೇಲೆ ಟಿಕೆಟ್ ಪಡೆಯಲು ಅಥವಾ ನೀಡಲು ಬೇರೆ ಯಾವ ಅರ್ಹತೆ ಬೇಕು
ಬಿಜೆಪಿ ಈ ನಂಬಿಕೆಯೊಂದಿಗೆ ಅರುಣ್ ಗೋವಿಲ್ ಅವರಿಗೆ ಟಿಕೆಟ್ ನೀಡಿದೆ. ಅವರು ಚುನಾವಣೆ ಪ್ರಚಾರ ಮಾಡುವಾಗ ನಾನು ರಾಮನ ಪಾತ್ರ ಮಾಡಿದೆ, ಮೋದಿಯವರ ಪಾತ್ರ ಮಾಡಿದೆ. ಮೋದಿಯವರೇ ರಾಮ ಎಂದೂ ಹೇಳಬಹುದು. ಜನ ಅದನ್ನು ನಂಬಲೂ ಬಹುದು.
‘
