ಬೆಂಗಳೂರು: ದೇಶದಲ್ಲಿ ಕೈಗಾರಿಕಾ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಲ್ಲಿಗೆ ಯಾವ ಕೊಡುಗೆಯನ್ನೂ ಪ್ರಕಟಿಸದಿರುವುದು ದುರದೃಷ್ಟಕರ. ಇದೊಂದು ಶೂನ್ಯ ಸಂಪಾದನೆಯ ಬಜೆಟ್ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಲೇವಡಿ ಮಾಡಿದ್ದಾರೆ.

ಸಂಸತ್ತಿನಲ್ಲಿ ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್ ಬಗ್ಗೆ ಮಾತನಾಡಿ, ‘ಕೇವಲ ಕೇಂದ್ರ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಮಂಡಿಸಿದ ಬಜೆಟ್ ರೀತಿ ಇದೆ. ಇದನ್ನು ಕೇಂದ್ರ ಬಜೆಟ್ ಅನ್ನುವ ಬದಲು ಬಿಹಾರ- ಆಂಧ್ರಪ್ರದೇಶ ಬಜೆಟ್ ಅಂತ ಕರೆದಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕವು ಎಲೆಕ್ಟ್ರಿಕ್ ವೆಹಿಕಲ್, ಗ್ರೀನ್ ಎನರ್ಜಿ ಮತ್ತಿತರ ವಲಯಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಹೆಚ್ಚಿನ ವಿದೇಶಿ ಹೂಡಿಕೆ ಆಕರ್ಷಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಬಜೆಟ್ ನಲ್ಲಿ ಪ್ರಸ್ತಾಪಗಳು ಇರಬೇಕಿತ್ತು ಎಂದಿದ್ದಾರೆ.

ರಾಜ್ಯವು ದೇಶದ ಜಿಡಿಪಿಗೆ, ಆ ಮೂಲಕ ಆರ್ಥಿಕ ಬೆಳವಣಿಗೆ ಅಧಿಕ ಕೊಡುಗೆ ನೀಡುತ್ತಿದೆ. ಹೀಗಾಗಿ, ಸಹಜವಾಗಿಯೇ ಕೇಂದ್ರ ಬಜೆಟ್ ಬಗ್ಗೆ ನಮಗೆ ನಿರೀಕ್ಷೆ ಇರುತ್ತದೆ. ಆದರೆ, ನಿರ್ಮಲಾ ಸೀತಾರಾಮನ್ ರವರು ಹಾಗೂ ಕೈಗಾರಿಕಾ ಬೆಳವಣಿಗೆ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವ ಪ್ರಧಾನಿ ಮೋದಿಯವರು ನಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ ಎಂದಿದ್ದಾರೆ.

ಮುಂಬರುವ ದಿನಗಳಲ್ಲಿ, ತೆರಿಗೆ ಪಾಲು ನೀಡುವಾಗ ಹೆಚ್ಚಿನ ಭಾಗ ನಿಗದಿಗೊಳಿಸಿ ರಾಜ್ಯಕ್ಕೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Author

Leave a Reply

Your email address will not be published. Required fields are marked *