ಬೆಂಗಳೂರು : ಚಿತ್ರ ನಟಿ ಸುಮಲತಾ ತಮ್ಮ ರಾಜಕೀಯ ಬದುಕಿನಲ್ಲಿ ಒಂದು ಸುತ್ತು ಬಂದಿದ್ದಾರೆ. ಅಂಬರೀಷ್ ಅವರ ನಿಧನದ ನಂತರ ಮಂಡ್ಯವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಅವರು ಪ್ರೀತಿಯ ಸೋಸೆಯಾದರು. ಮಂಡ್ಯದ ಮಗಳಾದರು. ಮಂಡ್ಯದ ಜನರ ಸ್ವಾಭಿಮಾನದ ಸಂಕೇತವಾದರು. ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದರು. ನಿಖಿಲ್ ಕುಮಾರಸ್ವಾಮಿ ಅವರಂತಹ ಪ್ರಬಲ ಅಭ್ಯರ್ಥಿಯನ್ನು ಸೋಲಿಸಿದರು. ಆಗ ಅಲ್ಲಿ ಪಕ್ಷ ಬೇಧ ಇರಲಿಲ್ಲ. ಇದ್ದುದು ಮಂಡ್ಯದ ಮಣ್ಣಿನ ಋಣ ಮತ್ತು ಸ್ವಾಭಿಮಾನ.
ಇವತ್ತು ಇದೆಲ್ಲ ಮರೆಯಾಗಿದೆ. ಸುಮಲತಾ ಈಗ ಬಿಜೆಪಿಯ ಕಾರ್ಯಕರ್ತೆ. ಹೆಗಲ ಮೇಲೆ ಕೇಸರಿ ಶಾಲು. ಮಂಡ್ಯದ ರೈತರ ಸ್ವಾಭಿಮಾನದ ಸಂಕೇತವಾದ ಹಸಿರು ಶಾಲಿಗೆ ಅಲ್ಲಿ ಸ್ಥಾನ ಇಲ್ಲ.
ಇಂದು ಬಿಜೆಪಿ ಕಚೇರಿಯಲ್ಲಿ ನಡೆದಿದ್ದು ಸುಮಲತಾ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಮಹಾನ್ ಮಹಾನ್ ನಾಯಕರೆಲ್ಲ ಹಾಜರಿದ್ದರು. ಅಂಬರೀಷ್ ಮತ್ತು ಸುಮಲತಾ ಅವರ ಅಭಿಮಾನಿಗಳು ಮಂಡ್ಯದಿಂದ ಬಂದಿದ್ದರು. ಅವರಲ್ಲಿ ಯಾವ ಭಾವನೆ ಇತ್ತೋ ಗೊತ್ತಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕಾದ್ ಅನಿವಾರ್ಯತೆ ಅವರ ಮನಸ್ಸಿನಲ್ಲಿ ಯಾವ ಗೊಂದಲಕ್ಕೆ ಕಾರಣವಾಗಿತ್ತೋ ಗೊತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿ ಮಾಡುವುದು ನಮ್ಮ ಗುರಿ ಎಂದರು ಸುಮಲತಾ. ಅಲ್ಲಿದ್ದ ಬಹುತೇಕ ಬಿಜೆಪಿ ನಾಯಕರ ಗುರಿಯೂ ಅದೇ ತಾನೆ ?
ಇವರೆಲ್ಲ ಈಗ ಪ್ರಧಾನಿ ಮೋದಿ ಅವರ ಹೆಸರನ್ನು ಪಣಕ್ಕೆ ಇಟ್ಟು ರಾಜಕೀಯ ಮಾಡುತ್ತಿದ್ದಾರೆ. ಅವರ ಜೊತೆ ಸುಮಲತಾ ಕೂಡ ಹೊರಟಿದ್ದಾರೆ. ಮೋದಿಯವರನ್ನು ಮತ್ತೆ ಯಾಕೆ ಪ್ರಧಾನಿಯನ್ನಾಗಿ ಮಾಡಬೇಕು ? ಅವರನ್ನು ಪ್ರಧಾನಿಯನ್ನಾಗಿ ಮಾಡುವ ಅಧಿಕಾರ ಶಕ್ತಿ ಇವರಿಗೆ ಇದೆಯೇ ? ಈ ಪ್ರಶ್ನೆಗಳನ್ನು ಕೇಳುವಂತಿಲ್ಲ. ಯಾಕೆಂದರೆ ಅವರಿಗೂ ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲ.
ಇದರಿಂದ ಮಂಡ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗುವದಂತೂ ನಿಜ. ಕುಮಾರಸ್ವಾಮಿ ಮತ್ತು ಅವರ ಕುಟುಂಬ ಮಂಡ್ಯ ರಾಜಕಾರಣವನ್ನು ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ. ಇದರಿಂದ ಸುಮಲತಾ ಅವರ ಸ್ಥಾನ ಪಲ್ಲಟವಾಗುತ್ತದೆ. ಅವರೇನಿದ್ದರೂ ಮಂಡ್ಯ ರಾಜಕಾರಣದಲ್ಲಿ ಕುಮಾರಸ್ವಾಮಿ ಅವರ ನಂತರದ ನಾಯಕರಾಗುತ್ತಾರೆ.
ಅವರ ರಾಜಕೀಯ ಭವಿಶ್ಯ ಏನು ಎಂಬ ಪ್ರಶ್ನೆಗೆ ತಕ್ಷಣ ಉತ್ತರ ನೀಡುವುದೂ ಕಷ್ಟ, ಬಿಜೆಪಿ ಅವರಿಗೆ ಇನ್ನೆಲ್ಲೋ ಪುನರ್ ವಸತಿ ಕಲ್ಸಿಸಬಹುದು. ಅಧಿಕಾರವನ್ನು ನೀಡಬಹುದು. ಆದರೆ ಮಂಡ್ಯ ಜನರ ಹೃದಯದಲ್ಲಿ ಅವರಿಗಿದ್ದ ಸ್ಥಾನ ಮತ್ತೆ ಸಿಗಲಾರದು. ಅವರ ಸ್ವಾಭಿಮಾನದ ಭಾಷಣಕ್ಕೂ ಯಾವ ಅರ್ಥವೂ ಇರುವುದಿಲ್ಲ. ಯಾಕೆಂದರೆ ಅವರು ಸಂಘಪರಿವಾರದ ಕೇಸರಿ ಕಾರ್ಯಕರ್ತೆಯಾಗಿ ಮಾತ್ರ ಉಳಿಯುತ್ತಾರೆ.
