ಚಾಮರಾಜನಗರ : ಇವರದು ರಾಜಕೀಯ ಮೀರಿದ ಸ್ನೇಹ. ಆದರೆ ರಾಜಕೀಯವೇ ಇವರ ಸ್ನೇಹವನ್ನು ಹಾಳು ಗೆಡವಿತ್ತು. ಒಬ್ಬರು ಒಂದೆಡೆ ಹೋದರೆ ಇನ್ನೊಬ್ಬರು ಇನ್ನೊಂದೆಡೆ ಹೋದರು. ಪರಸ್ಪರ ಬೈದಾಡಿಕೊಂಡರು. ಇವತ್ತು ಬಹಳ ಕಾಲದ ನಂತರ ಭೇಟಿ.
ಈ ಭೇಟಿಯಲ್ಲಿ ರಾಜಕೀಯ ಕಾರಣವೂ ಇತ್ತು. ಆದರೆ ರಾಜಕೀಯ ಮೀರಿ ಇಬ್ಬರಿಗೂ ಸಂತೋಷವಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಶ್ರೀನಿವಾಸ್ ಪ್ರಸಾದ್. ಇಬ್ಬರೂ ಆತ್ಮೀಯ ಸ್ಣೆಹಿತರಾಗಿದ್ದವರು. ಪಕ್ಷವನ್ನು ಮೀರಿದ ಸ್ಣೇಹ ಅವರದಾಗಿತ್ತು. ಆದರೆ ಈ ಸಂಬಂಧ ಕೆಟ್ಟು ಹೋಗಿತ್ತು.
ಈ ಬಾರಿಯಲ್ಲ ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಂದಾಯ ಸಚಿವರಾಗಿದ್ದವರು ಶ್ರೀನಿವಾಸ್ ಪ್ರಸಾದ್. ಸಚಿವರಾಗಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದವರು. ಆದರೆ ಬೇರೆ ಬೇರೆ ರಾಜಕೀಯ ಕಾರಣಗಳಿಂದಾಗಿ ಸಿದ್ದರಾಮಯ್ಯ ಶ್ರೀನಿವಾಸ್ ಪ್ರಸಾದ್ ಅವರನ್ನು ಸಂಪುಟದಿಂದ ಹೊರಗಿಟ್ಟರು. ಇದು ಶ್ರೀನಿವಾಸ್ ಪ್ರಸಾದ್ ಅವರನ್ನು ಕೆರಳಿಸಿ ಬಿಟ್ಟಿತು.
ಇಷ್ಟು ರಾಜಕೀಯ ಮಾಡಿದ ತಮಗೆ ಆದ ಅವಮಾನ ಇದು ಎಂದು ಕೊಂಡರು ಶ್ರೀನಿವಾಸ್ ಪ್ರಸಾದ್. ಆರೊಗ್ಯ ಸರಿ ಇಲ್ಲದ ತಮಗೆ ಒಂದು ಮಾತು ಹೇಳಿ ಸಂಪುಟದಿಂದ ಹೊರಗೆ ಇಡಬಹುದಾಗಿತ್ತು ಎಂದುಕೊಂಡರು ಶ್ರೀನಿವಾಸ್ ಪ್ರಸಾದ್. ಇದಾದ ಮೇಲೆ ಹಲವು ಭಾರಿ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸಿದರು. ಬಿಜೆಪಿ ಸೇರಿ ಸಂಸದರಾದರು.
ಈಗ ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ. ಬಿಜೆಪಿಯ ಜೊತೆ ಅಂತಹ ಒಳ್ಳೆಯ ಸಂಬಂಧವೂ ಅವರಿಗಿಲ್ಲ.
ಏನೇ ಇರಲಿ ಶ್ರೀನಿವಾಸ್ ಪ್ರಸಾದ್ ಒಬ್ಬ ಪ್ರಭಾವಿ ನಾಯಕ. ಮೈಸೂರು ಮತ್ತು ಚಾಮರಾಜನಗರಗಳಲ್ಲಿ ತಮ್ಮದೇ ಬೆಂಬಲಿಗರನ್ನು ಅವರು ಹೊಂದಿದ್ದಾರೆ. ಯಾರನ್ನಾದರೂ ಚುನಾವಣೆಯಿಂದ ಗೆಲ್ಲಿಸುವ ಶಕ್ತಿಯೂ ಅವರಿಗಿದೆ. ಹೀಗಾಗಿ ಹಳೆಯದನ್ನೆಲ್ಲ ಮರೆತು ಸಿದ್ದರಾಮಯ್ಯ ಶ್ರೀನಿವಾಸ್ ಪ್ರಸಾದ್ ಮನೆಗೆ ಹೋಗಿದ್ದಾರೆ. ಇಬ್ಬರಿಗೂ ಸಂತೋಷವಾಗಿದೆ.
