ರಾಮನಗರ: ಕುಮಾರಸ್ವಾಮಿ ಟೂರಿಂಗ್‌ ಟಾಕೀಸ್‌ ಇದ್ದಂತೆ ಎಂದು ಟೀಕೆ ಮಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ನಾನು ಟೂರಿಂಗ್ ಟಾಕೀಸ್ ಅಲ್ಲ, ಪರ್ಮನೆಂಟ್ ಟಾಕೀಸ್ ಎಂದಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಸೋಗಾಲ ಗ್ರಾಮದಲ್ಲಿ ಪ್ರಚಾರ ಭಾಷಣ ಮಾಡಿದ ಅವರು, ನನ್ನದು ಪರ್ಮನೆಂಟ್ ಟಾಕೀಸ್ ರಾಮನಗರ, ಇಲ್ಲಿ ಬಿಟ್ಟು ನಾನೆಲ್ಲೂ ಹೋಗುವುದಿಲ್ಲ, ಯಾರಿಂದಲೂ ನನ್ನನ್ನು ಕಳಿಸಲು ಸಾಧ್ಯವೂ ಇಲ್ಲ. ಅಡ್ಡದಾರಿ ರಾಜಕಾರಣ ಒಮ್ಮೆ ಯಶಸ್ಸು ಆಗಿರಬಹುದು. ಪ್ರತಿ ಬಾರಿಯೂ ಅದು ನಡೆಯಲ್ಲ ಎಂದು ಟಾಂಗ್ ಕೊಟ್ಟರು.

ಉತ್ತರ ಪ್ರದೇಶದ ಅಮೇಠಿಯಿಂದ ವೈನಾಡಿಗೆ ಓಡಿಬಂದ ರಾಹುಲ್ ಗಾಂಧಿ ಅವರದ್ದು ಯಾವ ಟಾಕೀಸ್? ಉತ್ತರ ಪ್ರದೇಶದಲ್ಲಿ ನಿಲ್ಲುವುದು ಬಿಟ್ಟು ಸಹೋದರ ತೆರವು ಮಾಡಿದ ವೈನಾಡು ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಏಕೆ ಬಂದರು? ಹಾಗಾದರೆ ಅವರದ್ದು ಯಾವ ಟಾಕೀಸ್? ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಅದನ್ನು ಸರಿಯಾಡಿಕೊಳ್ಳುವುದು ಬಿಟ್ಟು ಪಕ್ಕದ ತಟ್ಟೆ ನೋಡುವುದನ್ನು ಬಿಡಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು, ನೆಹರು ಮತ್ತು ಗಾಂಧಿ ಕುಟುಂಬದ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅಂತಹ ಧೈರ್ಯ ಯಾಕೆ ತೋರಿಸುವುದಿಲ್ಲ? ಅವರಿಗೊಂದು ಲೆಕ್ಕ, ನಮಗೊಂದು ಲೆಕ್ಕ ಇದೆಯಾ? ಎಂದು ಖಾರವಾಗಿ ಪ್ರಶ್ನಿಸಿದರು.

ನನ್ನ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ!! :

ಅವರು ಅಭಿವೃದ್ಧಿ ಹೆಸರಿನಲ್ಲಿ ಮತಯಾಚನೆ ಮಾಡಬೇಕಿತ್ತು. ಆದರೆ, ನನ್ನ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ!! ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಹೇಳುತ್ತಾರೆ, ಅವುಗಳ ಹೆಸರಿನಲ್ಲಿ ವೋಟು ಕೇಳಬೇಕಿತ್ತು. ಅದು ಯಾವುದನ್ನೂ ಅವರು ಮಾಡುತ್ತಿಲ್ಲ. ಬದಲಿಗೆ; ನನ್ನ ಬಗ್ಗೆಯೇ ಅವರು ಕೇವಲವಾಗಿ, ಕೆಟ್ಟದ್ದಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಜನರೇ ಉತ್ತರ ಕೊಡಲಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯೇ ಇರಲಿಲ್ಲ. ನಮ್ಮ ಅಭ್ಯರ್ಥಿಯನ್ನು ಹೈಜಾಕ್ ಮಾಡಿಕೊಂಡು ಹೋದರು. ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಜಿಗಿದು ಅಭ್ಯರ್ಥಿ ಆಗಿರುವ ವ್ಯಕ್ತಿಗೆ ರಾಜಕೀಯ ಜೀವದಾನ ಮಾಡಿದ್ದು ಇದೇ ಯಡಿಯೂರಪ್ಪ ಅವರು. ಆದರೆ, ಕೊನೆಗೆ ಅವರಿಗೆ ಚಿತ್ರಹಿಂಸೆ ಕೊಟ್ಟರು, ಅವರ ವಿಚಾರದಲ್ಲಿ ಅಮಾನುಷವಾಗಿ ವರ್ತಿಸಿದರು. ನಂಬಿಕೆಗೆ, ವಿಶ್ವಾಸಾರ್ಹತೆಗೆ ಅರ್ಹನಲ್ಲದ ಆ ವ್ಯಕ್ತಿಯನ್ನು ಜನರು ನಂಬಿ ಮೋಸ ಹೋಗುವುದು ಬೇಡ ಎಂದು ಕೇಂದ್ರ ಸಚಿವರು ಜನತೆಯಲ್ಲಿ ಮನವಿ ಮಾಡಿದರು.

ನಾನು ಹದಿನೇಳು ಕೆರೆಗಳನ್ನು ತುಂಬಿಸಿದೆ ಎಂದು ಊರ ತುಂಬಾ ನಾನೇ ಭಗೀರಥ ಎಂದು ಫ್ಲೆಕ್ಸ್ ಹಾಕಿಕೊಂಡರು. ನಾನೂ ತಾಲ್ಲೂಕಿನ 107 ಕೆರೆಗಳಿಗೆ ನೀರು ತುಂಬಿಸಿದೆ. ಹಾಗಾದರೆ, ನಾನು ಏನೆಂದು ಕರೆದುಕೊಳ್ಳಬೇಕು? ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸಿದರು. ಅವರು ಆ ಜಲಾಶಯ ಕಟ್ಟಿಸದೇ ಇದ್ದಿದ್ದರೆ ಅವರು ಹದಿನೇಳು ಕೆರೆ, ನಾನು 107 ಕೆರೆ ತುಂಬಿಸಲು ಎಲ್ಲಿ ಆಗುತ್ತಿತ್ತು? ಎಂದು ಅವರು ಪ್ರಶ್ನಿಸಿದರು.

Author

Leave a Reply

Your email address will not be published. Required fields are marked *