ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ಇಂದು ಪ್ರಕಟಿಸುವ ಸಾಧ್ಯತೆ ಇದೆ. ಇಂದು ಬೆಳಿಗ್ಗೆ ಕುಮಾರಸ್ವಾಮಿ ಅವರ ಜೆ ಪಿ ನಗರದ ಮನೆಯಲ್ಲಿ ಪಕ್ಷದ ಕೋರ್ ಕಮೀಟಿ ಸಭೆ ನಡೆಯಲಿದೆ. ಈ ಸಭೆಯ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು ಎಂಬುದು ಈಗಿನ ನಿರೀಕ್ಷೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಮೇಲೆ ಜೆಡಿಎಸ್ ಗೆ ಮೂರು ಸ್ಥಾನ ದೊರಕಿದೆ. ಈ ಮೂರರಲ್ಲಿ ಎರಡು ಕ್ಷೇತ್ರಗಳಿಂದ ದೇವೇಗೌಡರ ಕುಟುಂಬದವರೇ ಸ್ಪರ್ಧಿಸುವುದು ಬಹುಮಟ್ಟಿಗೆ ನಿಶ್ಚಿತ.

ಮಂಡ್ಯದಿಂದ ಕುಮಾರಸ್ವಾಮಿ ಅವರೋ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರೋ ಎಂಬುದು ಈಗಿನ ಬಹುಮುಖ್ಯ ಪ್ರಶ್ನೆ. ಈ ವಿಚಾರದಲ್ಲಿ ಕುಮಾರಸ್ವಾಮಿ ಅವರ ಮಂಡ್ಯ ಅಭಿಮಾನಿಗಳು ಮತ್ತು ಚೆನ್ನಪಟ್ಟಣದ ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಈ ಬಗ್ಗೆ ಎಲ್ಲರಿಗೂ ಒಪ್ಪಿಗೆಯಾಗುವ ತೀರ್ಮಾನ ಕೈಗೊಳ್ಳುವ ಆಶ್ವಾಸನೆಯನ್ನು ಕುಮಾರಸ್ವಾಮಿ ನೀಡಿದ್ದಾರೆ.

ಇನ್ನು ಹಾಸನ ಕ್ಷೇತ್ರದ ವಿಚಾರದಲ್ಲೂ ಸಮಸ್ಯೆಯಿದೆ. ಪ್ರಜ್ವಲ್ ರೇವಣ್ಣ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ದೇವೇಗೌಡರು ಪ್ರಕಟಿಸಿ ಆಗಿದೆ. ಅವರು ಹಾಸನದಲ್ಲಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.

ಆದರೆ ಮಿತ್ರ ಪಕ್ಷ ಬಿಜೆಪಿ ಈ ಬಗ್ಗೆ ತಕರಾರು ಎತ್ತಿದೆ. ಪ್ರಜ್ವಲ್ ರೇವಣ್ಣ ಕಣಕ್ಕೆ ಇಳಿದರೆ ಸೋಲು ಖಚಿತ. ಹೀಗಾಗಿ ಬೇರೆಯವರನ್ನು ಕಣಕ್ಕೆ ಇಳಿಸಬೇಕು ಎಂಬುದು ಅವರ ಒತ್ತಾಯ. ಆದರೆ ತಮ್ಮ ಸಹೋದರನ ಪುತ್ರನಿಗೆ ಟಿಕೆಟ್ ನಿರಾಕರಿಸುವ ನಿರ್ಧಾರವನ್ನು ಕುಮಾರಸ್ವಾಮಿ ಕೈಗೊಳ್ಲಲು ಸಾಧ್ಯವೆ ಎಂಬುದು ಈಗಿನ ಪ್ರಶ್ನೆ. ಜೊತೆಗೆ ದೇವೇಗೌೠ ಪ್ರಜ್ವಲ್ ಪರವಾಇ ನಿಂತಿರುವುದರಿಂದ ಕುಮಾರಸ್ವಾಮಿ ಅವರ ಮುಂದೆ ಬೇರೆ ಆಯ್ಕೆ ಇದ್ದಂತಿಲ್ಲ.

ಇನ್ನೂ ಕೋಲಾರದ ವಿಚಾರದಲ್ಲಿ ಅಂತಹ ಸಮಸ್ಯೆ ಇಲ್ಲ. ಜೆಡಿಎಸ್ ತನಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಬಿಜೆಪಿಯ ಸಿಟ್ಟಿಂಗ್ ಎಂಪಿ ಏನು ಮಾಡುತ್ತಾರೆ ಎಂಬುದು ಬಹುಮುಖ್ಯ ಪ್ರಶ್ನೆ.

Author

Leave a Reply

Your email address will not be published. Required fields are marked *