ಒಂದೆಡೆ ಬರ, ಇನ್ನೊಂದೆಡೆ ಮತ ಯಾಚನೆ, ಒಂದೆಡೆ ನಿರುದ್ಯೋಗ ಇನ್ನೊಂದೆಡೆ ಪ್ರಚಾರಸಭೆಗಳಿಗೆ ಬರಲು ಆಹ್ವಾನ, ಬಿರುಬಿಸಿಲಿನಲ್ಲಿ ರಾಮನವಮಿಯ ಕೋಸಂಬರಿಯಂತೆ ಈ ಚುನಾವಣೆಯೆ? ಹಾಗೆಂದು ಜನರು ಯೋಚಿಸುತ್ತಿದ್ದಾರೆ ಈ ಬಾರಿ.

ಕನ್ನಡದ ಟಿವಿ ವಾಹಿನಿಯೊಂದು ಬೆಂಗಳೂರಿನ ಸೆಂಟ್ರಲ್ ಲೋಕಸಭಾ  ಕ್ಷೇತ್ರದಲ್ಲಿ ಜನರನ್ನು ಮಾತನಾಡಿಸುತ್ತಿತ್ತು. ಅಲ್ಲಿ ಕೆಲವರು ಮೋದಿ ಬರಲಿ ಎಂದರೆ, ಇನ್ನು ಕೆಲವರು ಕಾಂಗ್ರೆಸ್ ಬರಲಿ ಅಂತಿದ್ದರು. ಹೆಚ್ಚಿನ ಜನ ಕಾಂಗ್ರೆಸ್ ಬರಲಿ ಎನ್ನುತ್ತಿದ್ದರು. ಯಾಕೆ? ಎಂದು ಕೇಳಿದರೆ ಕಾಂಗ್ರೆಸ್ ಏನೂ ಮಾಡಿಲ್ಲ 70 ವರ್ಷಗಳಲ್ಲಿ , ನಮಗೆ ಅವಕಾಶ ಕೊಡಿ ಎಂದರು ಎಂದು ಬಿಜೆಪಿಗೆ ಮತ ನೀಡಿದ್ದೆವು. ಆದರೆ 70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಸಾಲದ ಮೂರು ಪಟ್ಟು ಹೆಚ್ಚು ಸಾಲ ಮಾಡಿದೆ ಬಿಜೆಪಿ. ಅದೂ ಕೇವಲ 10 ವರ್ಷಗಳಲ್ಲಿ. ಸಮಾಜದ ಕೆಳವರ್ಗದ ಜನರನ್ನು ಕಡೆಗಣಿಸಿದೆ. ಉಳ್ಳವರ ಪರವಾಗಿದೆ ಈ ಕೇಂದ್ರ ಸರ್ಕಾರ ಎಂಬುದು ಅವರ ವಾದವಾಗಿತ್ತು.

ಹಾಗಿದ್ದರೆ ಈ ಲೋಕಸಭಾ ಚುನಾವಣೆಯಲ್ಲಿ ಜನರ ಒಲವು ಯಾರ ಕಡೆ ಇದೆ? ಇನ್ನೂ ನಿರ್ಣಯಕ್ಕೆ ಬರುವುದು ಕಷ್ಟ. ಒಂದೆಡೆ ಮೋದಿ ಪ್ರಭುತ್ವದೆಡೆ ಕಡಿಮೆಯಾಗದ ಭಕ್ತಿ ಇದ್ದರೆ, ಇನ್ನೊಂದೆಡೆ ಮೋದಿ ನಿರುಂಕುಶತೆ ಜನರಲ್ಲಿ ಒಳಗೊಳಗೇ ಅಸಮಾಧಾನ ಸೃಷ್ಟಿಸಿದೆ. ಈ ಹೊತ್ತಿನಲ್ಲಿ ಮತದಾರ ಪ್ರಭು ಯಾರನ್ನು ಯಾವ ಕಾರಣಕ್ಕೆ ಆಯ್ಕೆ ಮಾಡಿಕೊಳ್ಳುತ್ತಾನೆ? ಎಂದು ಯೋಚಿಸುವುದಾದರೆ…

ಗ್ಯಾರಂಟಿಗಾಗಿ? – ಬೆಲೆ ಏರಿಕೆ, ನಿರುದ್ಯೋಗ, ಬಡತನ ಕೆಳವರ್ಗದವರಿಗೆ ಹೊಸದಲ್ಲ. ಆದರೆ ನಾವು ಹಳಬರಿಗಂತ ಭಿನ್ನ ಎಂಬ ಭರವಸೆ ಹುಟ್ಟಿಸಿ, ಹಿಂದಿಗಿಂತಲೂ ಕಡೆಯಾಗಿಸಿದ್ದು ಸರಿಯಲ್ಲ ಎನ್ನುವ ಕೂಗು ಒಂದೆಡೆ ಇದೆ. ಹಸಿವು ಎಲ್ಲ ಅನಿವಾರ್ಯತೆಗಿಂತ ದೊಡ್ಡದು. ಜನರ ಹೊಟ್ಟೆ, ಬಟ್ಟೆ, ದಿನನಿತ್ಯದ ಖರ್ಚಿಗೆ ಅಷ್ಟೋ ಇಷ್ಟೋ ಸಹಾಯ ಮಾಡುವ ಸರ್ಕಾರಗಳು ಹೆಚ್ಚು ಆಕರ್ಷಣೀಯವಾಗಿ ಕಾಣುತ್ತವೆ. ಇದರಲ್ಲಿ ಎರಡು ಮಾತಿಲ್ಲ. ಅದಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಕರ್ನಾಟಕದ ಜನರ ವಿಶ್ವಾಸ ಗಳಿಸಿದೆ ಕಾಂಗ್ರೆಸ್. ಅದೇ ಭರವಸೆಯಲ್ಲಿ ಕೇಂದ್ರದ ಚುನಾವಣೆಯಲ್ಲಿ ಹೊಸ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಸೂಕ್ತ ಪ್ರಚಾರಕ್ಕೆ ಹಣವಿಲ್ಲದೆ ಈಗಾಗಲೇ ಗ್ಯಾರಂಟಿಗಳ ಪ್ರಚಾರ ನೆನೆಗುದಿಗೆ ಬಿದ್ದಿದೆ. ಆದಾಗ್ಯೂ ಕರ್ನಾಟಕವೂ ಸೇರಿದಂತೆ ಭಾರತದ ಜನಮಾನಸದಲ್ಲಿ ಮತ್ತೆ ಮನೆ ಮಾಡಬೇಕೆಂಬ ಹಂಬಲದಲ್ಲಿ ಕಾಂಗ್ರೆಸ್ ಇದೆ. ಸಾಧ್ಯವಾಗುತ್ತಾ? ಕಾಲವೇ ಉತ್ತರಿಸಬೇಕು.

ಮುಕ್ತ ಅಭಿವ್ಯಕ್ತಿಗಾಗಿ – ಇದು ಪ್ರಗತಿಪರರೂ, ನಿರ್ಲಿಪ್ತರೂ ಮತ್ತು ಬಿಜೆಪಿ ವಿರೋಧಿಗಳ ಬೇಡಿಕೆ. ಕಳೆದ 10 ವರ್ಷಗಳಿಂದ ಸಾಮಾನ್ಯ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಕಷ್ಟು ಬಾರಿ ಕೊಡಲಿ ಏಟು ಬಿದ್ದಿದೆ. ಪ್ರಭುತ್ವದ ವಿರುದ್ಧ ಮಾತನಾಡಿದ ಜನರನ್ನು ಕೇಂದ್ರ ಸರಕಾರದ ಪ್ರಭಾವ ಬಳಸಿ ಹತ್ತಿಕ್ಕಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ತಡೆಹಿಡಿಯುವಲ್ಲಿಂದ ಹಿಡಿದು ದಿನಗಟ್ಟಲೆ, ತಿಂಗಳುಗಟ್ಟಲೆ ಸೆರೆಮನೆ ತೋರಿಸಿ, ವಿವಿಧ ಸಂಘಟನೆಗಳ ಶಂಕಿತ ಉಗ್ರರ, ತೀವ್ರಗಾಮಿಗಳ ಪಟ್ಟ ಹೇರಿ ಸಾಕಷ್ಟು ಹಿಂಸೆ ನೀಡಲಾಗಿದೆ. ಈ ಬೆಳವಣಿಗೆ ಎಲ್ಲಿಗೆ ಹೋಗುತ್ತದೋ ಎನ್ನುವ ಆತಂಕದಲ್ಲಿರುವ ಜನರ ಒಕ್ಕೊರಲು ಒಂದೇ ಆಗಿದೆ ಅದು ಅಭಿವ್ಯಕ್ತಿ ಸ್ವಾತಂತ್ರ.  ಈ ಸ್ವಾತಂತ್ರ್ಯ ನೀಡುತ್ತಾರೆ ಎನ್ನುವ ಭರವಸೆ ಇದ್ದರೆ ಆ ಪಕ್ಷದೊಂದಿಗೆ ಈ ಜನರು ಹೋಗುತ್ತಾರೆ.

ಸಾಮಾಜಿಕ ಸೌಹಾರ್ದಕ್ಕಾಗಿ – ಮೋದಿ ಮುಖ ನೋಡಿ ಮತ ಹಾಕಿದವರು ಬಹಳಷ್ಟು ಜನ. ಯಾವಾಗೆಲ್ಲ ರಾಜ್ಯ, ರಾಷ್ಟ್ರ ನಾಯಕರ ಮುಖ ನೋಡಿ ಬಿಜೆಪಿಗೆ ಮತ ಹಾಕಲಾಗಿದೆಯೋ ಆಗೆಲ್ಲ ಮತೀಯ ಸಂಘರ್ಷ, ಕೋಮು ಸಂಘರ್ಷ ಸಾಮಾನ್ಯ ಎನ್ನುವುದು ಅನುಭವವಾಗಿದೆ. 2008ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಬಂದಾಗ ಚರ್ಚ್ ದಾಳಿ, 2018ರಲ್ಲಿ ಮುಸ್ಲಿಮರ ಹಿಜಾಬು, ಹಲಾಲು , ವ್ಯಾಪಾರದ ಮೇಲೆ ನಿಷೇಧ ಹೀಗೆ ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ಗೋಳುಹೊಯ್ದುಕೊಳ್ಳುವುದು ಸಾಮಾನ್ಯವಾಗಿದೆ. ನಮ್ಮ ನಾಯಕರ ಬೆಂಬಲ ನಮಗಿದೆ ಎನ್ನುವ ಧೋರಣೆಯೋ ಅಥವಾ ನಿಜವಾಗಿಯೂ ಹಿನ್ನೆಲೆಯಲ್ಲಿ ಯಾರೋ ಇದ್ದು, ಮುನ್ನೆಲೆಗೆ ಈ ಸಂಘಟನೆಗಳ ಕಾರ್ಯಕರ್ತರು ಕೆಲಸ ಮಾಡುತ್ತಾರೋ , ಒಟ್ಟಿನಲ್ಲಿ ಸಾಮಾಜಿಕ ಸೌಹಾರ್ದ ಅಪಾಯವನ್ನು ಎದುರಿಸುತ್ತದೆ. ಶಾಂತಿಪ್ರಿಯ ಭಾರತೀಯರು ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರದಲ್ಲಿ ಯಾರನ್ನು ಆಯ್ಕೆ ಮಾಡಬಹುದು?

ಆರ್ಥಿಕ ಅಭಿವೃದ್ಧಿಗಾಗಿ – ಸರಕಾರ ಹಲವು ಯೋಜನೆಗಳನ್ನು ಕಳೆದ ಹತ್ತು ವರ್ಷಗಳಲ್ಲಿ ತಂದಿದೆ. ಅವುಗಳಲ್ಲಿ ಬಹುತೇಕವು ಹಳೆಯ ಯುಪಿಎ ಸರಕಾರ ಜಾರಿಗೆ ತಂದ ಯೋಜನೆಗಳ ಹೆಸರು ಬದಲಾವಣೆಯಷ್ಟೆ.  ಮನೆಮನೆಗೂ ನಲ್ಲಿ ನೀರು, ಉಜ್ವಲ ಗ್ಯಾಸ್  ಯೋಜನೆ, ಆಯುಷ್ಮಾನ್ ಯೋಜನೆ, ಜನೌಷಧಿ ಎಲ್ಲವೂ ಅನುಷ್ಠಾನಗೊಂಡ ಯುಪಿಎ ಯೋಜನೆಗಳು. ಸಾಕಷ್ಟು ರಸ್ತೆಗಳು, ರೈಲುಗಳು, ರೈಲು ಮಾರ್ಗಗಳು ನಿರ್ಮಾಣವಾಗಿವೆ. ಆದರೆ ಜನಸಾಮಾನ್ಯ ಇವುಗಳ ಬಗ್ಗೆ ತಲೆಕಡಿಸಿಕೊಂಡಂತೆ ಕಾಣುತ್ತಿಲ್ಲ. ನಾವು ಕೊಡುವ ತೆರಿಗೆ ಹಣದಲ್ಲಿ ಅವರು ಅಷ್ಟಾದರೂ ಮಾಡಬೇಕಾದದ್ದು ಕರ್ತವ್ಯ, ಮಾಡಿದ್ದಾರೆ ಎನ್ನುವ ಮನಸ್ಥಿತಿ ಇದ್ದಂತಿದೆ. ಬಡವರು ದಿನದಿನಕ್ಕೆ ಬಡವರಾಗಿಯೂ, ಉಳ್ಳವರು ದಿನದಿನಕ್ಕೂ ಉಳ್ಳವರಾಗಿಯೂ ಇರುವಂತದ್ದು ಜನಮಾನಸದ ಅಸಮಾಧಾನಕ್ಕೆ ಮೊದಲ ಕಾರಣವಾಗಿದೆ. ಜಿಎಸ್ ಟಿ ಮತ್ತು ನೋಟ್ ಬ್ಯಾನ್ ಜನರ ಮನಸ್ಸಿನಲ್ಲಿ ಕುಳಿತಿದೆ. ಜೊತೆಗೆ ಕೊರೊನಾ ಕಾಲದ ಲಾಕ್ ಡೌನ್ ತಂದ ಬದುಕಿನ ಸ್ಥಗಿತತೆ ಮತ್ತೆ ಚಿಗುರದ ಕುಟುಂಬಗಳಿವೆ. ಅವುಗಳ ಕುದಿಮನಸ್ಸು ಹೇಗೆ ಪ್ರತಿಕ್ರಿಯಿಸುತ್ತದೆ?

ನೀಡಿದ ಮತಕ್ಕೆ ಮೌಲ್ಯ – ಸಾವಿರಾರು ಕೋಟಿ ರೂ. ಖರ್ಚು ಮಾಡಿ ನಡೆಸಿದ ಚುನಾವಣೆಗಳಲ್ಲಿ ಮತದಾರ ಪ್ರಭು ತನ್ನ ಒಂದು ಇಡೀ ದಿನವನ್ನು ಮುಡಿಪಾಗಿಡುತ್ತಾನೆ. ಅಮೂಲ್ಯವಾದ ಮತ ಕೊಟ್ಟು ಕಳಿಸಿದ ಪ್ರತಿನಿಧಿ ಇದ್ದಕ್ಕಿದ್ದಂತೆ ಯಾವುದೋ ಒತ್ತಡ, ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡುವುದು ಮತದಾರನಿಗೆ ಮಾಡುವ ಮೋಸ. ಈ ಮೋಸದಾಟಕ್ಕೆ ಹಣವಿರುವ, ತನಿಖಾ ಸಂಸ್ಥೆಗಳ ಅಧಿಕಾರವಿರುವ ಪಕ್ಷದ ಹೊಣೆಗಾರಿಕೆ ಹೆಚ್ಚು. ಅದೂ ಅಲ್ಲದೆ ಶಾಸಕರ ಖರೀದಿಯಿಂದಲೇ ಸರಕಾರಗಳನ್ನು ರಚಿಸುವುದು. ನಂತರ “ನೋಡಿ, ಈ ಎಲ್ಲಾ ರಾಜ್ಯಗಳಲ್ಲೂ ನಮ್ಮ ಸರಕಾರವೇ ಇದೆ, ನೀವೂ ನಮಗೆ ಬೆಂಬಲ ನೀಡಿ ‘’ ಎಂದು ಜನರ ದಿಕ್ಕು ತಪ್ಪಿಸುವ ನಡೆಯನ್ನೂ ಮತದಾರ ಗಮನಿಸಿದ್ದಾನೆ.

ಪ್ರಾಮಾಣಿಕ ಮಾತುಗಳು ಮತ್ತು ನಿಷ್ಪಕ್ಷಪಾತತೆ – ಲೋಕಸಭೆಯ ಅಧಿವೇಶನ ಇರಲಿ,  ಚುನಾವಣಾ ಮತ ಪ್ರಚಾರವಿರಲಿ, ಕೇಂದ್ರ ಸರಕಾರಗಳ ಸಂಸ್ಥೆಗಳ ಕಾರ್ಯಾಚರಣೆ ಇರಲಿ ಪ್ರಸ್ತುತ ಸರಕಾರವು ಪ್ರಾಮಾಣಿಕವಾಗಿಲ್ಲ, ಸ್ವಜನ ಪಕ್ಷಪಾತ, ಸುಳ್ಳುಗಳ ಸುರಿಮಳೆಯನ್ನು ಕೆಳವರ್ಗದ ಜನರು ಗಮನಿಸುತ್ತಿದ್ದಾರೆ. ಮಾಧ್ಯಮಗಳು , ಸರಕಾರಿ ನೀತಿಗಳು ಈ ವಿಷಯವನ್ನು ಎಷ್ಟೇ ಮುಚ್ಚಿಹಾಕಲು ಯತ್ನಿಸಿದರೂ ಸತ್ಯವೂ ಇನ್ನಷ್ಟು ಪ್ರಬಲವಾಗಿ ಹಲವು ಕಂಡಿಗಳಿಂದ ತನ್ನ ಕಿರಣಗಳನ್ನು ಜನರಿಗೆ ತಲುಪಿಸುತ್ತಿದೆ.

ಜನರು ತಮ್ಮ ಅಭಿವ್ಯಕ್ತಿಗಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸಿದರೆ ಅವರೇ ಪ್ರಭುತ್ವವಾಗಿ ಜನರನ್ನು ಕಾಲ ಕಸವನ್ನಾಗಿ ನೋಡುವುದು ಸರಿಯಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ. ದೇಶದ ಶಾಸಕಾಂಗವೆಂದರೆ ಕೇವಲ ಒಬ್ಬ ಪ್ರಧಾನಿಯಲ್ಲ. ಇಡೀ 544 ಲೋಕಸಭಾ ಸದಸ್ಯರು ಮತ್ತು 245 ರಾಜ್ಯ ಸಭಾ ಸದಸ್ಯರು. ಇವರ ದಕ್ಷತೆ ಮತ್ತು ಜನಪರ ಯೋಚನೆಗಳನ್ನು ಪ್ರಭುದ್ಧ ಮತದಾರ ಓರೆಗೆ ಹಚ್ಚಿ ಮತ ನೀಡಬಲ್ಲನೆ? ನೀಡಿದರೆ ಯಾರು ಗೆಲ್ಲಬಹುದು? ಗೊತ್ತಿಲ್ಲ. ಭಾರತದ ಆಡಳಿತ ಚುಕ್ಕಾಣಿ ನಿರ್ಣಾಯಕ ಮತಕ್ಕಾಗಿ ಕಾಯುತ್ತಿದೆ.

Author

Leave a Reply

Your email address will not be published. Required fields are marked *