ಹುಬ್ಬಳ್ಳಿ: ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ತಡೆ ಬಗ್ಗೆ ಡಿಎಂಕೆ ಪ್ರಣಾಳಿಕೆಯಲ್ಲೇ ಹೇಳಿದೆ. ಕಾಂಗ್ರೇಸ್ ಇಂಡಿಯಾ ಒಕ್ಕೂಟದಿಂದ ಡಿಎಂಕೆಯನ್ನು ಕೈ ಬಿಡುತ್ತದೆಯೇ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷ ಕಾಂಗ್ರೆಸ್ ತನ್ನ ನಿಲುವೇನು? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅಗ್ರಹಿಸಿದರು.
ಮೇಕೆದಾಟು ತಡೆಯುವ ಡಿಎಂಕೆ ಪ್ರಣಾಳಿಕೆ ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆಯೂ ಆಗುತ್ತದೆ. ಹಾಗಾಗಿ ಕಾಂಗ್ರೆಸ್ ತನ್ನ ನಿಲುವನ್ನು ತಿಳಿಸಬೇಕೆಂದು ಒತ್ತಾಯಿಸಿದರು.
ಮೇಕೆದಾಟು ಸಂಬಂಧ ನಮ್ಮ ನೀರು ನಮ್ಮ ಹಕ್ಕು ಎನ್ನುತ್ತ ಕಾಂಗ್ರೆಸ್ ಪಕ್ಷ ಈ ಹಿಂದೆ ದಿಲ್ಲಿ ಪಾದಯಾತ್ರೆ ನಡೆಸಿತ್ತು. ಕೋವಿಡ್ ಸಂದರ್ಭದಲ್ಲಿ ಕೋರ್ಟ್ ಸೂಚನೆ ಇದ್ದರೂ ನಿಯಮ ಧಿಕ್ಕರಿಸಿ ಪ್ರತಿಭಟನೆ ನಡೆಸಿತ್ತು. ಈಗ ಅದರ ಅಂಗ ಪಕ್ಷ ಡಿಎಂಕೆ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ತಡೆ ಎಂದು ಪ್ರಣಾಳಿಕೆಯಲ್ಲೇ ಹೇಳಿದೆ. ಕಾಂಗ್ರೆಸ್ ಈಗ ಯಾವ ನಿಲುವು ತಗೆದುಕೊಳ್ಳುತ್ತದೆ? ಎಂದು ಜೋಶಿ ಪ್ರಶ್ನಿಸಿದರು.
ಕಾಂಗ್ರೆಸ್ ಅವಕಾಶವಾದಿ:
ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಮಹದಾಯಿ ವಿಚಾರದಲ್ಲಿ ಸಹ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಹನಿ ನೀರು ಕೊಡುವುದಿಲ್ಲ ಎಂದು ಗೋವಾಕ್ಕೆ ಹೋಗಿ ಹೇಳಿದ್ದರು. ಈಗ ಮೇಕೆದಾಟು ವಿಚಾರದಲ್ಲೂ ಅದೇ ರೀತಿ ನಾಟಕವಾಡುತ್ತಿದೆ ಎಂದು ಆರೋಪಿಸಿದರು.
ಸಿಎಂ, ಡಿಸಿಎಂ ಡೋಂಗಿತನ:
ನಮ್ಮ ನೀರು ನಮ್ಮ ಹಕ್ಕು ನಮ್ಮ ತೆರಿಗೆ ನಮ್ಮ ಹಕ್ಕು ಎಂದೆಲ್ಲಾ ಹೋರಾಟ ಮಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಈಗೇನು ಹೇಳುತ್ತಾರೆ? ಡಿಎಂಕೆ ನಡೆ ಖಂಡಿಸುತ್ತಾರೆಯೇ? ಇವರಿಗೆ ನಿಜವಾಗಿ ರಾಜ್ಯದ ನೆಲ, ಜಲ, ಸಂಸ್ಕೃತಿ ಮೇಲೆ ಕಾಳಜಿ ಇಲ್ಲ. ಸುಮ್ಮನೆ ಡೋಂಗಿತನ ಪ್ರದರ್ಶಿಸುತ್ತಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಅಂದು ದಿಲ್ಲಿ ಪಾದಯಾತ್ರೆ ಪ್ರತಿಭಟನೆ ಮಾಡಿದ್ರಿ. ಇಂದೂ ಹೋಗಿ ಪ್ರತಿಭಟನೆ ಮಾಡಿ. ಇಲ್ಲವೇ, ಡಿಎಂಕೆ ಯನ್ನು ಇಂಡಿಯಾ ಒಕ್ಕೂಟದಿಂದ ಕೈ ಬಿಡಿ ನೋಡೋಣ. ಇದಕ್ಕೇನು ಹೇಳುತ್ತಾರೆ ಸಿಎಂ-ಡಿಸಿಎಂ? ಮತ್ತು ರಾಹುಲ್ ಗಾಂಧಿ ಅವರು ಎಂದು ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.
