ಕಲಬುರಗಿ : ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಅನುಸರಿಸುವ ವಿಧಾನದಲ್ಲಿರುವ ಗೊಂದಲ ಸರಿಪಡಿಸುವಂತೆ ನೇಮಕಾತಿ ವಿಭಾಗದ ಡೆಪ್ಯುಟಿ ಇನ್ಸ್‌ಪೆಕ್ಟರ್‌ ಜನರಲ್ ಆಫ್ ಪೊಲೀಸ್ ಅವರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದ 371 ಜೆ ಮೀಸಲಾತಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಕಾಲಕಾಲಕ್ಕೆ ಸ್ಪಷ್ಟ ನಿರ್ದೇಶನ‌ ನೀಡುತ್ತಿದೆ. ಪ್ರಸ್ತುತ ದಿನಾಂಕ : 01.02.2023 ರ ಸುತ್ತೋಲೆಯಲ್ಲಿರುವ ಮಾರ್ಗಸೂಚಿಗಳು ಚಾಲ್ತಿಯಲ್ಲಿರುತ್ತವೆ. ಅದರಂತೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆಪಟ್ಟಿ ತಯಾರಿಸುವಾಗ ಅನುಸರಿಸುವ ವಿಧಾನವನ್ನು ಸೂಚಿಸಿದ್ದು ತಮ್ಮ ಪ್ರಾಧಿಕಾರವು ಪಾಲನೆ ಮಾಡದಿರುವುದು ಕಂಡುಬರುತ್ತಿದೆ.

ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ (ಸಿವಿಲ್) 545 ಹುದ್ದೆಗಳ ನೇಮಕಾರಿಗೆ ಮರುಪರೀಕ್ಷೆ ನಡೆಸಲಾಗಿದ್ದು, ಸದರಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ತಯಾರಿಸುವ ಮುಂಚೆ 371 ಜೆ ಮೀಸಲಾತಿ ಕೋರಿರುವ ಕಕ ಪ್ರದೇಶದ ಅಭ್ಯರ್ಥಿಗಳನ್ನು ಸರ್ಕಾರ ಪ್ರಸ್ತುತ ಜಾರಿಯಲ್ಲಿರುವ ದಿನಾಂಕ: 01.02.2023 ರ ಸುತ್ತೋಲೆಯನ್ನು ಕಡ್ಡಾಯವಾಗಿ ಅನುಸರಿಸಿ ಗೊಂದಲಕ್ಕೆ  ಆಸ್ಪದ ನೀಡದಂತೆ ಗಮನಹರಿಸಬೇಕು.

ಈ ನೇಮಕಾತಿ ಅಧಿಸೂಚನೆಯು 371 ಜೆ ಅನುಷ್ಠಾನದ ಸಂದರ್ಭದಲ್ಲಿ ಕಕ ಪ್ರದೇಶದ ಅಭ್ಯರ್ಥಿಗಳನ್ನು ಯಾವ ಸುತ್ತೋಲೆಯಂತೆ ಆಯ್ಕೆ ಮಾಡಲಾಗುತ್ತದೆ‌ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲವಾದ್ದರಿಂದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿರುತ್ತದೆ. ಆದ್ದರಿಂದ ಈ ಮೇಲಿನ ನೇಮಕಾತಿ ಅಧಿಸೂಚನೆಯಲ್ಲಿ 371 ಜೆ ಮೀಸಲಾತಿ ಕೋರಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳನ್ನು ಸರ್ಕಾರದ ಪ್ರಸ್ತುತ ಜಾರಿಯಲ್ಲಿರುವ ದಿನಾಂಕ 01.02.2023 ರ ಸುತ್ತೋಲೆಯನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಸಚಿವರು ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *