ನವದೆಹಲಿ : ಅಂತೂ ಇಂತೂ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಚೀನಾ ಜೊತೆಗಿನ ಗಡಿ ವಿವಾದದ ಬಗ್ಗೆ ಮಾತನಾಡಿದ್ದಾರೆ. ಮಾತುಕತೆಯ ಮೂಲಕ ಗಡಿಯಲ್ಲಿ ಶಾಂತಿ ಸ್ಥಾಪನೆ ಸಾಧ್ಯ ಎಂಬ ಭರವಸೆಯ ಮಾತನ್ನು ಅವರು ಆಡಿದ್ದಾರೆ.
ಚೀನಾ ವಿಚಾರದಲ್ಲಿ ಗುಸ್ಕೆ ಮಾರೆಂಗೆ ಎಂಬ ಮಾತು ಸರ್ಕಾರದಿಂದ ಬಂದಿಲ್ಲ. ಆಕ್ರಮಣಕಾರಿ ನಿಲುವು ಚೀನಾ ವಿಚಾರದಲ್ಲಿ ಇಲ್ಲ. ಗುಸ್ಕೆ ಮಾರೆಂಗೆ ಖ್ಯಾತಿಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭಾರತ ಮತ್ತು ಚೀನಾ ನಡುವಿನ ಸ್ಥಿರ ಮತ್ತು ಶಾಂತಿಯುತ ಸಂಬಂಧ ಇಡೀ ಪ್ರದೇಶ ಮತ್ತು ಜಗತ್ತಿಗೆ ಮುಖ್ಯವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಗುಣಾತ್ಮಕ ಹಾಗೂ ರಚನಾತ್ಮಕ ದ್ವಿಪಕ್ಷೀಯ ಮಾತುಕತೆಯ ಮೂಲಕ ಎರಡೂ ದೇಶಗಳ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ಮತ್ತು ಉಳಿಸಿಕೊಳ್ಳಲು ಸಾಧ್ಯ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ, ಚೀನಾದೊಂದಿಗಿನ ಸಂಬಂಧ ಅತ್ಯಂತ ಮುಖ್ಯವಾಗಿದೆ ಎಂದು ಅಮೆರಿಕದ ನ್ಯೂಸ್ವೀಕ್ ಮ್ಯಾಗಜಿನ್ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
“ದ್ವಿಪಕ್ಷೀಯ ಮಾತುಕತೆಯ ಮೂಲಕ ನಮ್ಮ ಗಡಿಯಲ್ಲಿನ ದೀರ್ಘಕಾಲದ ಪರಿಸ್ಥಿತಿಯನ್ನು ತುರ್ತಾಗಿ ಪರಿಹರಿಸಬೇಕಾಗಿದೆ ಎಂಬುದು ನನ್ನ ನಂಬಿಕೆ. ಭಾರತ ಮತ್ತು ಚೀನಾ ನಡುವಿನ ಸ್ಥಿರ ಮತ್ತು ಶಾಂತಿಯುತ ಸಂಬಂಧ ನಮ್ಮ ಎರಡು ದೇಶಗಳಿಗೆ ಮಾತ್ರವಲ್ಲದೆ ಇಡೀ ಪ್ರದೇಶ ಮತ್ತು ಪ್ರಪಂಚ”ಕ್ಕೆ ಮುಖ್ಯ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ನ್ಯೂಯಾರ್ಕ್ ಮೂಲದ ಮ್ಯಾಗಜೀನ್ಗೆ ನೀಡಿದ 90 ನಿಮಿಷಗಳ ಸಂದರ್ಶನದಲ್ಲಿ ಪ್ರಧಾನಿಯವರು ಮುಂಬರುವ ಲೋಕಸಭೆ ಚುನಾವಣೆ, ಪಾಕಿಸ್ತಾನದೊಂದಿಗಿನ ಸಂಬಂಧ, ರಾಮಮಂದಿರ ಮತ್ತು ಪ್ರಜಾಪ್ರಭುತ್ವ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದರು.
ಪ್ರಧಾನಿ ಹೇಳಿದ ಇನ್ನು ಕೆಲವು ಮಹತ್ವದ ಅಂಶಗಳು:
ಜಗತ್ತಿನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರಗಳ ಬಗೆಗಿನ ಅಸಮಾಧಾನವೂ ಹೆಚ್ಚಾಗಿದೆ. ಎರಡನೇ ಅವಧಿಯ ಅಂತ್ಯದ ವೇಳೆಗೆ ಸರ್ಕಾರಗಳು ಜನ ಬೆಂಬಲವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ಆದರೆ ಇಲ್ಲಿ ಅಂದರೆ ಭಾರದತಲ್ಲಿ ನಮ್ಮ ಸರ್ಕಾರಕ್ಕೆ ಜನಬೆಂಬಲ ಹೆಚ್ಚುತ್ತಿದೆ.
ಭಾರತವು 11ನೇ ಅತಿದೊಡ್ಡ ಆರ್ಥಿಕತೆಯಿಂದ ಐದನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿರುವುದನ್ನು ಜನರು ನೋಡಿದ್ದಾರೆ. ಈಗ ಭಾರತವು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕು ಎಂಬುದು ದೇಶದ ಆಶಯವಾಗಿದೆ.
ಪಾಕಿಸ್ತಾನದೊಂದಿಗಿನ ಬಾಂಧವ್ಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಹೊಸದಾಗಿ ಅಧಿಕಾರ ವಹಿಸಿಕೊಂಡ ಪಾಕಿಸ್ತಾನದ ಪ್ರಧಾನಿಯನ್ನು ಅಭಿನಂದಿಸಿದ್ದೇನೆ. ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತವಾದ ವಾತಾವರಣದಲ್ಲಿ ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಮುನ್ನಡೆಸಲು ಭಾರತ ಯಾವಾಗಲೂ ಬದ್ಧ ಎಂದು ಹೇಳಿರುವುದಾಗಿ ತಿಳಿಸಿದರು.
