ಕೆ. ಎಸ್. ಈಶ್ವರಪ್ಪ ಕೋಪವನ್ನು ಶಮನಗೊಳಿಸುವ ಯತ್ನ ವಿಫಲವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡುವ ದಿನವೇ ಅವರು ಮಠಾಧಿಪತಿಗಳ ಭೇಟಿ ಮತ್ತು ದೇವಾಲಯಗಳ ದರ್ಶನಕ್ಕೆ ಹೊರಟು ನಿಂತಿದ್ದಾರೆ.
ಪುತ್ರ ಕೆ.ಇ.ಕಾಂತೇಶ್’ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದಿದ್ದಕ್ಕೆ ಅವರು ಅಸಮಾಧಾನಗೊಂಡಿದ್ದಾರೆ. ಬಂಡಾಯದ ಬಾವುಟ ಹಾರಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಧಾಮೋಹನ್ ಅಗರ್ವಾಲ್ ಹಾಗೂ ರಾಜ್ಯ ನಾಯಕರು ಭಾನುವಾರ ಈಶ್ವರಪ್ಪ ಮನೆಗೆ ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದರಾದರೂ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಇದರಿಂದಾಗಿ ವರಿಷ್ಠರು ಬರಿಗೈಯಲ್ಲಿ ವಾಪಸ್ ತೆರಳಿದರು.
ಈ ನಡುವೆ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಈಶ್ವರಪ್ಪ ಜೊತೆ ಸಂಧಾನಕ್ಕೆ ಹೆಚ್ಚಿನ ಒಲವು ತೋರಿಸುತ್ತಿಲ್ಲ. ದೂರವಾಣಿಯ ಮೂಲಕವೂ ಅವರು ಈಶ್ವರಪ್ಪ ಜೊತೆ ಮಾತನಾಡಿಲ್ಲ. ಇದು ಈಶ್ವರಪ್ಪ ಅವರ ಕೋಪವನ್ನು ಇನ್ನಷ್ಟು ಹೆಚ್ಚಿಸಿದೆ.
ಪಕ್ಷದ ರಾಷ್ಟ್ಟೀಯ ಅಧ್ಯಕ್ಷ ನಡ್ಡಾ ಅವರಾಗಲೀ ಅಮಿತ್ ಷಾ ಅವರಾಗಲಿ ಈಶ್ವರಪ್ಪ ಅವರಿಗೆ ಕ್ಯಾರೇ ಅನ್ನುತ್ತಿಲ್ಲ. ಇದು ಈಶ್ವರಪ್ಪ ಅವರ ಬೇಸರಕ್ಕೆ ಇನ್ನೊಂದು ಕಾರಣ.
ಭಾನಿವಾರ ಬೆಳಿಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಡಿ.ಎಸ್. ಅರುಣ್ ಹಾಗೂ ಇತರ ನಾಯಕರು ಶಿವಮೊಗ್ಗದ ಮಲ್ಲೇಶ್ವರ ನಗರದ ಈಶ್ವರಪ್ಪ ಮನೆಗೆ ಭೇಟಿ ನೀಡಿದ್ದರು. ಆದರೆ ಈಶ್ವರಪ್ಪ ಅವರ ಜೊತೆ ಸರಿಯಾಗಿ ಮಾತನಾಡದೇ ಹೊರಟು ಹೋಗಿದ್ದರು.
