ಭಾರತ “ಕೃಷಿಪ್ರಧಾನ ದೇಶ”. ದೇಶದ ಆರ್ಥಿಕತೆ, ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನಶೈಲಿಯ ಮೂಲವೇ ಕೃಷಿ. ಎಷ್ಟೇ ವಿಜ್ಞಾನ – ತಂತ್ರಜ್ಞಾನ ಬೆಳವಣಿಗೆಯಾಗಿದೆ, ನಗರೀಕರಣವೇ ಆದ್ಯತೆಯಾಗಿದೆ ಎಂದರೂ ತಿನ್ನಲು ಅನ್ನವೇ ಬೇಕು. ಈ ಅನ್ನಕ್ಕೆ ರೈತನನ್ನೇ ಆಶ್ರಯಿಸಬೇಕು. ಈ ಕೃಷಿಕನಿಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಇಂತಹ ಕೃಷಿಕನಿಗಾಗಿ ಮಿಡಿದ ರೈತಪರ ನಾಯಕ ಭಾರತದ ಮಾಜಿ ಪ್ರಧಾನಮಂತ್ರಿ ಚೌದರಿ ಚರಣ್ ಸಿಂಗ್. ಅವರ ಜನ್ಮದಿನವಾದ ಇಂದು ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ.

ರೈತನು ಬೆಳೆಯುವ ಬೆಳೆಯೇ ನಮ್ಮ ಬದುಕಿನ ಆಧಾರ. ಅನ್ನ, ತರಕಾರಿ, ಹಣ್ಣು, ಹಾಲು – ನಮ್ಮ ಜೀವನದ ಪ್ರತಿಯೊಂದು ಅಗತ್ಯವೂ ರೈತನ ಶ್ರಮದ ಫಲ. ಆದರೆ ಈ ಶ್ರಮಕ್ಕೆ ತಕ್ಕ ಪ್ರತಿಫಲ, ಗೌರವ ಮತ್ತು ಭದ್ರತೆ ದೊರಕುತ್ತಿದೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ. ರಾಷ್ಟ್ರೀಯ ರೈತರ ದಿನವು ರೈತರ ಶ್ರಮಕ್ಕೆ ಗೌರವ ಸಲ್ಲಿಸುವ ದಿನವಾಗಿದೆ. ಜೊತೆಗೆ ಕೃಷಿಯ ಮಹತ್ವವನ್ನು ಯುವಪೀಳಿಗೆಗೆ ತಿಳಿಸುವ ಅವಕಾಶವನ್ನು ಕಲ್ಪಿಸುತ್ತದೆ. ರೈತರ ಸಮಸ್ಯೆಗಳ ಬಗ್ಗೆ ಸಮಾಜ ಹಾಗೂ ಸರ್ಕಾರವನ್ನು ಎಚ್ಚರಿಸುವ ವೇದಿಕೆಯಾಗಿದೆ. ಕೃಷಿ ಕ್ಷೇತ್ರದ ಸುಧಾರಣೆಗಳ ಅಗತ್ಯವನ್ನು ನೆನಪಿಸುವ ದಿನವಾಗಿಯೂ ಆಚರಿಸಲ್ಪಡುತ್ತದೆ.

ಈ ಹಿನ್ನೆಲೆಯಲ್ಲಿ ಭಾರತದ ಕೃಷಿ ಕ್ಷೇತ್ರದ ಪರಿಸ್ಥಿತಿ ಮತ್ತು ಸವಾಲುಗಳ ಕುರಿತು ಯೋಚಿಸುವುದು ಅಗತ್ಯವಾಗಿದೆ. ಭಾರತದಲ್ಲಿ ಸುಮಾರು 50% ಜನಸಂಖ್ಯೆ ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ. ಆದರೂ ರೈತರು ಎದುರಿಸುತ್ತಿರುವ ಸವಾಲುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹವಾಮಾನ ಬದಲಾವಣೆ ಮತ್ತು ಅಸಮಯ ಮಳೆ, ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ ದೊರಕದಿರುವುದು, ಸಾಲಭಾರ ಮತ್ತು ಸಾಲಮನ್ನಾ ಅವಲಂಬನೆ, ಕೃಷಿ ವೆಚ್ಚ ಹೆಚ್ಚಳ (ಬೀಜ, ಗೊಬ್ಬರ, ಡೀಸೆಲ್), ಮಧ್ಯವರ್ತಿಗಳ ಶೋಷಣೆ, ಕೃಷಿಯಿಂದ ಯುವಕರು ದೂರ ಸಾಗುವಿಕೆ ಮತ್ತು ಹೆಚ್ಚುತ್ತಿರುವ ನಗರೀಕರಣ ಕೃಷಿಯ ದೊಡ್ಡ ಸವಾಲುಗಳಾಗಿವೆ. ಈ ಸಮಸ್ಯೆಗಳು ಕೇವಲ ರೈತರಿಗಷ್ಟೇ ಅಲ್ಲ, ದೇಶದ ಆಹಾರ ಭದ್ರತೆಗೂ ದೊಡ್ಡ ಆತಂಕವಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಸವಾಲುಗಳನ್ನು ಎದುರಿಸಲು ಕ್ಷೀರಕ್ರಾಂತಿ, ಹಸಿರುಕ್ರಾಂತಿ ಹಮ್ಮಿಕೊಂಡು ದೇಶ ಆಹಾರ ಸ್ವಾವಲಂಬಿಯಾಗುವಲ್ಲಿ ದೊಡ್ಡ ಪಾತ್ರ ವಹಿಸಿವೆ. ಆದಾಗ್ಯೂ ಹೆಚ್ಚುತ್ತಿರುವ ಜನಸಂಖ್ಯೆ, ಕಡಿಮೆಯಾಗುತ್ತಿರುವ ಕೃಷಿಭೂಮಿ ಮತ್ತು ಮೇಲೆ ತಿಳಿಸಿದ ಪ್ರಮುಖ ಸವಾಲುಗಳಿಗೆ ಸರಕಾರಗಳು ಉತ್ತರದಾಯಿಗಳಾಗುತ್ತವೆ. ಅವರ ಯೋಜನೆಗಳು ಮತ್ತು ಅವುಗಳ ಜಾರಿಯಲ್ಲಿರುವ ದ್ವಂದ್ವಗಳು ಸರಕಾರಗಳ ಕೃಷಿ ಬದ್ಧತೆಯನ್ನು ಪ್ರಶ್ನೆಗೀಡುಮಾಡುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ ಜಾರಿಗೊಳಿಸಿದ ಹಲವು ಯೋಜನೆಗಳನ್ನು ನೋಡುವುದಾದರೆ, ೧. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ೨. ಬೆಳೆ ವಿಮಾ ಯೋಜನೆ, ೩. ಕನಿಷ್ಠ ಬೆಂಬಲ ಬೆಲೆ (MSP), ೪. ಕೃಷಿ ಯಾಂತ್ರೀಕರಣ ಸಹಾಯ ಪ್ರಮುಖವಾದವು. ಆಯಾ ರಾಜ್ಯಗಳ ಕೃಷಿ, ತೋಟಗಾರಿಕೆ ಮತ್ತು ಕಾರ್ಮಿಕ ಇಲಾಖೆಗಳು ತಮ್ಮದೇ ರೀತಿಯಲ್ಲಿ ಕೃಷಿಕನ ಬೆಂಬಲಕ್ಕೆ ನಿಂತಿವೆ. ಆದರೂ, ಈ ಯೋಜನೆಗಳ ಲಾಭ ಎಲ್ಲಾ ರೈತರಿಗೂ ಸಮಾನವಾಗಿ ತಲುಪುತ್ತಿದೆಯೇ? ಎಂಬ ಪ್ರಶ್ನೆ ಇನ್ನೂ ಜೀವಂತವಾಗಿದೆ. ಯೋಜನೆಗಳ ಜಾರಿಯಲ್ಲಿ ಪಾರದರ್ಶಕತೆ, ಮಾಹಿತಿ ಕೊರತೆ ಮತ್ತು ಸ್ಥಳೀಯ ಸಮಸ್ಯೆಗಳ ನಿರ್ಲಕ್ಷ್ಯ ಅವುಗಳ ಮಹತ್ವವನ್ನು, ಪರಿಣಾಮವನ್ನು ಕಡಿಮೆ ಮಾಡುತ್ತಿವೆ.

ರಾಷ್ಟ್ರೀಯ ರೈತರ ದಿನ ಕೇವಲ ಆಚರಣೆಗಾಗಿ ಸೀಮಿತವಾಗಬಾರದು. ಇದು ಆತ್ಮಾವಲೋಕನದ ದಿನವಾಗಬೇಕು. ರೈತರಿಗೆ ತಾಂತ್ರಿಕ ಜ್ಞಾನ ನೀಡುವ ಕೆಲಸವಾಗಬೇಕು. ಹವಾಮಾನ ವರದಿಯನ್ನು ಸೂಕ್ತ ರೀತಿಯಲ್ಲಿ ಬಳಸುವ ತರಬೇತಿಯಾಗಬೇಕು. ಡಿಜಿಟಲ್ ಮಾರುಕಟ್ಟೆ ಪ್ರವೇಶಿಸಿ ತಮ್ಮ ಉತ್ಪನ್ನಗಳನ್ನು ತಾವೇ ನೇರವಾಗಿ ಮಾರಾಟ ಮಾಡುವಷ್ಟು ಸುಶಿಕ್ಷಿತರೂ ಸ್ವಾವಲಂಬಿಗಳೂ ಆಗುವಂತೆ ನೋಡಿಕೊಳ್ಳಬೇಕಾಗಿದೆ. ಬೆಳೆ ವೈವಿಧ್ಯೀಕರಣ ಮತ್ತು ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಬೇಕಿದೆ. ಯುವ ರೈತರನ್ನು ಪ್ರೋತ್ಸಾಹಿಸುವ ನೀತಿಗಳನ್ನು ರೂಪಿಸಬೇಕಾಗಿದೆ. ಸ್ಥಳೀಯ ಬೆಳೆಗಳಿಗೆ ಬೆಂಬಲ ಬೆಲೆ ಭದ್ರತೆ ಕೊಡಬೇಕಾಗಿದೆ. ರೈತರ ಮಾನಸಿಕ ಆರೋಗ್ಯದ ಮೇಲೆ ಗಮನ ನೀಡಿ, ಆತ್ಮಹತ್ಯೆಗಳಂತಹ ದುರಂತವನ್ನು ನೀಗಿಸಬೇಕಿದೆ.

ರೈತ ಬಲಿಷ್ಠನಾದರೆ ದೇಶ ಬಲಿಷ್ಠವಾಗುತ್ತದೆ. ಆದರೆ ರೈತನ ಜೀವನ ಅಸ್ಥಿರವಾಗಿದ್ದರೆ, ದೇಶದ ಭವಿಷ್ಯವೂ ಅಸ್ಥಿರವಾಗುತ್ತದೆ. ರಾಷ್ಟ್ರೀಯ ರೈತರ ದಿನವು ಕೇವಲ ಶುಭಾಶಯಗಳ ದಿನವಾಗದೇ, ನೀತಿನಿರ್ಣಯಕರಿಗೆ ಹೊಣೆಗಾರಿಕೆಯ ನೆನಪು ಮಾಡಬೇಕಿದೆ. ರೈತನ ಶ್ರಮಕ್ಕೆ ನ್ಯಾಯ, ಕೃಷಿಗೆ ಗೌರವ ಮತ್ತು ಅನ್ನದಾತನಿಗೆ ಭದ್ರತೆ – ಇವುಗಳೇ ಈ ದಿನದ ನಿಜವಾದ ಅರ್ಥ. ಬನ್ನಿ, ರೈತರ ಬಗ್ಗೆ ಮಾತನಾಡೋಣ, ಅವರೊಂದಿಗೆ ನಿಲ್ಲೋಣ, ಕೃಷಿಯ ಭವಿಷ್ಯವನ್ನು ಉಳಿಸೋಣ.

Author

  • ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

By Sheela Bhat

ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

Leave a Reply

Your email address will not be published. Required fields are marked *