ಕಾರವಾರ : ಬಡಗುತಿಟ್ಟು ಯಕ್ಷಗಾನದ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ. ಗುರುವಾರ ಬೆಳಗಿನ ಜಾವ ಬೆಂಗಳೂರಿನ ತಮ್ಮ ಮಗನ ಮನೆಯಲ್ಲಿ ಅವರು ಅಸು ನೀಗಿದರು.

1957ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಸುಬ್ರಹ್ಮಣ್ಯ ಧಾರೇಶ್ವರ ಅವರು ಚಿಕ್ಕವರಿದ್ದಾಗಲೇ ಸಂಗೀತ ಕಲಿತು ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಇದೇ ವೇಳೆ ಎಲೆಕ್ಟ್ರಿಕ್ ಅಂಗಡಿ ಪ್ರಾರಂಭಿಸಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆ ಮಾಡುಕೊಟ್ಟಿದ್ದರು. ಇವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ನಾರಣಪ್ಪ ಉಪ್ಪೂರರು ಕಂಡು ರಂಗಸ್ಥಳಕ್ಕೆ ಕರೆತಂದರು.

ಸುಮಾರು 40 ವರ್ಷಗಳಿಂದ ಯಕ್ಷಗಾನ ಕಲಾ ಸೇವೆ ಮಾಡುತ್ತ ಬಂದವರು ಧಾರೇಶ್ವರರು. ಅವರು ತಮ್ಮ ವೃತ್ತಿ ಮತ್ತು ಪ್ರವೃತ್ತಿಯಿಂದ ನಿವೃತ್ತಿ ಆದವರಲ್ಲ. ರಂಗಸ್ಥಳಕ್ಕೆ ಧಾರೇಶ್ವರರು ಬಂದರು ಎಂಬುದು ಅವರ ಧ್ವನಿಯಿಂದಲೇ ಗೊತ್ತಾಗುತ್ತಿತ್ತು. ಅವರ ಧ್ವನಿಯಲ್ಲಿನ ಮಾದುರ್ಯ ಎಂತವರನ್ನು ಸೆಳೆದುಬಿಡುತ್ತಿತ್ತು.

ಪೆರ್ಡೂರು, ಅಮೃತೇಶ್ವರಿ ಮೇಳ, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು. ಬಡಗು ತಿಟ್ಟಿನ ಜನಪ್ರಿಯ ಮೇಳವಾಗಿರುವ ಪೆರ್ಡೂರು ಮೇಳವೊಂದರಲ್ಲೇ 28 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.

ಅವರೆಂದೂ ಗಿಮಿಕ್ ಗಳ ಹಿಂದೆ ಬಿದ್ದ ಭಾಗವತರಲ್ಲ. ಸಿನಿಮಾ ದಾಟಿಯ ರಾಗದ ಪದವನ್ನು ಹಾಡಲು ಇಷ್ಟಪಟ್ಟವರಲ್ಲ.. ಬಡುಗುತಿಟ್ಟಿನ ಖ್ಯಾತ ನಾಮ ಭಾಗವತರಾದ ನಾರಣಪ್ಪ ಉಪ್ಪೂರರು, ನೆಬ್ಬೂರರು, ಕಾಳಿಂಗ ನಾವುಡರು ಹೀಗೆ ಭಾಗವತಿಗೆಗೆ ಸ್ಟಾರ್ ಮೌಲ್ಯ ತಂದು ಕೊಟ್ಟ ಭಾಗವತರ ಸಾಲಿಗೆ ಸೇರುವ ಯಕ್ಷ ಪ್ರತಿಭೆ ಧಾರೇಶ್ವರರು. ಅವರ ನಿಧನ ಯಕ್ಷ ರಂಗಕ್ಕೆ ಬಹುದೊಡ್ಡ ನಷ್ಟ ಎನ್ನುವುದು ಅತಿಶೋಕ್ತಿ ಅಲ್ಲ.

ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್​ ಸೇರಿದಂತೆ ಹಲವು ಗಣ್ಯರು ಕಂಬನಿ ಮೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್

ಡಿಸಿಎಂ ಡಿ ಕೆ ಶಿವಕುಮಾರ್ ಟ್ವೀಟ್

Leave a Reply

Your email address will not be published. Required fields are marked *