ನವದೆಹಲಿ : ಕಾಂಗ್ರೆಸ್ ನಾಯಕರನ್ನು ಬೆಂಬಲಿಸುವವರ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ನಂತರ, ಕೇವಲ ಪ್ರತಿಪಕ್ಷಗಳ ನಾಯಕರ ಮನೆಗಳ ಮೇಲೆ ದಾಳಿ ಮಾಡಿ ಶೋಧ ನಡೆಸುವುದು ಮತ್ತು ವಶಪಡಿಸಿಕೊಳ್ಳುವುದು ನ್ಯಾಯಸಮ್ಮತವಲ್ಲ. ಇದು ತಜ್ಞರ ಅಭಿಪ್ರಾಯ.

ಚುನಾವಣಾ ವೇಳಾ ಪಟ್ಟಿ ಘೋಷಣೆಯಾದ ಮೇಲೂ ಪ್ರತಿ ಪಕ್ಷಗಳ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ ಸದಸ್ಯ ಮತ್ತು ಟ್ರಸ್ಟಿ ಪ್ರೊಫೆಸರ್ ತ್ರಿಲೋಚನ್ ಶಾಸ್ತ್ರಿ ಅವರು ಈ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಚುನಾವಣೆಯ ಸಮಯದಲ್ಲಿ ಆಯ್ದ ದಾಳಿಗಳು ಮತ್ತು ವಿರೋಧ ಪಕ್ಷದ ವಿರುದ್ಧ ಮಾತ್ರ ದಾಳಿ ನಡೆಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಇದು ವ್ಯವಸ್ಥೆಯಲ್ಲಿ ಚುನಾವಣಾ ಅಧಿಕಾರಿಗಳ ವೈಫಲ್ಯವನ್ನು ಸೂಚಿಸುತ್ತದೆ. ಚುನಾವಣಾ ದಿನಾಂಕ ಘೋಷಣೆಯಾದ ನಂತರ ಮತ್ತು ಎಣಿಕೆ ಮುಗಿಯುವವರೆಗೆ, ಚುನಾವಣಾ ಆಯೋಗವು ನಿಷ್ಪಕ್ಷಪಾತ ಖಚಿತಪಡಿಸಿಕೊಳ್ಳಬೇಕು. ಈ ಕಾರಣಕ್ಕಾಗಿಯೇ ಅವರಿಗೆ ಪೂರ್ಣ ಅಧಿಕಾರವನ್ನು ನೀಡಲಾಗಿದೆ. ಅಕ್ರಮ ಎಸಗಿದ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಹಲವು ಪ್ರಕರಣಗಳು ನಡೆದಿವೆ. ಚುನಾವಣೆ ಸಂದರ್ಭದಲ್ಲಿ ಕೆಲವರನ್ನು ಟಾರ್ಗೆಟ್ ಮಾಡಲಾಗಿದೆ ಎಂಬುದು ಸಾಬೀತಾದರೆ ಅದು ಚುನಾವಣಾ ಆಯೋಗದ ಮೇಲೆ ಮಾತ್ರ ಪ್ರತಿಫಲಿಸುತ್ತದೆ. ಆಯ್ದ ದಾಳಿಗಳು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಮತ್ತು ನ್ಯಾಯಸಮ್ಮತತೆಯನ್ನು ಬಯಸುತ್ತಿರುವ ಮಾಜಿ ಅಧಿಕಾರಗಳ ಸಂಘದ ಸದಸ್ಯ ಎಂ.ಜಿ.ದೇವಸಹಾಯಂ ಅವರು ಕಿಡಿಕಾರಿದ್ದಾರೆ.

“ನಮ್ಮದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮಾಜಿ ಐಎಎಸ್ ಅಧಿಕಾರಿಗಳ ಗುಂಪು. ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಆದರೆ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಆದರ್ಶಗಳಿಗೆ ಬಲವಾಗಿ ಬದ್ಧರಾಗಿದ್ದೇವೆ. ಮಾರ್ಚ್ 11 ರಂದು ಚುನಾವಣಾ ವೀಕ್ಷಕರ ಭಾರತೀಯ ಚುನಾವಣಾ ಆಯೋಗದ ಸಭೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತರು ಎಲ್ಲಾ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ನಿಷ್ಪಕ್ಷಪಾತ ಚುನಾವಣೆ ಖಾತ್ರಿಪಡಿಸುವ, ಬೆದರಿಕೆ ಮತ್ತು ಪ್ರಚೋದನೆಗಳಿಂದ ಮುಕ್ತವಾದ ಮತದಾನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದರು” ಎಂದು ದೇವಸಹಾಯಂ ಹೇಳಿದ್ದಾರೆ.

ಇದು ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಕೇಂದ್ರ ಸರ್ಕಾರದ ಏಜೆನ್ಸಿಗಳಾದ ಐಟಿ, ಇಡಿ ಮತ್ತು ಸಿಬಿಐಗೂ ಅನ್ವಯಿಸುತ್ತದೆ ಎಂದು ನಾವು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *