ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ 9ನೇ ಪಟ್ಟಿ ಬಿಡುಗಡೆ ಮಾಡಿದೆ, ಚಿಕ್ಕಬಳ್ಳಾಪುರದಿಂದ ಎಂ ಆರ್ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ, ಬಳ್ಳಾರಿಯಿಂದ ಇ.ತುಕಾರಾಂ, ಮತ್ತು ಚಾಮರಾಜನಗರದಿಂದ ಸಚಿವ ಮಹದೇವಊಅ ಅವರ ಪುತ್ರ ಸುನೀಲ್‌ ಬೋಸ್‌ ಗೆ ಟಿಕೆಟ್ ನೀಡಲಾಗಿದೆ.

ಶುಕ್ರವಾರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 9ನೇ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು, ಕರ್ನಾಟಕದ ಮೂರು ಹಾಗೂ ರಾಜಸ್ಥಾನದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಲಾಯಿತು. ರಾಜ್ಯದಲ್ಲಿ 24 ಕ್ಷೇತ್ರಗಳಿಗೆ ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಇದೀಗ ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಎಂ.ಆರ್‌.ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯಗೆ ಟಿಕೆಟ್‌ ನೀಡಲು ವಿರೋಧ ವ್ಯಕ್ತವಾಗಿತ್ತು. ಈ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಟಿಕೆಟ್ ಬಯಸಿದ್ದರು. ಆದರೂ, ಅಂತಿಮವಾಗಿ ಪಕ್ಷ ರಕ್ಷಾ ರಾಮಯ್ಯ ಅವರಿಗೆ ಮಣೆ ಹಾಕಲಾಗಿದೆ,. ಇನ್ನು ಚಾಮರಾಜನಗರದಲ್ಲಿ ಪುತ್ರ ಸುನೀಲ್‌ ಬೋಸ್‌ಗೆ ಟಿಕೆಟ್ ಕೊಡಿಸುವಲ್ಲಿ ಸಚಿವ ಎಚ್.ಸಿ ಮಹದೇವಪ್ಪ ಯಶಸ್ವಿಯಾಗಿದ್ದಾರೆ. ಹಾಗೆಯೇ ಬಳ್ಳಾರಿಯಲ್ಲಿ ಆರೇಳು ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದರು. ಟಿಕೆಟ್‌ ರೇಸ್‌ನಲ್ಲಿ ಅಂತಿಮವಾಗಿ ಸಂಡೂರಿನ ನಾಲ್ಕು ಬಾರಿಯ ಶಾಸಕ ಈ.ತುಕಾರಾಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಇನ್ನು ಬಣ ರಾಜಕೀಯದಿಂದ ಭಾರಿ ಸುದ್ದಿಗೆ ಗ್ರಾಸವಾಗಿರುವ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಇನ್ನೂ ಬಾಕಿ. ಕೋಲಾರದಲ್ಲಿ ಕೆ.ಎಚ್.‌ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ.. ಈ ವಿಚಾರದಲ್ಲಿ ಮಾಜಿ ಸಚಿವ ರಮೇಶ್ ಕುಮಾರ್ ಬಣ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ನೀಡಿದರೆ ರಾಜೀನಾಮೆ ನೀಡುವುದಾಗಿ ಕೋಲಾರ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಎಚ್ಚರಿಕೆ ನೀಡಿದ್ದರು.

ಹೀಗಾಗಿ ಈ ಕ್ಷೇತ್ರದ ಟಿಕೆಟ್‌ ಅಂತಿಮ ಮಾಡುವುದು ಹೈಕಮಾಂಡ್‌ಗೆ ತಲೆ ನೋವು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಏನಾಯಿತು ಎಂಬುದು ಗೊತ್ತಿಲ್ಲ. ಆದರೆ , ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದು ಎರಡೂ ಬಣದ ನಾಯಕರು ಹೇಳಿದ್ದು ಮಾತ್ರ ನಿಜ

Leave a Reply

Your email address will not be published. Required fields are marked *