ಬೆಂಗಳೂರು : ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿಯಿಂದಾಗಿಯೇ ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಜೊತೆಗೆ ತಾವು ಬಿಜೆಪಿ ಗೆ ಕೇಳಿದ್ದು ಮೂರು ಸ್ಥಾನಗಳನ್ನು ಮಾತ್ರ ಎಂಬ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ. ಇಂದು ತುರ್ತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ನೆಲ ಕಚ್ಚಿದಾಗ ನೀವು ನನ್ನ ಮನೆ ಬಾಗಿಲಿಗೆ ಬಂದಿರಿ. ಮೈತ್ರಿ ಸರ್ಕಾರ ರಚಿಸುವಂತೆ ಮನವಿ ಮಾಡಿದಿರಿ. ಸರ್ಕಾರ ರಚನೆಯಾದ ಮೇಲೆ ನನಗೆ ಸಾಕಷ್ಟು ತೊಂದರೆ ನೀಡಿದಿರಿ. ನಾನು ವೆಸ್ಟೇಂದ್ ಹೋಟೆಲ್ ನಲ್ಲಿ ಇರುತ್ತೇನೆ ಎಂದು ನನ್ನ ಮೇಲೆ ಆರೋಪ ಮಾಡಿದಿರಿ. ಈಗ ನನ್ನ ಪಕ್ಷದವರನ್ನು ನಿಮ್ಮ ಪಕ್ಷಕ್ಕೆ ಕರೆಯುತ್ತಿದ್ದೀರಿ ಎಂದು ಅವರು ಆರೋಪ ಮಾಡಿದರು,
ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವಾಗ ನಿಮ್ಮನ್ನು ಗೌರವದಿಂದ ನಡೆಸಿಕೊಳ್ಳುವುದಾಗಿ ಅಮಿತ್ ಷಾ ಹೇಳಿದ್ದರು. ಆಗ ನಾವು ಕೇಳಿದ್ದು ಮೂರು ಸ್ಥಾನಗಳನ್ನು ಮಾತ್ರ. ಈ ಬಗ್ಗೆ ನಿನ್ನೆ ನಾವು ಚರ್ಚೆ ಮಾಡಿದೆವು. ಆ ವಿವರಗಳನ್ನು ನಾವು ನೀಡಿದೆವು. ಹಾಗಂತ ನಮ್ಮ ನಡುವೆ ವಿಶ್ವಾಸ ಕಡಿಮೆ ಆಗಿಲ್ಲ ಎಂದು ಅವರು ಸಮರ್ಥಿಸಿಕೊಂಡರು
