ಹಸಿವು ಮತ್ತು ಅವಮಾನದ ನಡುವೆ ಎದ್ದು ಬಂದ ವಿಷಕಂಠ, ಭಾರತದ ಸೆಕ್ಯುಲರ್ ರಾಜಕಾರಣಕ್ಕೆ ಜಯ ತಂದಿತ್ತ ದಳಪತಿ

ತಮಿಳುನಾಡಿನ ರಾಜಕಾರಣದಲ್ಲಿ ದಳಪತಿ ವಿಜಯ್ ಎಂಟ್ರಿ ಹೇಗೆ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ರಾಜಕೀಯ ಸಮೀಕರಣವನ್ನು ಬದಲಿಸಿತು? ವಿಜಯ್ ಅವರ ಬದುಕು, ರಾಜಕೀಯ ಚಿಂತನೆ ಮತ್ತು ಭವಿಷ್ಯದ ಪ್ರಭಾವದ ವಿಶ್ಲೇಷಣೆ.

ಪ್ರಾಯಶಃ ಕೆಲವೇ ಕೆಲವು ತಿಂಗಳುಗಳ ಹಿಂದೆ ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ತಮಿಳು ನಾಡಿನ ರಾಜಕಾರಣವನ್ನು ೬೦ ರ ದಶಕದಿಂದಲೇ ನಿಯಂತ್ರಿಸುತ್ತ ಬಂದ ದ್ರಾವಿಡ ಪಕ್ಷಗಳು. ನಾವಿಲ್ಲದಿದ್ದರೆ ನೀವು, ನೀವು ಇಲ್ಲದಿದ್ದರೆ ನಾವು ಎಂದುಕೊಂಡೇ ರಾಜಕಾರಣ ಮಾಡುತ್ತ ಬಂದವರು. ಡಿಎಮ್ ಕೆ ಮತ್ತು ಅಣ್ಣಾ ಡಿಎಮ್ ಕೆ. ಕರುಣಾನಿಧಿ ಮತ್ತು ಎಂ ಜಿ ಆರ್ ನಂತರ ಜಯಲಲಿತಾ, ಸುಮಾರು ಆರ್ ದಶಕಗಳ ಕಾಲ ಇವರದೇ ಹಾವು ಏಣಿ ಆಟ..


ಎಮ್ ಜಿ ಆರ್ ಜಯಲಲಿತ ಯುಗ ಮುಗಿಯಿತು, ಕರುಣಾನಿಧಿ ಅಸು ನೀಗಿದರು. ಆಗಲೂ ತಮಿಳು ನಾಡಿನ ರಾಜಕಾರಣದಲ್ಲಿ ಇನ್ನೊಂದು ಕ್ರಾಂತಿಯಾಗಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅಣ್ಣಾ ಡಿ ಎಮ್ ಕೆ ಆಂತರಿಕ ಬೆಳವಣಿಗೆಯಿಂದ ಹೈರಾಣಾಗಿದ್ದರೂ ಅಸ್ಥಿತ್ವ ಕಳೆದುಕೊಳ್ಳುವ ಸ್ಥಿತಿ ತಲುಪಿರಲಿಲ್ಲ. ಜಯಲಲಿತಾ ತಮಿಳು ನಾಡಿನ ಜನರ ಮನಸ್ಸಿನಿಂದ ಮರೆಯಾಗಿರಲಿಲ್ಲ. ಇನ್ನೊಂದೆಡೆ ಸ್ಟಾಲಿನ್. ತಂದೆ ಕರುಣಾನಿಧಿ ಅವರ ರಾಜಕಾರಣದ ದೋಣಿಗೆ ಹುಟ್ಟು ಹಾಕುತ್ತ ಮುನ್ನಡೆದಿದ್ದರು. ತಮ್ಮ ನಂತರ ಅಧಿಕಾರದ ಚುಕ್ಕಾ ಣಿ ಹಿಡಿಯುವುದಕ್ಕಾಗಿ ಮಗ ಉದಯ ನಿಧಿ ಸ್ಟಾಲಿನ್ ಆವರನ್ನು ಸಿದ್ದಗೊಳಿಸಿ ಆಖಾಡಕ್ಕೆ ಇಳಿಸಿಬಿಟ್ಟಿದ್ದರು.


ಎಲ್ಲ ಸರಿಯಾಗಿದ್ದರೆ ಇವರ ರಾಜಕಾರಣ ಹಾಗೆ ಮುಂದುವರಿಯುತ್ತಿತ್ತೋನೋ ? ಆದರೆ ತಮಿಳು ನಾಡಿನ ಜನ ಹೊಸ ರಾಜಾಕಾರಣಕ್ಕಾಗಿ ಹಾತೊರೆಯತೊಡಗಿದ್ದರು, ಅವರಿಗೆ ಏನೋ ಬೇಕಾಗಿತ್ತು ಅದು ಈ ದ್ರಾವಿಡ ಪಕ್ಷಗಳ ಅರಿವಿಗೆ ಬರಲೇ ಇಲ್ಲ.
ಆಗ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಜೋಸೆಫ್ ವಿಜಯ್ ತಮ್ಮ ಮನಸ್ಸಿನಲ್ಲಿ ಕನಸೊಂದನ್ನು ನೀರು ಹಾಕಿ ಬೆಳೆಸುತ್ತಿದ್ದರು. ಅವರ ತಂದೆ ಚಂದ್ರಶೇಖರ್ ಮಗನನ್ನು ಉನ್ನಾತ ಸ್ಥಾನದಲ್ಲಿ ನೋಡುವ ಬಯಕೆಯನ್ನು ಸಾಕುತ್ತಿದ್ದರಲ್ಲ ?
ಯಾವುದೇ ಕ್ರಾಂತಿ ಅಥವಾ ಬದಲಾವಣೆ ಒಮ್ಮೆಲೆ ಸಂಭವಿಸುವುದಿಲ್ಲ. ಅದರ ಬೀಜ ಎಲ್ಲಿಯೊ ಮೊಳಕೆ ಒಡೆದಿರುತ್ತದೆ. ಅದನ್ನು ಯಾರೋ ಸಾಕುತ್ತಿರುತ್ತಾರೆ. ಅದು ಯಾವಾಗಲೋ ಹೆಮ್ಮರವಾಗಿ ಫಸಲು ನೀಡಲು ಪ್ರಾರಂಭಿಸಿ ಬಿಡುತ್ತದೆ,


ಹೀಗೆ ಕ್ರಾಂತಿ ಅಥವಾ ಬದಲಾವಣೆಯ ಬೀಜ ಯಾವಾಗಲೋ ಮೊಳಕೆ ಒಡೆದು ಬಿಟ್ಟಿತ್ತು, ಇದಕ್ಕೆ ಕಾರಣ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಅವರೇ..
ವಿಜಯ ಸಮಾಜದಲ್ಲಿ ತುಳಿತ ಸಮುದಾಯದಿಂದ ಬಂದವರು. ಕ್ರಿಶ್ಚಿಯನ್ ಧರ್ಮವನ್ನು ನಂಬಿ ಒಪ್ಪಿಕೊಂಡವರು.ಅಪ್ಪಿಕೊಂಡವರು. ಅವರ ಬದುಕು ಹಾಗೇ ಇತ್ತು. ಅಪ್ಪ ಸಾಮಾನ್ಯ್ ಚಿತ್ರದ ಸಹಾಯಕ ನಿರ್ದೇಶಕ. ಮಗನನ್ನು ಬಾಲ ನಟನಾಗಿ ಪರಿಚಯಿಸಿದರೂ ಯಶಸ್ಸು ಸುಲಭವಾಗಿ ದಕ್ಕಿರಲಿಲ್ಲ. ಬಡತನ ಮತ್ತು ಹಸಿವು ವಿಜಯ್ ಗೆ ಗೊತ್ತಿತ್ತು,
ತಮಿಳು ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಮಾಡಿದ ಮೊದಲ ಭಾಷಣದಲ್ಲಿ ಹೇಳಿದ್ದು ಅದೇ. ನನಗೆ ಹಸಿವು ಮತ್ತು ಬಡತನ ಗೊತ್ತಿದೆ.. ಹಸಿವು ಮತ್ತು ಬಡತನದ ಅನುಭವ ಇರುವವರು ಮಾತ್ರ ಅದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ.


ನನಗೆ ವಿಜಯ ಅವರನ್ನು ನೋಡಿದಾಗ ಡಾ. ರಾಜಕುಮಾರ್ ನೆನಪಾಗುತ್ತಾರೆ. ರಾಜಕುಮಾರ್ ಅವರಂತೆ ಸರಳವಾಗಿ ಬದುಕುತ್ತಿರುವವರು ವಿಜಯ್. ಸದಾ ಬಿಳಿಯ ಅಂಗಿ ಅಥವಾ ಟೀ ಶರ್ಟ್ ನಲ್ಲಿ ಕಾಣುವ ಅವರು ತಮ್ಮ ಆಲೋಚನೆಯಲ್ಲೂ ಸರಳತೆಯನ್ನು ರೂಡಿಸಿಕೊಂದಿದ್ದು ಮಹತ್ವದ್ದೇ. ಡಾ ರಾಜ್ ಕುಮಾರ್ ಮತ್ತು ವಿಜಯ್ ಅವರನ್ನು ಹೋಲಿಸಿ ಮಾತನಾಡುವುದಕ್ಕೆ ಇನ್ನೂ ಕೆಲವು ಮಹತ್ವ ವಿಚಾರಗಳಿವೆ. ಅಂದರೆ ಅದು ಇಬ್ಬರ ನಡುವಿನ ಸಾಮ್ಯತೆಗೆ ಸಂಬಂಧಿಸಿದ್ದು.


ಡಾ. ರಾಜ್ ಜಾತಿಯ ಕಾರಣಕ್ಕೆ ಮೇಲ್ಜಾತಿಯವರ ಪಿತೂರಿಗೆ ಬಲಿಯಾಗಿದ್ದರು. ಅದನ್ನು ಅವರು ಎದುರಿಸಿದ ರೀತಿ ಸಾಮಾನ್ಯವಾದುದಲ್ಲ. ಅವರ ತಮ್ಮ ಪ್ರತಿಭೆ ಮತ್ತು ನಟನಾ ಶಕ್ತಿಯ ಮೂಲಕ ಉತ್ತರ ನೀಡಿದ್ದರು.ವಿಜಯ್ ಕೂಡ ಹಾಗೆ. ಸಮಾಜ ತುಳಿತಕ್ಕೆ ಒಳಗಾದ ದಲಿತ ಸಮುದಾಯದಿಂದ ಬಂದ ಅವರು ಕ್ರಿಶ್ಚಿಯನ್ ಆಗಿ ಎದುರಿಸಿದ ಸ್ಥಿತಿ ಡಾ. ರಾಜ್ ಅವರು ಎದುರಿಸಿದ ಸ್ಥಿತಿಗಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ಎಲ್ಲ ನೋವು ಮತ್ತು ಅವಮಾನವನ್ನು ತಮ್ಮ ಮನಸ್ಸಿನಲ್ಲೇ ಇಟ್ಟುಕೊಂಡ ಅವರು ವಿಷಕಂಠ. ವಿಷ ಗಂಟಲಿನಿಂದ ಕೆಳಕ್ಕೆ ಇಳಿಯಲು ಬಿಡಲಿಲ್ಲ. ತಮ್ಮೊಳಗಿನ ಭಾವನಾ ಪ್ರವಾಹವನ್ನು ಗೆಲುವಿನ ಶಕ್ತಿಯಾಗಿ ಅವರು ಬದಲಿಸಿಕೊಂಡರು. ಅವರು ತಮ್ಮ ನಟನೆಯಲ್ಲೂ ಒವರ್ ಯಾಕ್ಟಿಂಗ್ ಮಾಡಲಿಲ್ಲ. ಬದುಕಿನಲ್ಲೂ ಮಿತಿ ಮೀರಿದ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಒಳಗೆ ಜ್ವಾಲಾಮುಖಿ. ಹೊರಗೆ ಶಾಂತ ಸಾಗರ.


ಪ್ರಾಯಶಃ ಶೋಷಿತ ಸಮುದಾಯದಿಂದ ಬಂದ ಅವರಿಗೆ ತಮ್ಮ ಬದುಕಿನ ನಂಬಿಕೆ ಮತ್ತು ತಾತ್ವಿಕತೆಯನ್ನು ಆಯ್ಕೆ ಮಾಡುವುದು ಕಷ್ಟವಾಗಲಿಲ್ಲ. ದ್ರಾವಿಡ ಚಳವಳಿಯ ನಾಡಿನಲ್ಲಿ ಹುಟ್ಟಿದ ಅವರು ಪೆರಿಯಾರ್ ರತ್ತ ಆಕರ್ಷಿತರಾದರು. ಅಂಬೇಡ್ಕರ್ ವಿಜಯ್ ಮೇಲೆ ಮೀರಿದ ಪ್ರಭಾವ ಅಕ್ಷರಗಳನ್ನು ಮೀರಿದ್ದು.


೨೦೨೦ ರ ನಂತರ ವಿಜಯ್ ಅವರ ಬದುಕು ಇನ್ನೊಂದು ಮಗ್ಗಲಿಗೆ ಹೊರಳಿಕೊಳ್ಳಲು ಪ್ರಾರಂಭಿಸಿತ್ತು. ಅವರು ತಮ್ಮ ಅಭಿಮಾನಿ ಸಂಘಗಳ ಮೂಲಕ ಮೂಲಕ ರಾಜಕೀಯ ಅಗ್ನಿ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಂಡು ಬಿಟ್ಟರು. ಸ್ಥಳೀಯ ಸಂಸ್ಥೆಗಳ ಚುನಾವಣೆ. ನಿರೀಕ್ಷೆ ಮೀರಿದ ಜಯ. ಆಗಲೇ ವಿಜಯ್ ರಾಜಕೀಯ ಪಕ್ಷವನ್ನು ಸ್ಥಾಪಿಸಿ ವಿಧಾನ ಸಭೆಯ ಮೆಟ್ಟಿಲು ಏರಿ ಮುಖ್ಯಮಂತ್ರಿ ಗದ್ದುಗೆ ಏರುವ ತೀರ್ಮಾನಕ್ಕೆ ಬಂದು ಬಿಟ್ಟರು. ಆಗಲೂ ಅವರಲ್ಲಿ ಇದ್ದುದ್ದು ಆತ್ಮವಿಶ್ವಾಸ. ಅವರ ತಂದೆ ಹೇಳುವಂತೆ ವಿಜಯ್ ಅವರ ಆತ್ಮ ವಿಶ್ವಾಸ ಅಚ್ಚರಿಗೆ ಕಾರಣವಾಗಿತ್ತು. ಅವರು ಮಾತನಾಡುವಾಗ ವ್ಯಕ್ತಪಡಿಸುತ್ತಿದ್ದ ಆತ್ಮವಿಶ್ವಾಸ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಎಂದೂ ಕಡಿಮೆ ಆಗಲಿಲ್ಲ.


ಅವರು ರಾಜಕೀಯದ ಕನಸು ಮಾಗುವ ಹೊತ್ತಿಗೆ ಕೇಂದ್ರ ಸರ್ಕಾರ ಅವರ ಬೆನ್ನಿಗೆ ಬಿದ್ದಿತ್ತು. ಕೇಂದ್ರೀಯ ತನಿಖಾ ಸಂಸ್ಥೆಗಳು ವಿಜಯ್ ಅವರ ಆತ್ಮವಿಶ್ವಾಸವನ್ನು ಕುಂದಿಸುವುದಕ್ಕಾಗಿ ಹಲವು ಬಾರಿ ದಾಳಿ ನಡೆಸಿದವು. ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ಬಿಜೆಪಿ ಯತ್ನ ನಡೆಸಿತು. ಆದರೆ ವಿಜಯ ಅವರ ನಿರ್ಧಾರ ಬದಲಾಗಲಿಲ್ಲ.
ಅವರು ಹೇಳಿದ್ದು ಬಿಜೆಪಿ ನನ್ನ ಸೈದ್ಧಾಂತಿಕ ವಿರೋಧಿ. ಡಿ ಎಮ್ ಕೆ ರಾಜಕೀಯ ವಿರೋಧಿ. ಅವರ ತಮ್ಮ ಸೈದ್ಧಾಂತಿಕ ನಿಲುವನ್ನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮಾಡಿದ ಮೊದಲ ಭಾಷಣದಲ್ಲೇ ಸ್ಪಷ್ಟಪಡಿಸಿದರು. ನಾನು ಸದಾ ಅಲ್ಪ ಸಂಖ್ಯಾತರ ಪರವಾಗಿ ಇರುತ್ತೇನೆ.


ವಿಜಯ್ ಅವರ ಈ ವಿಜಯದ ಪರಿಣಾಮ ತಮಿಳುನಾಡು ಮತ್ತು ರಾಷ್ಟ್ರೀಯ ರಾಜಕಾರಣದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಡಿ ಎಂ ಕೆ ಮತ್ತು ಅಣ್ಣಾ ಡಿ ಎಂ ಕೆ ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುವ ಭಯದಲ್ಲಿವೆ. ಹೀಗಾಗಿ ಎರಡೂ ಪಕ್ಷಗಳು ತಮ್ಮ ವೈರತ್ವವನ್ನು ಮರೆತು ಒಂದಾಗುವ ಕುರಿತು ಚರ್ಚೆ ನಡೆಸುತ್ತಿವೆ.
ಇನ್ನೂ ಕಾಂಗ್ರೆಸ್ ಪಕ್ಷ ದಕ್ಷಿಣ ಭಾರತವನ್ನು ಆವರಿಸಿಕೊಳ್ಳುತ್ತಿರುವುದು ಬಿಜೆಪಿಗೆ ಶುಭ ಸೂಚನೆ ಇಲ್ಲ. ಈ ಕಾರಣಕ್ಕೆ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದರು. ಡಿ ಎಂಕೆಯ ಬಗ್ಗೆ ಅಪಾರ ಪ್ರೀತಿಯನ್ನು ತೋರಿಸಿದರು. ಕಾಂಗ್ರೆಸ್ ಡಿ ಎಂ ಕೆ ಮೋಸ ಮಾಡಿದೆ ಎಂದು ಹೇಳುವ ಮೂಲಕ ದ್ರಾವಿಡ ಪಕ್ಷಗಳ ಸಿಂಪತಿ ಪಡೆಯಲು ಯತ್ನಿಸಿದರು.
ಪ್ರಮಾಣ ವಚನ ಸ್ವೀಕಾರದ ನಂತರ ವಿಜಯ್ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ನತೆ ಸಲ್ಲಿಸಿದರು. ರಾಹುಲ್ ಗಾಂಧಿ ಅವರನ್ನು ತಮ್ಮ ಸ್ನೇಹಿತ ಎಂದು ಕರೆದರು. ಈ ಸ್ನೇಹ ಯಶಸ್ವಿಯಾಗಲು ಇನ್ನೂ ಸಮಯ ಬೇಕು. ಜೊತೆಗೆ ಇದು ಅಷ್ಟು ಸುಲಭವಲ್ಲ. ಆದರೆ ಅವರ ಮುಂದಿನ ಸವಾಲುಗಳ ಬಗ್ಗೆ ಮಾತನಾಡಲು ಇದು ಸಮಯ ಅಲ್ಲ.


ದಳಪತಿ ವಿಜಯ್ ಯು ಡಿಡ್ ಇಟ್, ಕಾಂಗ್ರಾಜ್ಯುಲೇಷನ್..!

Author

  • ಶಶಿಧರ್ ಭಟ್ ಸುದ್ದಿಟಿವಿಯ ಮುಖ್ಯ ಸಂಪಾದಕರು. ೪ ದಶಕಗಳ ಮಾಧ್ಯಮ ಅನುಭವವಿರುವ ಕನ್ನಡದ ಹಿರಿಯ ಪತ್ರಕರ್ತ. ಇವರು ತಮ್ಮ ರಾಜಕೀಯ ವರದಿಗಾರಿಕೆಯಿಂದ ಮಾಧ್ಯಮದಲ್ಲಿ ಕಾಲಿಟ್ಟು ತಮ್ಮದೇ ಛಾಪು ಮೂಡಿಸಿದವರು. ಪ್ರಸ್ತುತ ರಾಜಕೀಯ ವಿಶ್ಲೇಷಣಾಕಾರರು. ನಿಸ್ಪೃಹ, ನಿರ್ಭೀತ ಮತ್ತು ಪ್ರಾಮಾಣಿಕ ಪತ್ರಿಕೋದ್ಯಮದಿಂದ ಜನಮಾನಸದಲ್ಲಿ ಮನೆಮಾತಾದವರು.

error: