ತ್ರಿಷಾ ಸಿಎಂ ಆಗುತ್ತಾರೆಯೇ? ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ

ಚೆನ್ನೈ: ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ನಡುವೆಯೇ ನಟಿ ತ್ರಿಷಾ ಕುರಿತ ಹೊಸ ಚರ್ಚೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ದಿವಂಗತ ಮುಖ್ಯಮಂತ್ರಿ ಹಾಗೂ ನಟಿ ಜಯಲಲಿತಾ ಮತ್ತು ತ್ರಿಷಾ ನಡುವಿನ ಸಾಮ್ಯತೆಗಳನ್ನು ಹೋಲಿಸಿ ಪೋಸ್ಟರ್‌ಗಳು ಹರಿದಾಡುತ್ತಿದ್ದು, “ತ್ರಿಷಾ ಮುಂದಿನ ಸಿಎಂ ಆಗಬಹುದೇ?” ಎನ್ನುವ ಪ್ರಶ್ನೆಗಳು ಅಭಿಮಾನಿಗಳ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

ಹತ್ತು ವರ್ಷಗಳ ಹಿಂದೆ ನಡೆದ ಒಂದು ಹಾಸ್ಯಭರಿತ ಚಿಟ್‌ಚಾಟ್‌ನಲ್ಲಿ ತ್ರಿಷಾ “ನಾನು ಸಿಎಂ ಆಗಬೇಕು” ಎಂದು ನಗುತಾ ಹೇಳಿದ್ದ ವಿಡಿಯೊ ಈಗ ಮತ್ತೆ ವೈರಲ್ ಆಗುತ್ತಿದೆ. “ನಿಜವೇ?” ಎಂದು ಕೇಳಿದಾಗ, “ಮೊದಲು ನೀವು ಓಟು ಹಾಕಿ ನಾನು ಗೆದ್ದಾಗ ಹೇಳುತ್ತೇನೆ” ಎಂದು ತಮಾಷೆಯಾಗಿ ಉತ್ತರಿಸಿದ್ದ ತ್ರಿಷಾ ಮಾತುಗಳನ್ನು ಈಗ ಕೆಲವರು ರಾಜಕೀಯ ಭವಿಷ್ಯದ ಸೂಚನೆಯಂತೆ ವ್ಯಾಖ್ಯಾನಿಸುತ್ತಿದ್ದಾರೆ.

ಇದೇ ವೇಳೆ ತನ್ನ ಹುಟ್ಟುಹಬ್ಬದ ದಿನದಂದೇ ಚುನಾವಣಾ ಫಲಿತಾಂಶ ಅದ್ದೂರಿಯಾಗಿ ಬಂದಾಗ, ತಿರುಪತಿಗೆ ತೆರಳಿದ್ದ ತ್ರಿಶಾ ಕೂಡಲೇ ಮರಳಿ ಬಂದು ನೇರವಾಗಿ ವಿಜಯ್ ಭೇಟಿಯಾಗಿದ್ದು ಗಮನ ಸೆಳೆಯಿತು. ವಿಜಯ್ ರಾಜಕೀಯ ಪಯಣದಲ್ಲಿ ತ್ರಿಶಾ ಸಲಹೆ-ಸೂಚನೆಗಳೂ ಇವೆ ಎನ್ನಲಾಗುತ್ತಿದೆ. ಆದ್ದರಿಂದ ನಟ ವಿಜಯ್ ಮುಖ್ಯಮಂತ್ರಿ ಆಗುತ್ತಿರುವ ಹಿನ್ನೆಲೆ, ಅವರ ಆಪ್ತ ವಲಯದಲ್ಲಿರುವ ತ್ರಿಷಾ ಕೂಡ ರಾಜಕೀಯವಾಗಿ ದೊಡ್ಡ ಸ್ಥಾನಕ್ಕೇರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ ವಾಸ್ತವ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ, ತ್ರಿಷಾ ತಕ್ಷಣವೇ ಮುಖ್ಯಮಂತ್ರಿ ಆಗುವ ಸಾಧ್ಯತೆಗಳು ಕಾಣುತ್ತಿಲ್ಲ.

ಒಬ್ಬ ಮಹಿಳೆ ಮುಖ್ಯಮಂತ್ರಿ ಆಗಬೇಕಾದರೆ, ಆಕೆ ಮೊದಲು ಸಕ್ರಿಯ ರಾಜಕಾರಣದಲ್ಲಿ ಇರಬೇಕು ಅಥವಾ ಅಧಿಕಾರದಲ್ಲಿರುವ ನಾಯಕರೊಂದಿಗೆ ಅಧಿಕೃತ ರಾಜಕೀಯ ಅಥವಾ ಸಾಮಾಜಿಕ ಸಂಬಂಧ ಹೊಂದಿರಬೇಕು. ಸದ್ಯ ಈ ಎರಡೂ ಮಾನದಂಡಗಳಲ್ಲಿ ತ್ರಿಷಾ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಈಗಿನ ಪರಿಸ್ಥಿತಿಯಲ್ಲಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನೋಡುವುದು ಕೇವಲ ಊಹಾಪೋಹಗಳ ಮಟ್ಟದಲ್ಲೇ ಇದೆ.

ಜಯಲಲಿತಾ ಮತ್ತು ತ್ರಿಷಾ ನಡುವಿನ ಕೆಲ ಸಾಮ್ಯತೆಗಳನ್ನು ಅಭಿಮಾನಿಗಳು ಉಲ್ಲೇಖಿಸುತ್ತಿದ್ದಾರೆ. ಇಬ್ಬರೂ ಒಂದೇ ಶಾಲೆಯಲ್ಲಿ ಓದಿರುವುದು, ಬ್ರಾಹ್ಮಣ ಸಮುದಾಯದ ಹಿನ್ನೆಲೆ, ಜಯಲಲಿತಾ ಅವರಿಗೆ ಎಂಜಿಆರ್ ಜೊತೆಯಿದ್ದ ಆತ್ಮೀಯತೆ ಮತ್ತು ತ್ರಿಷಾಗೆ ವಿಜಯ್ ಜೊತೆಗೆ ಇರುವ ಸ್ನೇಹ ಇತ್ಯಾದಿ ವಿಚಾರಗಳನ್ನು ಹೋಲಿಸಲಾಗುತ್ತಿದೆ. ಜಯಲಲಿತಾರನ್ನು “ಅಮ್ಮ” ಎಂದು ಕರೆಯಲಾಗುತ್ತಿತ್ತು, ತ್ರಿಷಾರನ್ನು ಕೆಲವರು “ಮಾಮಿ” ಎಂದು ಕರೆಯುತ್ತಾರೆ ಎಂಬ ಸಾಮಾಜಿಕ ಜಾಲತಾಣದ ಮಾತುಕತೆಗಳೂ ವೈರಲ್ ಆಗಿವೆ.

ಆದರೆ ಇಂತಹ ಹೋಲಿಕೆಗಳು ರಾಜಕೀಯ ಯಶಸ್ಸಿಗೆ ಖಾತರಿ ನೀಡುವುದಿಲ್ಲ. ಜಯಲಲಿತಾ ಅವರ ರಾಜಕೀಯ ಪಯಣ ಬಹಳ ಕಠಿಣ ಮತ್ತು ದೀರ್ಘವಾಗಿತ್ತು. ನಟಿಯಾಗಿ ಜನಪ್ರಿಯತೆ ಪಡೆದಿದ್ದರೂ, ರಾಜಕೀಯದಲ್ಲಿ ಅವರು ತಮ್ಮದೇ ಆದ ಪ್ರಭಾವ ನಿರ್ಮಿಸಲು ಅನೇಕ ಸವಾಲುಗಳನ್ನು ಎದುರಿಸಿದ್ದರು.

ಇದೀಗ ಮತ್ತೊಂದು ರಾಜಕೀಯ ವದಂತಿಯೂ ಹರಿದಾಡುತ್ತಿದೆ. ನಟ ವಿಜಯ್ ತಾವು ಗೆದ್ದ ಎರಡು ಕ್ಷೇತ್ರಗಳಲ್ಲಿ ಪೆರಂಬೂರು ಉಳಿಸಿಕೊಂಡು ತಿರುಚ್ಚಿ ಬಿಟ್ಟುಕೊಟ್ಟಿದ್ದಾರೆ. ಆ ಕ್ಷೇತ್ರದಿಂದ ತ್ರಿಷಾ ಸ್ಪರ್ಧಿಸಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗೇನಾದರೂ ನಡೆದರೆ, ಅದು ತ್ರಿಷಾ ಅವರ ಅಧಿಕೃತ ರಾಜಕೀಯ ಪ್ರವೇಶವಾಗಬಹುದು.

ಅಲ್ಲಿಂದ ಅವರ ರಾಜಕೀಯ ಪಯಣ ಆರಂಭವಾಗಿ ಭವಿಷ್ಯದಲ್ಲಿ ದೊಡ್ಡ ಹುದ್ದೆಗಳತ್ತ ಸಾಗಿದರೂ ಅಚ್ಚರಿಯಿಲ್ಲ. ಆದರೆ ಸದ್ಯಕ್ಕೆ ತ್ರಿಷಾ ಮುಖ್ಯಮಂತ್ರಿ ಆಗುವ ಸಾಧ್ಯತೆಗಳಿಗಿಂತ, ಸಾಮಾಜಿಕ ಜಾಲತಾಣದ ಚರ್ಚೆಗಳೇ ಹೆಚ್ಚು ಗಮನ ಸೆಳೆಯುತ್ತಿವೆ.

Author

  • ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.