ಬೆಂಗಳೂರು, ಮೇ.೨೮, ೨೦೨೬ : ಸಿದ್ಧರಾಮಯ್ಯ ಕರ್ನಾಟಕದ ಪ್ರಶ್ನಾತೀತ ನಾಯಕ. ಅವರು ಕೇವಲ ಕಾಂಗ್ರೆಸ್ ಪಕ್ಷದ ಮುಖವಲ್ಲ, ರಾಜ್ಯದ ಬಹುಸಂಖ್ಯಾತ ಅಹಿಂದ ವರ್ಗದ ರಾಜಕೀಯ ಪ್ರತಿನಿಧಿತ್ವದ ಸಂಕೇತ. ೨೦೨೩ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದಾಗ ಒಂದು ರಾಜಕೀಯ ಒಪ್ಪಂದದ ಮಾತು ಕೇಳಿಬಂದಿತ್ತು — ಚುನಾವಣೆಗೆ ಹಣಕಾಸು, ಸಂಘಟನೆ ಮತ್ತು ತಂತ್ರದ ಶಕ್ತಿ ತುಂಬಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಅರ್ಧಾವಧಿಯ ನಂತರ ಮುಖ್ಯಮಂತ್ರಿಯ ಸ್ಥಾನ ಬಿಟ್ಟುಕೊಡುವ ಭರವಸೆ.
ಇಂದು ಆ ಮಾತಿಗೆ ಬದ್ಧರಾಗಿ ಸಿದ್ಧರಾಮಯ್ಯ ರಾಜೀನಾಮೆ ನೀಡಿರುವುದು ಕರ್ನಾಟಕದ ಅಧಿಕಾರ ರಾಜಕಾರಣದಲ್ಲಿ ಅಪರೂಪದ ಘನತೆಯ ಸಂಕೇತವಾಗಿ ಕಾಣುತ್ತದೆ. ರಾಜಕಾರಣಿಯೊಬ್ಬನು ಕೇವಲ ಜನಪ್ರತಿನಿಧಿಯಲ್ಲ; ಆತ ತನ್ನ ಹಿಂಬಾಲಕರಿಗೆ ಆದರ್ಶವನ್ನೂ ರೂಪಿಸುತ್ತಾನೆ. ಆ ಆದರ್ಶಗಳು ಮುಂದಿನ ಪೀಳಿಗೆಗೆ ದಿಕ್ಕು ತೋರಿಸುತ್ತವೆ. ಈಗ ಅವರು ಕೊಟ್ಟ ಮಾತು ಉಳಿಸಿಕೊಳ್ಳುವ ಬದ್ಧತೆಯನ್ನು ತೋರಿಸಿದ್ದಾರೆ. ಇದು ಅವರ ಅನುಭವ, ವಯಸ್ಸು ಮತ್ತು ರಾಜಕೀಯ ಮುತ್ಸದ್ದಿತನ ಮಾಗಿದ ಸಂಕೇತ.
ಹೀಗಾಗಿ ಕರ್ನಾಟಕಕ್ಕೆ ಒಬ್ಬ ಆರ್ಥಿಕ ಅರಿವಿನ, ಜಾತ್ಯಾತೀತ ಚಿಂತನೆಯ ನಾಯಕತ್ವ ಕಳೆದುಹೋಗುತ್ತಿದೆ ಎಂಬ ನೋವಿಗಿಂತ, ಒಂದು ಬದ್ಧತೆಯ ರಾಜಕಾರಣ ಉದಯಿಸುತ್ತಿದೆ ಎಂದು ನೋಡಬಹುದು. ಅಧಿಕಾರವನ್ನು ಗೌರವಯುತವಾಗಿ ಬಿಟ್ಟುಕೊಡುವುದು ಸುಲಭವಲ್ಲ. ಆದರೆ ಅದನ್ನು ಮಾಡುವ ನಾಯಕನ ವ್ಯಕ್ತಿತ್ವ ಜನಮಾನಸದಲ್ಲಿ ದೀರ್ಘಕಾಲ ಉಳಿಯುತ್ತದೆ.
ಈಗ ಪರೀಕ್ಷೆ ಡಿ.ಕೆ. ಶಿವಕುಮಾರ್ ಅವರದ್ದು.
ಡಿಕೆಶಿ ಸಂಘಟನೆ, ಹಣಕಾಸು, ಹೋರಾಟ ಮತ್ತು ನಿರಂತರತೆಯ ರಾಜಕಾರಣಕ್ಕೆ ಹೆಸರುವಾಸಿ. ತಮ್ಮ ಪಕ್ಷದ ಬಗ್ಗೆ ಇರುವ ನಿಷ್ಠೆಗೂ ಮೆಚ್ಚುಗೆಯಿದ್ದಾರೆ. ಅವರು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುವ ಗುಣದ ನಾಯಕ.
ಸಿದ್ಧರಾಮಯ್ಯ ಮತ್ತು ಡಿಕೆಶಿ ಇಬ್ಬರಲ್ಲೂ ಮಹತ್ವಾಕಾಂಕ್ಷೆ ಇದೆ. ಇಬ್ಬರೂ ಸ್ನೇಹಪರರು. ಆದರೆ ಸಮಾಜವನ್ನು ನೋಡುವ ದೃಷ್ಟಿಯಲ್ಲಿ ಇಬ್ಬರೂ ಉತ್ತರ-ದಕ್ಷಿಣದಂತೆ ಭಿನ್ನ.
ಸಿದ್ಧರಾಮಯ್ಯ ಬಡತನವನ್ನು ಸಾಮಾಜಿಕ ವ್ಯವಸ್ಥೆಯ ಸಮಸ್ಯೆಯಾಗಿ ನೋಡಿ, ಭಾಗ್ಯಗಳು ಮತ್ತು ಗ್ಯಾರಂಟಿಗಳ ಮೂಲಕ ಅದನ್ನು ಕಡಿಮೆ ಮಾಡಬಹುದು ಎಂದು ನಂಬಿದವರು. ಅವರಿಗೆ ಹಣ ಅಂತಿಮ ಮೌಲ್ಯವಾಗಿರಲಿಲ್ಲ.
ಆದರೆ ಡಿಕೆಶಿ ಬಡತನವನ್ನು ಶಾಪದಂತೆ ನೋಡುವ ವ್ಯಕ್ತಿತ್ವದ ನಾಯಕ. ದುಡ್ಡು, ಅಧಿಕಾರ ಮತ್ತು ವಿಸ್ತರಣೆ ರಾಜಕಾರಣದ ಅವಿಭಾಜ್ಯ ಭಾಗಗಳು ಎಂದು ನಂಬುವವರು. ಈ ಅಂಶದಲ್ಲಿ ಅವರ ರಾಜಕೀಯ ಮನಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲ ಮಟ್ಟಿಗೆ ಹೋಲಿಕೆ ಇದೆ.
ಇಂತಹ ವ್ಯಕ್ತಿತ್ವದ ಮುಖ್ಯಮಂತ್ರಿಯಿಂದ ಗ್ಯಾರಂಟಿ ಯೋಜನೆಗಳು ಸಂಪೂರ್ಣ ನಿಲ್ಲುವುದಿಲ್ಲ. ಆದರೆ ಅವುಗಳಿಗೆ ಕಟ್ಟುನಿಟ್ಟಿನ ಷರತ್ತುಗಳು ಬರಬಹುದು. ಎಪಿಎಲ್ಗೆ ಅರ್ಹರಾಗಿದ್ದರೂ ಬಿಪಿಎಲ್ ಸೌಲಭ್ಯ ಪಡೆಯುವವರ ಮೇಲೆ ಕ್ರಮ ಸಾಧ್ಯ.
ಅದೇ ವೇಳೆ ಬೆಂಗಳೂರು ವಿಸ್ತರಣೆ ರಾಜಕಾರಣ ಇನ್ನಷ್ಟು ವೇಗ ಪಡೆಯಬಹುದು. ಬಿಡದಿಯಿಂದ ಆನೆಕಲ್ ತನಕ ನಗರ ಬೆಳವಣಿಗೆ ರೈತರು ಮತ್ತು ಬಡವರ ಹಿತಾಸಕ್ತಿಯನ್ನು ಹಿಂದಕ್ಕೆ ತಳ್ಳುತ್ತಲೇ ಸಾಗುವ ಸಾಧ್ಯತೆ ಇದೆ. ಇದು ಡಿಕೆಶಿಯವರಿಂದ ಮಾತ್ರವಲ್ಲ; ಈಗಿನ ಅಭಿವೃದ್ಧಿ ಮಾದರಿಯ ಸ್ವಭಾವವೇ ಹಾಗಾಗಿದೆ.
ಜಾತಿಗಣತಿ ವರದಿ ಮತ್ತೊಮ್ಮೆ ಪರಿಶೀಲನೆಗೆ ಹೋಗಬಹುದು ಅಥವಾ ಸಂಪೂರ್ಣವಾಗಿ ಹಿನ್ನಡೆಯಾಗಬಹುದು. ಈಗಿನ ವರದಿಯ ರಾಜಕೀಯ ಮೌಲ್ಯ ಮುಂದಿನ ದಿನಗಳಲ್ಲಿ ಪ್ರಶ್ನೆಗೆ ಒಳಗಾಗಬಹುದು.
ಇನ್ನೊಂದು ಮಹತ್ವದ ಪ್ರಶ್ನೆ ಧರ್ಮಸ್ಥಳ ಪ್ರಕರಣ. ಎಸ್ಐಟಿ ತನಿಖೆಯಲ್ಲಿರುವ, ಸುಪ್ರೀಂ ಕೋರ್ಟ್ ಗಮನ ಸೆಳೆದಿರುವ ಈ ಪ್ರಕರಣ ಮುಂದಿನ ದಿನಗಳಲ್ಲಿ ನಿಧಾನವಾಗಿ ಮಸುಕಾಗುವ ಸಾಧ್ಯತೆಗಳ ಬಗ್ಗೆ ಈಗಲೇ ಚರ್ಚೆಗಳು ಆರಂಭವಾಗಿವೆ. ನ್ಯಾಯದ ನಿರೀಕ್ಷೆಯಲ್ಲಿ ಇರುವ ಕುಟುಂಬಗಳಿಗೆ ಇದು ಆತಂಕದ ವಿಚಾರ.
ರಾಜಕೀಯವಾಗಿ ನೋಡಿದರೆ, ಮೇಲ್ಜಾತಿ, ಹಣಬಲ ಮತ್ತು ನಗರ ಮತದಾರರ ಮೇಲೆ ಆಧಾರಿತವಾಗಿರುವ ಬಿಜೆಪಿಗೆ ಈಗ ಕಾಂಗ್ರೆಸ್ ದೊಡ್ಡ ಸವಾಲಾಗಬಹುದು. ಆದರೆ ಅಹಿಂದ ವರ್ಗದ ಭಾವನಾತ್ಮಕ ಬೆಂಬಲ ಕಳೆದುಕೊಂಡರೆ ೨೦೨೮ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯೂ ಸಾಧ್ಯ.
ಇದು ಸಂಪೂರ್ಣವಾಗಿ ಡಿಕೆಶಿಯವರ ಮುಂದಿನ ಆಡಳಿತ ಶೈಲಿಯ ಮೇಲೆ ಅವಲಂಬಿತ.
ಒಕ್ಕಲಿಗ ಸಮುದಾಯದ ಮತದಾರರ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವ ಜೆಡಿಎಸ್ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ ಇದೆ.
ಬಲಪಂಥೀಯ ರಾಜಕೀಯ ಶೈಲಿ, ಅಧಿಕಾರದ ಕೇಂದ್ರೀಕರಣ, ಹಣ ಮತ್ತು ಪ್ರಭಾವದ ಆಟ — ಇವೆಲ್ಲದರ ನಡುವೆ ಕಾಂಗ್ರೆಸ್ ತನ್ನ ಮೂಲ ಸಿದ್ಧಾಂತ ಉಳಿಸಿಕೊಳ್ಳುತ್ತದೆಯೋ, ಅಥವಾ ಬಿಜೆಪಿಯ ‘ಬಿ ವಿಂಗ್’ ಆಗಿ ಬದಲಾಗುತ್ತದೆಯೋ ಎಂಬುದೇ ಮುಂದಿನ ಕರ್ನಾಟಕ ರಾಜಕಾರಣದ ದೊಡ್ಡ ಪ್ರಶ್ನೆ.






