ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ನೀಡಿದ ಸಂದೇಶ ಚರ್ಚೆಯ ವಿಷಯವಾಗಿದೆ. ೧ ವರ್ಷದವರೆಗೆ ಚಿನ್ನ ಖರೀದಿ ಮಾಡಬಾರದು, ಅಡುಗೆ ಎಣ್ಣೆ ಬಳಕೆ ಇಳಿಸಬೇಕು, ಸಾಧ್ಯವಾದರೆ ವರ್ಕ್ ಫ್ರಂ ಹೋಮ್ ಹೆಚ್ಚಿಸಬೇಕು, ಕಾರ್ ಪೂಲಿಂಗ್ ಮತ್ತು EV ಬಳಕೆ ಉತ್ತೇಜಿಸಬೇಕು, ವಿದೇಶ ಪ್ರವಾಸ ಹಾಗೂ ವಿದೇಶಿ ಬ್ರ್ಯಾಂಡ್ ಬಳಕೆ ಕಡಿಮೆ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ. ಈ ಸಂದೇಶ ಕೇವಲ “ಜೀವನ ಶೈಲಿ ಸಲಹೆ” ಅಲ್ಲ. ಇದರ ಹಿಂದೆ ಭಾರತದ ಆರ್ಥಿಕತೆ, ರೂಪಾಯಿ ಮೌಲ್ಯ, ವಿದೇಶಿ ವಿನಿಮಯ ನಿಧಿ (Forex Reserves), ತೈಲ ಆಮದು ವೆಚ್ಚ ಮತ್ತು ಜಾಗತಿಕ ಯುದ್ಧ ಪರಿಸ್ಥಿತಿಯಂತಹ ಗಂಭೀರ ಹಿನ್ನೆಲೆ ಇದೆ.
ಮೋದಿ ಈ ಸಲಹೆ ನೀಡಿದ ಹಿನ್ನೆಲೆ
ಭಾರತ ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಚಿನ್ನವೂ ದೊಡ್ಡ ಪ್ರಮಾಣದಲ್ಲಿ ಆಮದು ಆಗುತ್ತದೆ. ರೂಪಾಯಿ ಮೌಲ್ಯ ಕುಸಿದಾಗ ಮತ್ತು ಡಾಲರ್ ಬೆಲೆ ಏರಿದಾಗ ಭಾರತಕ್ಕೆ ಆಮದು ವೆಚ್ಚ ಹೆಚ್ಚುತ್ತದೆ. ಈ ಸಮಯದಲ್ಲಿ ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿ, ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಜಾಗತಿಕ ಅನಿಶ್ಚಿತತೆ ಭಾರತದ ಮೇಲೆ ಒತ್ತಡ ತಂದಿದೆ. ಅದರ ಪರಿಣಾಮವಾಗಿ, ಡಾಲರ್ ಬೇಡಿಕೆ ಹೆಚ್ಚುತ್ತದೆ. ರೂಪಾಯಿ ದುರ್ಬಲವಾಗುತ್ತದೆ. ವಿದೇಶಿ ವಿನಿಮಯ ನಿಧಿ ಕಡಿಮೆಯಾಗುತ್ತದೆ. ದುಬಾರಿ ದರ ಏರುತ್ತದೆ. ಈ ಹಿನ್ನೆಲೆಯಲ್ಲೇ ಮೋದಿ “ರಾಷ್ಟ್ರದ ಹಿತಕ್ಕಾಗಿ ಜೀವನಶೈಲಿಯಲ್ಲಿ ತಾತ್ಕಾಲಿಕ ಬದಲಾವಣೆ” ಮಾಡಲು ಕರೆ ನೀಡಿದ್ದಾರೆ.
ಈ ಸಂದೇಶದ ಸಕಾರಾತ್ಮಕ ಪರಿಣಾಮಗಳು
ರೂಪಾಯಿ ಮೌಲ್ಯಕ್ಕೆ ಬೆಂಬಲ – ಭಾರತ ಕಡಿಮೆ ಚಿನ್ನ ಮತ್ತು ಇಂಧನ ಆಮದು ಮಾಡಿದರೆ ಡಾಲರ್ ಹೊರಹರಿವು ಕಡಿಮೆಯಾಗುತ್ತದೆ. ಇದು ರೂಪಾಯಿ ಮೌಲ್ಯ ಸ್ಥಿರವಾಗಲು ಸಹಾಯ ಮಾಡುತ್ತದೆ. ಒಂದು ವರ್ಷ ಚಿನ್ನದ ಖರೀದಿ ಕಡಿಮೆಯಾದರೆ ಭಾರತದ ವಿದೇಶಿ ವಿನಿಮಯ ನಿಧಿಯ ಮೇಲೆ ಇರುವ ಒತ್ತಡ ಬಹಳಷ್ಟು ಇಳಿಯಬಹುದು ಎಂದು ಕೆಲವು ಅಂದಾಜುಗಳು ಸೂಚಿಸುತ್ತಿವೆ.
ಇಂಧನ ಬಳಕೆ ಕಡಿಮೆ ಮಾಡುವ ಪ್ರಯತ್ನ – ವರ್ಕ್ ಫ್ರಂ ಹೋಮ್, ಕಾರ್ ಪೂಲಿಂಗ್, ಮೆಟ್ರೋ ಮತ್ತು EV ಬಳಕೆ ಹೆಚ್ಚಿದರೆ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕಡಿಮೆಯಾಗುತ್ತದೆ. ಟ್ರಾಫಿಕ್ ಕಡಿಮೆಯಾಗುತ್ತದೆ. ಮಾಲಿನ್ಯ ಇಳಿಯುತ್ತದೆ. ಕೊರೊನಾ ಸಮಯದಲ್ಲಿ ಭಾರತ ಇದನ್ನು ಅನುಭವಿಸಿತ್ತು. ಈಗ ಮತ್ತೆ ಅದೇ ಮಾದರಿಯನ್ನು ಬಳಸುವ ಪ್ರಯತ್ನವಾಗಿ ಇದನ್ನು ನೋಡಲಾಗುತ್ತಿದೆ.
“ಸ್ವದೇಶಿ ಆರ್ಥಿಕತೆ”ಗೆ ಉತ್ತೇಜನ – ವಿದೇಶಿ ಬ್ರ್ಯಾಂಡ್‌ಗಳ ಬಳಕೆ ಕಡಿಮೆಯಾದರೆ ಭಾರತೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತದೆ. ಸ್ಥಳೀಯ ಉದ್ಯಮಗಳಿಗೆ ಸಹಾಯವಾಗುತ್ತದೆ. ಸಣ್ಣ ಉತ್ಪಾದಕರಿಗೆ ಮಾರುಕಟ್ಟೆ ಸಿಗುತ್ತದೆ. ಇದು “ಆತ್ಮನಿರ್ಭರ ಭಾರತ” ತತ್ವದ ಮುಂದುವರಿದ ಭಾಗವಾಗಿದೆ.
ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನ – ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡುವ ಸಲಹೆ ಆರ್ಥಿಕ ಕಾರಣ ಮಾತ್ರವಲ್ಲ, ಆರೋಗ್ಯ ಕಾರಣವೂ ಹೌದು. ಭಾರತದಲ್ಲಿ ಹೃದಯ ಸಂಬಂಧಿ ರೋಗಗಳು ಮತ್ತು ಅತಿಯಾದ ಎಣ್ಣೆ ಆಹಾರ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ ಇದನ್ನು ಆರೋಗ್ಯ ಜಾಗೃತಿ ಸಂದೇಶವಾಗಿಯೂ ನೋಡಬಹುದು.
ಜಾಗತಿಕ ಸಂಕಷ್ಟಕ್ಕೆ ಜನರ ಭಾಗವಹಿಸುವಿಕೆ – ಈ ಸಂದೇಶದ ಮುಖ್ಯ ಅಂಶ “ದೇಶದ ಆರ್ಥಿಕ ಸ್ಥಿರತೆ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಜನರ ಸಹಭಾಗಿತ್ವವೂ ಅಗತ್ಯ.” ಎನ್ನುವುದು ಇದು ದೇಶಭಕ್ತಿ ಮತ್ತು ಆರ್ಥಿಕ ಜವಾಬ್ದಾರಿಯನ್ನು ಒಂದಾಗಿ ಜೋಡಿಸುವ ಪ್ರಯತ್ನವಾಗಿದೆ.
ಈ ಸಂದೇಶದ ನಕಾರಾತ್ಮಕ ಪರಿಣಾಮಗಳು ಮತ್ತು ಟೀಕೆಗಳು
ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಸರಿಯೆ? – ವಿರೋಧ ಪಕ್ಷಗಳು ಮತ್ತು ಕೆಲವು ಆರ್ಥಿಕ ತಜ್ಞರ ಅಭಿಪ್ರಾಯ ಏನೆಂದರೆ ಸರ್ಕಾರದ ನೀತಿಗಳ ವೈಫಲ್ಯವನ್ನು ಸಾಮಾನ್ಯ ಜನರ ಜೀವನಶೈಲಿ ಮೇಲೆ ಹಾಕುವುದು ಸರಿಯಲ್ಲ. ವಿರೋಧ ಪಕ್ಷಗಳು ತೈಲ ಆಮದು, ಸಂಗ್ರಹ, ಆರ್ಥಿಕ ದೂರದೃಷ್ಟಿ ಇವುಗಳ ಬಗ್ಗೆ ಎಚ್ಚರಿಸುತ್ತಲೇ ಬಂದಿವೆ. ಆದಾಗ್ಯೂ ಯುದ್ಧ ಕಾಲೇ ಶಸ್ತ್ರಾಭ್ಯಾಸ ಎನ್ನುವ ಹಾಗೆ ಯಾವುದೇ ಮುನ್ನೆಚ್ಚರಿಕೆಯನ್ನೂ ತೆಗೆದುಕೊಳ್ಳದೆ ಅದರ ಹೊರೆಯನ್ನು “ಈಗ” ಜನರ ಮೇಲೆ ಹಾಕಲಾಗುತ್ತಿದೆ’. ಇಂಧನ ದರ ಏರಿಕೆ, ರೂಪಾಯಿ ಕುಸಿತ ಮತ್ತು ಆಮದು ಅವಲಂಬನೆ ಸರ್ಕಾರದ ದೀರ್ಘಕಾಲದ ಆರ್ಥಿಕ ಸವಾಲುಗಳು. ಈ ಸವಾಲುಗಳನ್ನು ಎದುರಿಸಲು ಸರಕಾರ ಚುನಾವಣೆಗಳು ಮುಗಿಯುವುದನ್ನು ಕಾಯಬೇಕಿತ್ತೆ? ಇದು ಪ್ರಶ್ನೆ.
ಚಿನ್ನ ಭಾರತೀಯರ ಭಾವನಾತ್ಮಕ ಆಸ್ತಿ.- ನಿನ್ನೆಯಷ್ಟೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರು. “ಮದುವೆಯಾಗುವವರು ತಾಳಿಯನ್ನೂ ಸಹ ಬಂಗಾರದಲ್ಲಿ ಧರಿಸಬಾರದಾ? ಮದುವೆಗೆ ಚಿನ್ನ ಕೊಳ್ಳಬಾರದಾ? ಅರ್ಥವಿಲ್ಲದ ತರ್ಕ” ಎಂದು. ಅದು ಕೆಲಮಟ್ಟಿಗೆ ನಿಜ ಕೂಡ. ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ. ಅದು ಭದ್ರತೆ, ಸಂಸ್ಕೃತಿ, ಮದುವೆ ಸಂಪ್ರದಾಯ ಮತ್ತು ಮಹಿಳೆಯರ ಆರ್ಥಿಕ ಸುರಕ್ಷತೆ. ಅದರಿಂದ “ಚಿನ್ನ ಖರೀದಿ ಬೇಡ” ಎಂಬ ಕರೆ ಮಧ್ಯಮ ವರ್ಗ ಮತ್ತು ಮಹಿಳೆಯರಲ್ಲಿ ಅಸಮಾಧಾನ ಹುಟ್ಟಿಸಬಹುದು. ಆಭರಣೋದ್ಯಮದ ಷೇರುಗಳು ಕೂಡ ಈ ಹೇಳಿಕೆಯ ನಂತರ ಕುಸಿದಿವೆ. ನಿನ್ನೆ ಕೋಲಾರದ ಚಿನ್ನದಂಗಡಿಯವ ಸುದ್ದಿ ಕೇಳಿ, ಸಾಲ ತೀರಿಸಲಾಗದ ಆತಂಕದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆಭರಣೋದ್ಯಮ ಕುಸಿದರೆ ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುವ ಆತಂಕ ಎದುರಾಗಿದೆ.
ಪ್ರವಾಸೋದ್ಯಮ ಮತ್ತು ಉದ್ಯಮಗಳ ಮೇಲೆ ಪರಿಣಾಮ – ಜನರು ವಿದೇಶ ಪ್ರವಾಸ ಕಡಿಮೆ ಮಾಡಿದರೆ ಪ್ರವಾಸೋದ್ಯಮ ಕಂಪನಿಗಳು, ಏರ್‌ಲೈನ್ಸ್, ಟ್ರಾವೆಲ್ ಏಜೆನ್ಸಿಗಳು, ಲಕ್ಸುರಿ ಬ್ರ್ಯಾಂಡ್ ಮಾರುಕಟ್ಟೆ ಇವುಗಳಿಗೆ ಹೊಡೆತ ಬೀಳುತ್ತದೆ. ಅದೇ ರೀತಿ ವರ್ಕ್ ಫ್ರಂ ಹೋಂ ಹೆಚ್ಚಾದರೆ ನಗರಗಳ ಸಣ್ಣ ಹೋಟೆಲ್‌ಗಳು, ಕ್ಯಾಬ್ ಸೇವೆಗಳು, ಕಚೇರಿ ಆಧಾರಿತ ಸಣ್ಣ ವ್ಯಾಪಾರಗಳು ಇವುಗಳ ಆದಾಯ ಕಡಿಮೆಯಾಗುತ್ತದೆ. ಈಗಾಗಲೇ ಅಡುಗೆ ಅನಿಲದ ತೊಂದರೆಯಲ್ಲಿ ಮುಚ್ಚುತ್ತಿರುವ ಹೊಟೆಲ್ ಗಳು , ಸಂಪೂರ್ಣ ಮುಚ್ಚಿಕೊಳ್ಳುವ ಆತಂಕ ಎದುರಾಗಿದೆ.
ಇದು “ಅಪಾಯದ ಸೂಚನೆ”ಯೆ? – ಇಂತಹದ್ದೊಂದು ಸಂಶಯ ಈಗ ಮೂಡಿದೆ. ಸಾಮಾನ್ಯವಾಗಿ ಸರ್ಕಾರಗಳು ಇಂತಹ ಸಾರ್ವಜನಿಕ ಮಿತವ್ಯಯದ ಕರೆ ನೀಡುವುದು ದೊಡ್ಡ ಆರ್ಥಿಕ ಒತ್ತಡದ ಸಮಯದಲ್ಲಿ. ಆದ್ದರಿಂದ ಕೆಲವು ಜನರಲ್ಲಿ ಆತಂಕ ಹೆಚ್ಚಾಗಿದೆ. ಭಾರತದ ಆರ್ಥಿಕ ಸ್ಥಿತಿ ಎಷ್ಟು ಗಂಭೀರ? , ರೂಪಾಯಿ ಇನ್ನಷ್ಟು ಕುಸಿಯುತ್ತದೆಯೇ?, ಇಂಧನ ದರ ಏರಿಕೆಯಾಗುತ್ತದೆಯೇ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಮಧ್ಯಮ ವರ್ಗದ ಜೀವನಶೈಲಿಗೆ ನೇರ ಹಸ್ತಕ್ಷೇಪ ಕೆಲವರು ಇದನ್ನು “ಸರ್ಕಾರದ ಸಲಹೆ” ಎಂದು ನೋಡಿದರೆ, ಇನ್ನು ಕೆಲವರು ಇದನ್ನು “ಜನರ ವೈಯಕ್ತಿಕ ಜೀವನಕ್ಕೆ ಹಸ್ತಕ್ಷೇಪ” ಎಂದು ನೋಡುತ್ತಿದ್ದಾರೆ. ಯಾರು ಯಾವ ಬ್ರ್ಯಾಂಡ್ ಬಳಸಬೇಕು? ಯಾರು ಎಲ್ಲಿ ಪ್ರವಾಸ ಹೋಗಬೇಕು? ಯಾರು ಚಿನ್ನ ಖರೀದಿಸಬೇಕು? ಇವು ವೈಯಕ್ತಿಕ ಆಯ್ಕೆಗಳು.
ಒಟ್ಟಿನಲ್ಲಿ ಹೇಳುವುದಾದರೆ, ಆರ್ಥಿಕವಾಗಿ ಈ ಕ್ರಮಗಳು ನಿಜವಾಗಿಯೂ ಸಹಾಯ ಮಾಡುತ್ತವೆ. ಆದರೆ ಅದು “ಸಂಪೂರ್ಣ ಪರಿಹಾರ” ಅಲ್ಲ, ತಾತ್ಕಾಲಿಕ ಮಾತ್ರ. ಉದಾಹರಣೆಗೆ, ಭಾರತ ವರ್ಷಕ್ಕೆ ಬಿಲಿಯನ್‌ಗಳ ಡಾಲರ್ ಮೌಲ್ಯದ ಚಿನ್ನ ಆಮದು ಮಾಡುತ್ತದೆ. ತೈಲ ಆಮದು ಭಾರತದ ದೊಡ್ಡ ವೆಚ್ಚಗಳಲ್ಲಿ ಒಂದು. ವಿದೇಶ ಪ್ರವಾಸದಲ್ಲೂ ದೊಡ್ಡ ಪ್ರಮಾಣದ ಹಣ ಹೊರಹೋಗುತ್ತದೆ. ಆದ್ದರಿಂದ ಕೆಲವು ತಿಂಗಳುಗಳ ಮಟ್ಟಿಗೆ ಜನರ ಬಳಕೆ ಅಭ್ಯಾಸ ಬದಲಾಗಿದರೆ, ಡಾಲರ್ ಬೇಡಿಕೆ ಇಳಿಯುತ್ತದೆ. ರೂಪಾಯಿ ಒತ್ತಡ ಕಡಿಮೆಯಾಗುತ್ತದೆ. ವಿದೇಶಿ ವಿನಿಮಯ ನಿಧಿ ಉಳಿಯುತ್ತದೆ. ಆದರೆ ದೀರ್ಘಕಾಲದಲ್ಲಿ, ಉತ್ಪಾದನೆ ಹೆಚ್ಚಳ, ರಫ್ತು ವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಇಂಧನ ಸ್ವಾವಲಂಬನೆಯೇ ಶಾಶ್ವತ ಪರಿಹಾರವಾಗಿದೆ.
ನರೇಂದ್ರ ಮೋದಿ ಅವರ ಈ ಸಂದೇಶವನ್ನು ಎರಡು ರೀತಿಯಲ್ಲಿ ನೋಡಬಹುದು. ಒಂದು – ಇದು ಜಾಗತಿಕ ಸಂಕಷ್ಟದ ಸಮಯದಲ್ಲಿ ದೇಶವನ್ನು ಆರ್ಥಿಕವಾಗಿ ರಕ್ಷಿಸಲು ನೀಡಿದ “ಸಾಮೂಹಿಕ ಜವಾಬ್ದಾರಿಯ ಕರೆ”. ಮತ್ತೊಂದು – ಇದು ಸರ್ಕಾರದ ಆರ್ಥಿಕ ಒತ್ತಡ ಮತ್ತು ದುರ್ಬಲತೆಯ ಪರೋಕ್ಷ ಒಪ್ಪಿಗೆಯೂ ಆಗಿರಬಹುದು! ಆದರೆ ಒಂದು ವಿಷಯ ಸ್ಪಷ್ಟ.
ಭಾರತದ ಆರ್ಥಿಕತೆ ಈಗ ಜಾಗತಿಕ ರಾಜಕೀಯ, ಯುದ್ಧ, ತೈಲ ಮತ್ತು ಡಾಲರ್ ಮೇಲಿನ ಅವಲಂಬನೆಯಿಂದ ಹೆಚ್ಚು ಪ್ರಭಾವಿತವಾಗುತ್ತಿದೆ. ಈ ಅವಲಂಬನೆಯ ಗಂಭೀರತೆ ಈಗಲಾದರೂ ಆಳುವ ಸರ್ಕಾರ ಮತ್ತು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಮೋದಿ ನೀಡಿದ ಈ ಸಲಹೆಗಳು ಕೇವಲ ರಾಜಕೀಯ ಭಾಷಣವಲ್ಲ; ಅವು ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕ ಸವಾಲುಗಳ ಮುನ್ಸೂಚನೆಯಾಗಿಯೂ ಆಗಿವೆ.






