ಪ್ರತಿ ವರ್ಷ ಡಿಸೆಂಬರ್ 17ರಂದು ಪಿಂಚಣಿದಾರರ ದಿನ (Pensioners’ Day) ಆಚರಿಸಲಾಗುತ್ತದೆ. ದೇಶದ ಆಡಳಿತ ವ್ಯವಸ್ಥೆ, ಸಾರ್ವಜನಿಕ ಸೇವೆ ಹಾಗೂ ಅಭಿವೃದ್ಧಿಗೆ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಸಮರ್ಪಿಸಿ ನಿವೃತ್ತರಾದ ಲಕ್ಷಾಂತರ ಪಿಂಚಣಿದಾರರ ಸೇವೆಯನ್ನು ಸ್ಮರಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ. ಭಾರತದಲ್ಲಿ ಪಿಂಚಣಿದಾರರ ದಿನವನ್ನು ಆಚರಿಸುವುದಕ್ಕೆ ವಿಶೇಷ ಐತಿಹಾಸಿಕ ಹಿನ್ನೆಲೆ ಇದೆ.
೧೭/೧೨/೧೯೮೨ರಂದು ಸರ್ವೋಚ್ಛ ನ್ಯಾಯಾಲಯವು ನಿವೃತ್ತ ನೌಕರರಿಗೆ ಪಿಂಚಣಿ ಕೊಟ್ಟು ಅವರ ಗೌರವ ಮತ್ತು ಶಾಂತ ಜೀವನವನ್ನು ದೃಢಪಡಿಸುವ ಮಹತ್ವದ ತೀರ್ಪು ನೀಡಿತು. ಆ ದಿನದ ನೆನಪಿಗಾಗಿ ಈ ದಿನವನ್ನು ಪಿಂಚಣಿದಾರರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಬ್ರಿಟಿಷರು ೧೮೫೭ರಲ್ಲೇ ಪಿಂಚಣಿ ಕಾಯ್ದೆಯನ್ನು ಬ್ರಿಟನ್ನಿನಲ್ಲಿರುವಂತೆಯೇ ರೂಪಿಸಿದ್ದರು. ೧೮೭೧ರಲ್ಲಿ ಭಾರತೀಯ ಪಿಂಚಣಿ ಕಾಯ್ದೆ ಜಾರಿಗೆ ಬಂದಿತು. ಅಲ್ಲಿಂದ ನೂರು ವರ್ಷಗಳ ನಂತರ ಭಾರತೀಯ ರಕ್ಷಣಾ ಇಲಾಖೆಯ ನಿವೃತ್ತ ನೌಕರ ಡಿ.ಎಸ್ ನಕರ ಎನ್ನುವವರು ಎಲ್ಲರಂತೆ ತಮ್ಮ ಪಿಂಚಣಿಯನ್ನು ಪಡೆಯಲು ಹರಸಾಹಸಪಟ್ಟರು. ಪಿಂಚಣಿದಾರರ ಈ ಗೋಳನ್ನು ಪ್ರಶ್ನಿಸಿ ಅವರು ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದರು.ಹಲವು ವರ್ಷಗಳ ಹೋರಾಟದ ನಂತರ ಘನ ನ್ಯಾಯಾಲಯವು ನಿವೃತ್ತರ ಬದುಕಿಗೆ ಗೌರವ ಮತ್ತು ಶಾಂತಿಯುತ ಜೀವನ ನಡೆಸಲು ಪಿಂಚಣಿಯ ಮಹತ್ವವನ್ನು ಎತ್ತಿಹಿಡಿಯಿತು. ನಿವೃತ್ತಿಯ ನಂತರ ಸೇವೆ ಇಲ್ಲದಿದ್ದರೂ ಸೇವೆ ಸಲ್ಲಿಸುವಾಗ ಸೇವೆ ಸಲ್ಲಿಸಿದ್ದನ್ನು ಗೌರವಿಸುವುದು ಎಲ್ಲಾ ಉದ್ಯೋಗದಾತರ ಕರ್ತವ್ಯ ಎಂದು ಅಭಿಪ್ರಾಯಪಟ್ಟಿತು. ಕಾಲಕಾಲಕ್ಕೆ ಸರಿಯಾಗಿ ವಿಳಂಬ ಮಾಡದೆ ಪಿಂಚಣಿ ಪಾವತಿಸಲು ಸಂಬಂಧಪಟ್ಟವರಿಗೆ ಆದೇಶಿಸಿತು. ಈ ಸಂದರ್ಭದ ನೆನಪಿಗಾಗಿ ಪಿಂಚಣಿದಾರರ ದಿನವನ್ನು ಆಚರಿಸಲಾಗುತ್ತದೆ.
ಪಿಂಚಣಿದಾರರು – ಸಮಾಜದ ಅನುಭವ ಸಂಪತ್ತು
ಪಿಂಚಣಿದಾರರು ಕೇವಲ ನಿವೃತ್ತ ಸರ್ಕಾರಿ ನೌಕರರು ಮಾತ್ರವಲ್ಲ. ಅವರು ತಮ್ಮ ಅನುಭವ, ಶಿಸ್ತು, ಪ್ರಾಮಾಣಿಕತೆ ಮತ್ತು ಸೇವಾಭಾವದಿಂದ
ಸಮಾಜಕ್ಕೆ ದೀರ್ಘಕಾಲದ ಕೊಡುಗೆ ನೀಡಿದವರು. ಶಿಕ್ಷಕರು, ವೈದ್ಯರು, ಪೊಲೀಸ್ ಸಿಬ್ಬಂದಿ, ಆಡಳಿತಾಧಿಕಾರಿಗಳು, ಎಂಜಿನಿಯರ್‌ಗಳು ಹೀಗೆ
ಪ್ರತಿ ಕ್ಷೇತ್ರದಲ್ಲಿಯೂ ಪಿಂಚಣಿದಾರರ ಪಾತ್ರ ದೇಶದ ಬೆಳವಣಿಗೆಯಲ್ಲಿ ಮಹತ್ವದ್ದಾಗಿದೆ.
ಪಿಂಚಣಿ ವ್ಯವಸ್ಥೆಯ ಮಹತ್ವ
ಪಿಂಚಣಿ ಎಂದರೆ ಕೇವಲ ನಿವೃತ್ತಿಯ ನಂತರದ ಆರ್ಥಿಕ ನೆರವು ಮಾತ್ರವಲ್ಲ. ಇದು ಪಿಂಚಣಿದಾರರ ಗೌರವಯುತ ಜೀವನಕ್ಕೆ ಭರವಸೆಯ ಭದ್ರತೆ. ನಿವೃತ್ತರಿಗೆ ಈ ಭದ್ರತೆಯನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಿಂಚಣಿ ಸುಧಾರಣೆ, ಡಿಜಿಟಲ್ ಪಿಂಚಣಿ ವ್ಯವಸ್ಥೆ, ಆರೋಗ್ಯ ಯೋಜನೆಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಪಿಂಚಣಿದಾರರ ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳುತ್ತಿವೆ. ಆದರೂ, ವಿಳಂಬ, ತಾಂತ್ರಿಕ ಸಮಸ್ಯೆಗಳು ಮತ್ತು ಆರೋಗ್ಯ ವೆಚ್ಚಗಳ ಹೆಚ್ಚಳ ಇಂದಿಗೂ ಪಿಂಚಣಿದಾರರಿಗೆ ಸವಾಲಾಗಿ ಉಳಿದಿವೆ.
ನಿವೃತ್ತಿಯ ನಂತರವೂ ಹಿರಿಯ ನಾಗರಿಕರ ಗೌರವ ಮತ್ತು ಭದ್ರತೆ ಕಾಪಾಡುವುದು ಕಿರಿಯ ನಾಗರಿಕರ ಜವಾಬ್ದಾರಿಯಾಗಿದೆ. ಅವರ ಅನುಭವವನ್ನು ಮುಂದಿನ ಪೀಳಿಗೆಗೆ ಬಳಸಿಕೊಳ್ಳಬೇಕು ಮತ್ತು ಅವರ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಇದೇ ಪಿಂಚಣಿದಾರರ ದಿನದ ಸದಾಶಯವಾಗಿದೆ.
🙏 ಗೌರವದ ನಮನ
ಪಿಂಚಣಿದಾರರ ದಿನದಂದು ರಾಷ್ಟ್ರ ನಿರ್ಮಾಣಕ್ಕೆ ದುಡಿದ ಎಲ್ಲ ನಿವೃತ್ತ ಸಿಬ್ಬಂದಿಗೆ ಸುದ್ದಿ ಟಿವಿ ಹೃದಯಪೂರ್ವಕ ನಮನ ಸಲ್ಲಿಸುತ್ತದೆ.
ನಿಮ್ಮ ಸೇವೆಯೇ ನಮ್ಮ ಇಂದಿನ ನೆಲೆ.
ನಿಮ್ಮ ಅನುಭವವೇ ನಮ್ಮ ಮುಂದಿನ ದಾರಿ.






