ಭಾರತದಲ್ಲಿ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆ (NPS) ಹಾಗೂ ಸರ್ಕಾರ ಮುಂದಿಟ್ಟಿರುವ ಏಕೀಕೃತ ಪಿಂಚಣಿ ಯೋಜನೆ (UPS)ಗಳ ಉದ್ದೇಶ, ಹಿನ್ನೆಲೆ ಮತ್ತು ಪಿಂಚಣಿದಾರರ ನಿವೃತ್ತ ಜೀವನದ ಮೇಲೆ ಬೀರುವ ಪರಿಣಾಮಗಳ ಕುರಿತು ಸುದ್ದಿ ಟಿವಿಯ ವಿಶ್ಲೇಷಣಾತ್ಮಕ ವರದಿ.
ಭಾರತದಲ್ಲಿ ಪಿಂಚಣಿ ವ್ಯವಸ್ಥೆ ಎಂದರೆ ಕೇವಲ ನಿವೃತ್ತಿಯ ನಂತರದ ಆದಾಯವಲ್ಲ. ಅದು ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳ ಆರ್ಥಿಕ ಭದ್ರತೆ ಹಾಗೂ ಗೌರವಯುತ ಜೀವನದ ಭರವಸೆ. ಆದರೆ ಕಳೆದ ಎರಡು ದಶಕಗಳಲ್ಲಿ ಹಳೆಯ ಪಿಂಚಣಿ ಯೋಜನೆ (Old Pension Scheme – OPS) ಮತ್ತು ಹೊಸ ಪಿಂಚಣಿ ಯೋಜನೆ (New Pension Scheme – NPS) ಎಂಬ ಎರಡು ವಿಭಿನ್ನ ವ್ಯವಸ್ಥೆಗಳು ದೇಶದಲ್ಲಿ ಜಾರಿಯಾಗಿವೆ. ಈ ಎರಡರ ನಡುವಿನ ವ್ಯತ್ಯಾಸ ಮತ್ತು ಅದರ ಪರಿಣಾಮಗಳು ಇಂದು ದೊಡ್ಡ ಚರ್ಚೆಯ ವಿಷಯವಾಗಿವೆ.
ಹಳೆಯ ಪಿಂಚಣಿ ಯೋಜನೆ (OPS) ಯು ಭರವಸೆಯ ವ್ಯವಸ್ಥೆಯಾಗಿತ್ತು. ಹಳೆಯ ಪಿಂಚಣಿ ಯೋಜನೆ 2004ರ ಮೊದಲು ನೇಮಕಗೊಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರಿಗೆ ಜಾರಿಯಲ್ಲಿತ್ತು. ಹಳೆಯ ಪಿಂಚಣಿ ಯೋಜನೆಯಲ್ಲಿ – ನಿವೃತ್ತಿಯ ನಂತರ ನಿಶ್ಚಿತ ಪಿಂಚಣಿ ದೊರೆಯುತ್ತಿತ್ತು. ಕೊನೆಯ ವೇತನದ ಅರ್ಧದಷ್ಟು ವೇತನ ಪಿಂಚಣಿಯಾಗಿ ಸಿಗುತ್ತಿತ್ತು. ಸರ್ಕಾರಿ ಖಜಾನೆಯೇ ಈ ಪಿಂಚಣಿಯನ್ನು ಸಂಪೂರ್ಣವಾಗಿ ಭರಿಸುತ್ತಿತ್ತು. ಹಣದುಬ್ಬರಕ್ಕೆ ಅನುಗುಣವಾಗಿ ಡಿಎ (DA) ಹೆಚ್ಚಳವಾಗುತ್ತಿತ್ತು. ಇದು ನಿವೃತ್ತ ನೌಕರರಿಗೆ ಹೆಚ್ಚಿನ ಆರ್ಥಿಕ ಸ್ಥಿರತೆ ಒದಗಿಸುತ್ತಿತ್ತು.
ಪಿಂಚಣಿದಾರರಿಗೆ ಭವಿಷ್ಯದ ಬಗ್ಗೆ ಚಿಂತೆ ಇಲ್ಲದ ವ್ಯವಸ್ಥೆ ಇದಾಗಿದ್ದರೂ ಸರಕಾರದ ಮೇಲೆ ದೀರ್ಘಾವಧಿಯ ಹಣಕಾಸು ಒತ್ತಡ ಹೆಚ್ಚುತ್ತಿತ್ತು. ೧೦-೨೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಆಯ್ಕೆ (Voluntary Retirement) ಮಾಡಿಕೊಂಡವರಿಗೂ ಸೇವೆಗೆ ಲಭ್ಯವಿಲ್ಲದಿದ್ದರೂ ಸಂಬಳ ಕೊಡುವ ಹೊರೆ ಸರಕಾರದ್ದಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ ಹೊಸ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿತು.
ಹೊಸ ಪಿಂಚಣಿ ಯೋಜನೆ (NPS): ಮಾರುಕಟ್ಟೆ ಆಧಾರಿತ ಮಾದರಿಯಾಗಿದೆ. 2004ರಿಂದ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತು. ನಂತರ ಬಹುತೇಕ ರಾಜ್ಯಗಳು ಇದನ್ನು ಅನುಸರಿಸಿದವು. ಈ ಯೋಜನೆಗೆ ನೌಕರ ಮತ್ತು ಸರ್ಕಾರ ಎರಡೂ ಕೊಡುಗೆ ಕೊಡಬೇಕಾಗಿತ್ತು. ನೌಕರ ತನ್ನ ಸಂಬಳದ ಶೇ.೧೦ರಷ್ಟು, ಸರ್ಕಾರ ಒಟ್ಟೂ ಸಂಬಳದ ಶೇ.೧೦ರಷ್ಟನ್ನು ಸೇರಿಸಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಿತ್ತು. ಇದು ಮಾರುಕಟ್ಟೆಯಲ್ಲಿ ಲಾಭದ ಅನಿಶ್ಚಿತತೆಯನ್ನು ಹೊಂದಿತ್ತು. ನಿವೃತ್ತಿಯ ವೇಳೆ ಒಂದು ಭಾಗದಷ್ಟು ದೊಡ್ಡ ಮೊತ್ತವನ್ನು ಪಡೆಯಬಹುದಿತ್ತು. ಉಳಿದ ಹಣದಲ್ಲಿ ವಾರ್ಷಿಕ ಇಂತಿಷ್ಟು ಎಂದು ಪಿಂಚಣಿ ದೊರೆಯುತ್ತಿತ್ತು.
ಆದರೆ ಈ ವ್ಯವಸ್ಥೆ ಸರಕಾರದ ಹಣಕಾಸು ಭಾರವನ್ನು ಕಡಿಮೆ ಮಾಡಿದರೂ , ಪಿಂಚಣಿದಾರರಿಗೆ ಭವಿಷ್ಯದ ಆದಾಯದಲ್ಲಿ ಅನಿಶ್ಚಿತತೆ ಹೆಚ್ಚಿಸುತ್ತಿತ್ತು. NPS ಅಡಿಯಲ್ಲಿ ನಿವೃತ್ತರಾದ ನೌಕರರಿಗೆ ಪಿಂಚಣಿ ಮೊತ್ತ ಕಡಿಮೆ ಬರುತ್ತಿದೆ ಎಂಬ ಆರೋಪಗಳಿದ್ದವು. ಆರೋಗ್ಯ ವೆಚ್ಚ, ಜೀವನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ
ನಿಶ್ಚಿತ ಪಿಂಚಣಿ ಇಲ್ಲದಿರುವುದು ಹಿರಿಯ ನಾಗರಿಕರಲ್ಲಿ ಆತಂಕ ಹುಟ್ಟಿಸಿತ್ತು. ಇದೇ ಕಾರಣಕ್ಕೆ ಹಲವಾರು ರಾಜ್ಯಗಳಲ್ಲಿ OPS ಮರು ಜಾರಿಗೆ ನೌಕರ ಸಂಘಟನೆಗಳು ಒತ್ತಾಯಿಸುತ್ತಿದ್ದವು. ಕೆಲವು ರಾಜ್ಯ ಸರ್ಕಾರಗಳು OPS ಮರು ಜಾರಿಗೊಳಿಸುವ ನಿರ್ಧಾರ ತೆಗೆದುಕೊಂಡವು. ಆದರೆ ಆರ್ಥಿಕ ತಜ್ಞರು
ಇದು ದೀರ್ಘಾವಧಿಯಲ್ಲಿ ಸರ್ಕಾರದ ಹಣಕಾಸು ಸ್ಥಿತಿಗೆ ಭಾರವಾಗಬಹುದು ಎಂದು ಎಚ್ಚರಿಸುತ್ತಿದ್ದರು. ಆ ಮೂಲಕ OPS vs NPS ಚರ್ಚೆ
ಕೇವಲ ಆಡಳಿತಾತ್ಮಕವಲ್ಲ, ರಾಜಕೀಯ ಮತ್ತು ಸಾಮಾಜಿಕ ವಿಷಯವೂ ಆಯಿತು.
OPS ಮತ್ತು NPS ನಡುವಿನ ಪ್ರಮುಖ ವ್ಯತ್ಯಾಸ
ಅಂಶ | OPS | NPS |
|---|---|---|
| ಪಿಂಚಣಿ ಮೊತ್ತ | ನಿಶ್ಚಿತ | ಅನಿಶ್ಚಿತ |
| ಹಣಕಾಸು ಹೊಣೆ | ಸರ್ಕಾರ | ನೌಕರ + ಸರ್ಕಾರ |
| ಮಾರುಕಟ್ಟೆ ಅಪಾಯ | ಇಲ್ಲ | ಇದೆ |
| ನಿವೃತ್ತಿಯ ಭದ್ರತೆ | ಹೆಚ್ಚು | ಕಡಿಮೆ |
| ದ್ರವ್ಯೋತ್ಪತ್ತಿ ರಕ್ಷಣೆ | ಇದೆ | ಸೀಮಿತ |
NPSನಲ್ಲಿ ಕನಿಷ್ಠ ಪಿಂಚಣಿ ಭರವಸೆ ಬೇಕು. ಹಣದುಬ್ಬರಕ್ಕೆ ಹೊಂದಿಕೊಳ್ಳುವ ವ್ಯವಸ್ಥೆ ಇರಬೇಕು. ಆರೋಗ್ಯ ಭದ್ರತೆ ಜೋಡಣೆಯಾಗಬೇಕು. ಇದರಿಂದ ಸರ್ಕಾರದ ಹಣಕಾಸು ಸಮತೋಲನ ಮತ್ತು ಪಿಂಚಣಿದಾರರ ಭದ್ರತೆ ಎರಡೂ ಉಳಿಯಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿತ್ತು.
ಅದರಂತೆ 2025 ಏಪ್ರಿಲ್ 1 ರಿಂದ ಏಕೀಕೃತ ಪಿಂಚಣಿ ಯೋಜನೆ (UPS) ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯಲ್ಲಿ ಹಳೆಯ ಪಿಂಚಣಿ ಯೋಜನೆಯಲ್ಲಿದ್ದಂತೆ ಸೇವಾವಧಿಯ ಕೊನೆಯ ಸಂಬಳದ ಅರ್ಧದಷ್ಟು ನಿಶ್ಚಿತ ಪಿಂಚಣಿ ದೊರೆಯುತ್ತದೆ. ನಿವೃತ್ತಿಗೂ ಮೊದಲಿನ ಸೇವಾ ಅವಧಿಯ ಆಧಾರದ ಮೇಲೆ ಶೇ.೮೦ರಷ್ಟು ಹೂಡಿಕೆಯನ್ನು ಹಿಂಪಡೆಯಬಹುದಾಗಿದೆ. ಉಳಿದಿದ್ದನ್ನು ಹೂಡಿಕೆಯಲ್ಲೇ ಬಿಟ್ಟು ವಾರ್ಷಿಕ ದರದಲ್ಲಿ ಲಾಭ ದೊರೆಯಲಿದೆ. ನೌಕರನ ಸಂಬಳದಲ್ಲಿ ಶೇ.೧೦ರಷ್ಟು, ಸರ್ಕಾರದಿಂದ ಸಂಬಳದ ಶೇ. ೧೦ರಷ್ಟು ಸೇರಿಸಿ ಪಿಂಚಣಿ ಇಡಿಗಂಟು ಸಿದ್ಧವಾಗುತ್ತದೆ. ಇದರಿಂದ ಸರಕಾರದ ಮೇಲೆ ಪಿಂಚಣಿಯ ದೊಡ್ಡ ಭಾರ ಕಡಿಮೆಯಾಗುತ್ತದೆ. ಈ ವ್ಯವಸ್ಥೆಯನ್ನು ಸರಕಾರಿ ನೌಕರರು ಒಪ್ಪಿಕೊಳ್ಳುತ್ತಿದ್ದು ನವೆಂಬರ್ ೨೦೨೫ ರ ಹೊತ್ತಿಗೆ ೧.೨೨ ಲಕ್ಷ ಜನರು ಈ ಪಿಂಚಣಿ ವ್ಯವಸ್ಥೆಗೆ ನೋಂದಾಯಿಸಿಕೊಂಡಿದ್ದಾರೆ.
UPS ಮತ್ತು NPS ನಡುವಿನ ಪ್ರಮುಖ ವ್ಯತ್ಯಾಸ
| ಅಂಶ | NPS | UPS |
|---|---|---|
| ಪಿಂಚಣಿ ಸ್ವರೂಪ | ಮಾರುಕಟ್ಟೆ ಆಧಾರಿತ | ಕನಿಷ್ಠ ಭರವಸೆಯೊಂದಿಗೆ |
| ನಿಶ್ಚಿತ ಪಿಂಚಣಿ | ಇಲ್ಲ | ಇರಬಹುದು (ಕನಿಷ್ಠ ಮಟ್ಟ) |
| ಹೂಡಿಕೆ ಅಪಾಯ | ಸಂಪೂರ್ಣ ನೌಕರರ ಮೇಲೆ | ಭಾಗಶಃ ಸರ್ಕಾರ ಹಂಚಿಕೆ |
| ನಿವೃತ್ತಿಯ ಭದ್ರತೆ | ಕಡಿಮೆ | ಹೆಚ್ಚು |
| ಸರ್ಕಾರದ ಹೊಣೆ | ಕಡಿಮೆ | ಮಧ್ಯಮ |
UPS ಯಶಸ್ಸು ಅದರ ಜಾರಿ ವಿಧಾನ, ಹಣಕಾಸು ರೂಪುರೇಷೆ ಮತ್ತು ಸರ್ಕಾರದ ಬದ್ಧತೆಯ ಮೇಲೆ ಅವಲಂಬಿತವಾಗಿರುತ್ತದೆ. ಆರ್ಥಿಕ ತಜ್ಞರ ಪ್ರಕಾರ,
OPS ಮರು ಜಾರಿಗೆ ಹೋಲಿಸಿದರೆ UPS ಸರ್ಕಾರಕ್ಕೆ ಕಡಿಮೆ ಹೊರೆ ನೀಡುವ ಮಾದರಿ. ಆದರೆ ಜನಸಂಖ್ಯೆಯ ವೃದ್ಧಾಪ್ಯ ಹೆಚ್ಚುತ್ತಿರುವ ಭಾರತದಲ್ಲಿ
ಪಿಂಚಣಿ ವೆಚ್ಚ ದೀರ್ಘಾವಧಿಯಲ್ಲಿ ಗಂಭೀರ ಸವಾಲಾಗಿ ಉಳಿಯಲಿದೆ. ಹೀಗಾಗಿ UPS ಕೇವಲ ರಾಜಕೀಯ ಘೋಷಣೆಯಾಗದೆ, ಆರ್ಥಿಕವಾಗಿ ಸಮರ್ಥ ವ್ಯವಸ್ಥೆಯಾಗಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ತಜ್ಞರು ಸೂಚಿಸುವಂತೆ, UPSಗೆ ಸ್ಪಷ್ಟ ಕಾನೂನು ಚೌಕಟ್ಟು ಕೊಟ್ಟು ಕನಿಷ್ಠ ಪಿಂಚಣಿ ಮೊತ್ತದ ಭರವಸೆ ಈಡೇರಿಸಬೇಕಾಗುತ್ತದೆ. ಆರೋಗ್ಯ ವಿಮೆ ಜೋಡಣೆ ಮಾಡಿ, ಪಾರದರ್ಶಕ ಹೂಡಿಕೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಹೊಸ ಪಿಂಚಣಿ ಯೋಜನೆ, ಸರ್ಕಾರದ ಹಣಕಾಸು ಶಿಸ್ತನ್ನು ಕಾಯ್ದುಕೊಂಡರೆ, ಏಕೀಕೃತ ಪಿಂಚಣಿ ಯೋಜನೆ ಪಿಂಚಣಿದಾರರ ಭದ್ರತೆಗೆ ಹೊಸ ಭರವಸೆ ನೀಡುವ ಪ್ರಯತ್ನವಾಗಿದೆ. ಪಿಂಚಣಿ ವ್ಯವಸ್ಥೆ ಎಂದರೆ ಕೇವಲ ಲೆಕ್ಕಪತ್ರವಲ್ಲ — ಅದು ನಿವೃತ್ತ ಜೀವನದ ಗೌರವ ಮತ್ತು ಭದ್ರತೆಯ ಪ್ರಶ್ನೆ. UPS ಮತ್ತು NPS ನಡುವಿನ ಸಮತೋಲನ ಸಾಧಿಸುವುದೇ ಭಾರತದ ಪಿಂಚಣಿ ಸುಧಾರಣೆಯ ನಿಜವಾದ ಸವಾಲಾಗಿದೆ.
