ಪ್ರತಿ ವರ್ಷ ಡಿಸೆಂಬರ್ 24ರಂದು ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ದಿನ (National Consumer Day) ಆಚರಿಸಲಾಗುತ್ತದೆ. ಗ್ರಾಹಕರ ಹಕ್ಕುಗಳು, ಜವಾಬ್ದಾರಿಗಳು ಮತ್ತು ಅವರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ ಈ ದಿನದ ಮುಖ್ಯ ಉದ್ದೇಶ. “ಜಾಗೃತ ಗ್ರಾಹಕ – ಶಕ್ತಿಶಾಲಿ ಮಾರುಕಟ್ಟೆ” ಎಂಬುದು ಈ ದಿನದ ತತ್ವ.

ರಾಷ್ಟ್ರೀಯ ಗ್ರಾಹಕ ದಿನದ ಹಿನ್ನೆಲೆ

ಆಕೆ ಬೆಳಗೆ ಎದ್ದು ನೋಡುತ್ತಾಳೆ ಮುಖವೆಲ್ಲ ಗುಳ್ಳೆಗಳಾಗಿದ್ದವು. ಅದು ಹಿಂದಿನ ದಿನವಷ್ಟೆ ಪಕ್ಕದ ಬ್ಯೂಟಿಪಾರ್ಲರ್ ನಲ್ಲಿ ಹಚ್ಚಿಸಿಕೊಂಡ ಫೇಶಿಯಲ್ ಪರಿಣಾಮ ಎನ್ನುವುದು ಅರ್ಥವಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ತಕ್ಷಣವೇ ವೈದ್ಯಕೀಯ ಪ್ರಮಾಣ ಪತ್ರ ಹಿಡಿದು ಹತ್ತಿರದ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದಳು. ಸುಮಾರು ಒಂದು ವರ್ಷ ಕಾಲದ ಹೋರಾಟದ ನಂತರ ನ್ಯಾಯಾಲಯ ಈಕೆಯ ಪರವಾಗಿ ನ್ಯಾಯ ತೀರ್ಮಾನಿಸಿತು. ಅವಧಿ ಮೀರಿದ ಕ್ರೀಂ ಹಚ್ಚಿ ಗ್ರಾಹಕನಿಗೆ ನಷ್ಟ ಉಂಟುಮಾಡಿದ್ದಕ್ಕಾಗಿ ಆ ಬ್ಯೂಟಿ ಪಾರ್ಲರ್ ಈಕೆಗೆ ದಂಡರೂಪದಲ್ಲಿ ದೊಡ್ಡ ಮೊತ್ತವನ್ನೂ ನೀಡುವಂತಾಯಿತು.

ಇನ್ನೊಂದು ಪ್ರಕರಣದಲ್ಲಿ ಆನ್ ಲೈನ್ ಶಾಪಿಂಗ್ ಸೈಟ್ ಒಂದರಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ ಒಬ್ಬ. ಅವನ ಮೊಬೈಲ್ ಬದಲು ಎರಡು ಬಾಟಲಿ ಕೋಲ್ಡ್ ಡ್ರಿಂಕ್ಸ್ ಬಂದಿತ್ತು. ಆತ ಆ ಶಾಪಿಂಗ್ ಸೈಟ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ. ಆದರೆ ಅವರು ನೀವು ಕೊಳ್ಳುವಾಗಲೇ ನೋಡಿಕೊಳ್ಳಬೇಕಿತ್ತು, ಇದು ಹಿಂಪಡೆಯಲಾಗದ ಆರ್ಡರ್ ಎಂದು ಕೈತೊಳೆದುಕೊಂಡರು. ಈತ ಸರಿಯಾದ ದಾಖಲೆಯಿಟ್ಟು ಗ್ರಾಹಕ ನ್ಯಾಯಾಲಯದ ಮೊರೆ ಹೋದ. ಸುಮಾರು ಒಂದೂವರೆ ವರ್ಷಗಳ ಹೋರಾಟದ ನಂತರ ತನ್ನ ಪರ ನ್ಯಾಯ ಮತ್ತು ದಂಡ ಎರಡನ್ನೂ ಆ ಶಾಪಿಂಗ್ ಸೈಟ್ ನಿಂದ ಪಡೆದ.

ಹೀಗೆ ಹತ್ತು ಹಲವು ಸಂದರ್ಭಗಳಲ್ಲಿ ಗ್ರಾಹಕ ಮೋಸ ಹೋಗುತ್ತಾನೆ. ನ್ಯಾಯ ವಿಳಂಬ, ಖರ್ಚು ಎಂತೆಲ್ಲ ಯೋಚಿಸಿಕೊಂಡು ಎಷ್ಟೋ ಗ್ರಾಹಕರು ತಮಗಾದ ಅನ್ಯಾಯವನ್ನು ನುಂಗಿಕೊಳ್ಳುತ್ತಾರೆ. ಆದರೆ ಸುಭದ್ರ ಆರ್ಥಿಕ ವ್ಯವಸ್ಥೆ, ವಿಶ್ವಸನೀಯ ವ್ಯಾಪಾರಿ ನಡವಳಿಕೆ ಮತ್ತು ಶಕ್ತಿಶಾಲಿ ಮಾರುಕಟ್ಟೆ ನಿರ್ಮಾಣಕ್ಕೆ ಜಾಗೃತ ಗ್ರಾಹಕನೇ ಮೊದಲ ತಳಪಾಯ. ಆ ಹಿನ್ನೆಲೆಯಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಮಹತ್ವದ್ದಾಗಿದೆ.

1986ರ ಡಿಸೆಂಬರ್ 24ರಂದು ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ (Consumer Protection Act) ಜಾರಿಗೆ ಬಂದಿದೆ. ಈ ದಿನದ ಸ್ಮರಣಾರ್ಥ ಜಾಗೃತಿ ಮೂಡಿಸಲು ರಾಷ್ಟ್ರೀಯ ಗ್ರಾಹಕ ದಿನವನ್ನು ಆಚರಿಸಲಾಗುತ್ತದೆ. ಈ ಕಾಯ್ದೆ ಗ್ರಾಹಕರಿಗೆ ನ್ಯಾಯ, ಸುರಕ್ಷತೆ ಮತ್ತು ಪರಿಹಾರ ಪಡೆಯುವ ಹಕ್ಕನ್ನು ಒದಗಿಸಿದೆ.

ಗ್ರಾಹಕ ಅಂದರೆ ಯಾರು?

ಯಾವ ವ್ಯಕ್ತಿ ಅಥವಾ ಸಂಸ್ಥೆ ವಸ್ತುಗಳನ್ನು ಖರೀದಿಸಿದರೆ, ಸೇವೆಗಳನ್ನು ಪಡೆದರೆ ಅವರು ಗ್ರಾಹಕ ಎಂದು ಪರಿಗಣಿಸಲ್ಪಡುತ್ತಾರೆ.

ಗ್ರಾಹಕರ ಮೂಲಭೂತ ಹಕ್ಕುಗಳು

ಭಾರತೀಯ ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಕಾರ ಗ್ರಾಹಕರಿಗೆ ಈ ಕೆಳಗಿನ ಪ್ರಮುಖ ಹಕ್ಕುಗಳಿವೆ:

  1. ಸುರಕ್ಷತೆಯ ಹಕ್ಕು – ಅಪಾಯಕಾರಿ ವಸ್ತುಗಳು ಮತ್ತು ಸೇವೆಗಳಿಂದ ರಕ್ಷಣೆ
  2. ಮಾಹಿತಿ ಪಡೆಯುವ ಹಕ್ಕು – ಗುಣಮಟ್ಟ, ಬೆಲೆ, ಪ್ರಮಾಣದ ಬಗ್ಗೆ ಸಂಪೂರ್ಣ ಮಾಹಿತಿ
  3. ಆಯ್ಕೆ ಮಾಡುವ ಹಕ್ಕು – ವಿವಿಧ ಆಯ್ಕೆಗಳ ನಡುವೆ ಆಯ್ದುಕೊಳ್ಳುವ ಸ್ವಾತಂತ್ರ್ಯ
  4. ಆಲಿಸಿಕೊಳ್ಳುವ ಹಕ್ಕು – ದೂರುಗಳಿಗೆ ಸ್ಪಂದನೆ ಸಿಗುವ ಹಕ್ಕು
  5. ಪರಿಹಾರ ಪಡೆಯುವ ಹಕ್ಕು – ವಂಚನೆ ಅಥವಾ ದೋಷಪೂರ್ಣ ಸೇವೆಗೆ ನ್ಯಾಯ
  6. ಗ್ರಾಹಕ ಶಿಕ್ಷಣ ಹಕ್ಕು – ಗ್ರಾಹಕ ಅರಿವು ಪಡೆಯುವ ಅವಕಾಶ

ಇಂದಿನ ಕಾಲದಲ್ಲಿ ಗ್ರಾಹಕ ಜಾಗೃತಿಯ ಅಗತ್ಯ ಏಕೆ?

ಡಿಜಿಟಲ್ ಯುಗದಲ್ಲಿ:

  • ಆನ್‌ಲೈನ್ ಶಾಪಿಂಗ್
  • ಫೇಕ್ ಜಾಹೀರಾತುಗಳು
  • ನಕಲಿ ಉತ್ಪನ್ನಗಳು
  • ಡಿಜಿಟಲ್ ವಂಚನೆಗಳು

ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಜಾಗೃತ ಗ್ರಾಹಕ ಮಾತ್ರ ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯ.

ಗ್ರಾಹಕರ ಜವಾಬ್ದಾರಿಗಳು

ಹಕ್ಕುಗಳ ಜೊತೆಗೆ ಗ್ರಾಹಕರಿಗೂ ಜವಾಬ್ದಾರಿಗಳಿವೆ:

  • ಖರೀದಿ ಮೊದಲು ಮಾಹಿತಿ ಪರಿಶೀಲನೆ
  • ಬಿಲ್/ರಸೀದಿ ಕಡ್ಡಾಯವಾಗಿ ಪಡೆಯುವುದು
  • ತಪ್ಪು ಕಂಡಲ್ಲಿ ಮೌನವಾಗಿರದೇ ದೂರು ಸಲ್ಲಿಸುವುದು
  • ತಪ್ಪು ಜಾಹೀರಾತುಗಳಿಗೆ ಒಳಗಾಗದಂತೆ ಎಚ್ಚರಿಕೆ ವಹಿಸುವುದು

ದೂರು ಸಲ್ಲಿಸಲು ಸರ್ಕಾರದ ವ್ಯವಸ್ಥೆ

ಗ್ರಾಹಕರು ಯಾವುದೇ ಸಮಸ್ಯೆ ಎದುರಿಸಿದಲ್ಲಿ:

  • ಜಿಲ್ಲಾ ಗ್ರಾಹಕ ನ್ಯಾಯಾಲಯ
  • ರಾಜ್ಯ ಗ್ರಾಹಕ ಆಯೋಗ
  • ರಾಷ್ಟ್ರೀಯ ಗ್ರಾಹಕ ಆಯೋಗ
  • National Consumer Helpline – 1915
  • online portal: consumerhelpline.gov.in ಮೂಲಕ ದೂರು ಸಲ್ಲಿಸಬಹುದು.

ಗ್ರಾಹಕರು ಎದುರಿಸುವ ನಷ್ಟದ ಮೊತ್ತದ ಆಧಾರದ ಮೇಲೆ ಯಾವ ಮಟ್ಟದ ಗ್ರಾಹಕ ಯಾವ ನ್ಯಾಯಾಲಯದಲ್ಲಿ ದೂರು ಸಲ್ಲಿಸಬೇಕು ಎಂಬುದನ್ನು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ. ಇದು ಗ್ರಾಹಕ ಸಂರಕ್ಷಣಾ ಕಾಯ್ದೆ–2019ರ ಅಡಿಯಲ್ಲಿ ಜಾರಿಯಲ್ಲಿದೆ.

ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ (District Consumer Court)

  • ನಷ್ಟದ ಮೊತ್ತ: ₹1 ಕೋಟಿವರೆಗೆ
  • ಯಾರಿಗೆ ಅನ್ವಯ: ಸ್ಥಳೀಯ ಮಟ್ಟದಲ್ಲಿ ವಸ್ತು ಅಥವಾ ಸೇವೆಯಿಂದ ನಷ್ಟ ಅನುಭವಿಸಿದ ಗ್ರಾಹಕರು
  • ಉದಾಹರಣೆ: ದೋಷಪೂರ್ಣ ಮೊಬೈಲ್, ಮನೆ ಬಳಕೆ ವಸ್ತುಗಳು, ಆಸ್ಪತ್ರೆ ಸೇವೆಯಲ್ಲಿನ ನಿರ್ಲಕ್ಷ್ಯ, ಸ್ಥಳೀಯ ಬಿಲ್ಡರ್ ಸಮಸ್ಯೆಗಳು

ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗ (State Consumer Commission)

  • ನಷ್ಟದ ಮೊತ್ತ: ₹1 ಕೋಟಿಯಿಂದ ₹10 ಕೋಟಿವರೆಗೆ
  • ಯಾರಿಗೆ ಅನ್ವಯ: ದೊಡ್ಡ ಮೊತ್ತದ ವಂಚನೆ, ಬಹುರಾಜ್ಯ ಸೇವಾ ಸಂಸ್ಥೆಗಳ ವಿರುದ್ಧದ ದೂರುಗಳು
  • ಉದಾಹರಣೆ: ದೊಡ್ಡ ಬಿಲ್ಡರ್ ಯೋಜನೆಗಳು, ವಿಮಾ ಕಂಪನಿ ವಿವಾದಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ವಂಚನೆ

ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ (National Consumer Commission – NCDRC)

  • ನಷ್ಟದ ಮೊತ್ತ: ₹10 ಕೋಟಿಗಿಂತ ಹೆಚ್ಚು
  • ಯಾರಿಗೆ ಅನ್ವಯ: ಅತ್ಯಂತ ದೊಡ್ಡ ಕಾರ್ಪೊರೇಟ್ ಕಂಪನಿಗಳು, ರಾಷ್ಟ್ರಮಟ್ಟದ ಸೇವಾ ದೋಷಗಳು
  • ಉದಾಹರಣೆ: ಏರ್‌ಲೈನ್ಸ್, ದೊಡ್ಡ ಹಣಕಾಸು ಸಂಸ್ಥೆಗಳು, ರಾಷ್ಟ್ರಮಟ್ಟದ ರಿಯಲ್ ಎಸ್ಟೇಟ್ ವಂಚನೆ

ಗ್ರಾಹಕರಿಗೆ ಇದರಿಂದ ಏನು ಲಾಭ?

  • ನ್ಯಾಯಾಲಯದ ಆಯ್ಕೆ ಕುರಿತು ಗೊಂದಲ ಕಡಿಮೆಯಾಗುತ್ತದೆ
  • ಸಮಯ ಮತ್ತು ವೆಚ್ಚ ಉಳಿತಾಯವಾಗುತ್ತದೆ
  • ಸಾಮಾನ್ಯ ನಾಗರಿಕನಿಗೂ ನ್ಯಾಯದ ಬಾಗಿಲು ಸುಲಭವಾಗಿ ತೆರೆದುಕೊಳ್ಳುತ್ತದೆ
  • “ದೊಡ್ಡ ಕಂಪನಿ” ಎಂಬ ಭಯವಿಲ್ಲದೆ ದೂರು ನೀಡುವ ಧೈರ್ಯ ಮೂಡುತ್ತದೆ

ರಾಷ್ಟ್ರೀಯ ಗ್ರಾಹಕ ದಿನವು ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತದೆ. ವ್ಯಾಪಾರದಲ್ಲಿ ಪಾರದರ್ಶಕತೆ ತರಲು ಸಹಾಯಕವಾಗುತ್ತದೆ. ನೈತಿಕ ವ್ಯಾಪಾರ ಪದ್ಧತಿಗಳನ್ನು ಉತ್ತೇಜಿಸುತ್ತದೆ ಮತ್ತು ಗ್ರಾಹಕರನ್ನು ಶಕ್ತಿಶಾಲಿಗಳಾಗಿಸುತ್ತದೆ. ಗ್ರಾಹಕರು ಜಾಗೃತರಾದಷ್ಟೂ ಮಾರುಕಟ್ಟೆ ವ್ಯವಸ್ಥೆ ಆರೋಗ್ಯಕರವಾಗುತ್ತದೆ. ರಾಷ್ಟ್ರೀಯ ಗ್ರಾಹಕ ದಿನವು ಕೇವಲ ಆಚರಣೆಗಾಗಿ ಮಾತ್ರವಲ್ಲ, ಪ್ರತಿ ನಾಗರಿಕನು ತನ್ನ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳುವ ದಿನವಾಗಬೇಕು. ಜಾಗೃತ ಗ್ರಾಹಕರಿಂದಲೇ ನ್ಯಾಯಯುತ ಸಮಾಜ ನಿರ್ಮಾಣ ಸಾಧ್ಯ.

Author

  • ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

By Sheela Bhat

ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

Leave a Reply

Your email address will not be published. Required fields are marked *